ಕರ್ನಾಟಕ

karnataka

ETV Bharat / bharat

ಜೈಲಿನಿಂದ ಬಿಡುಗಡೆಯಾದ ಪ್ರಶಾಂತ್ ಕಿಶೋರ್​ಗೆ ಅನಾರೋಗ್ಯ: ಆಸ್ಪತ್ರೆಗೆ ದಾಖಲು - PRASHANT KISHOR HOSPITALIZED

ಪ್ರಶಾಂತ್ ಕಿಶೋರ್ ಪಾಟ್ನಾದ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಪ್ರಶಾಂತ್ ಕಿಶೋರ್
ಪ್ರಶಾಂತ್ ಕಿಶೋರ್ (ians)

By ETV Bharat Karnataka Team

Published : Jan 7, 2025, 3:20 PM IST

Updated : Jan 7, 2025, 3:30 PM IST

ಪಾಟ್ನಾ: ಬಿಹಾರ ಲೋಕಸೇವಾ ಆಯೋಗದ (ಬಿಪಿಎಸ್​ಸಿ) ಪರೀಕ್ಷಾರ್ಥಿಗಳನ್ನು ಬೆಂಬಲಿಸಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದ ಪ್ರಶಾಂತ್ ಕಿಶೋರ್ ಅವರ ಆರೋಗ್ಯ ಹದಗೆಟ್ಟಿದ್ದರಿಂದ ಅವರನ್ನು ಮಂಗಳವಾರ ಬೆಳಿಗ್ಗೆ ಆಸ್ಪತ್ರೆಗೆ ದಾಖಲಿಸಲಾಗಿದೆ. ರಾಜಕೀಯ ತಂತ್ರಜ್ಞ ಕಿಶೋರ್ ಜನವರಿ 2ರಂದು ಉಪವಾಸ ಸತ್ಯಾಗ್ರಹ ಆರಂಭಿಸಿದ್ದರು.

ಸೋಮವಾರ ಸಂಜೆ ಬೇಯೂರ್ ಜೈಲಿನಿಂದ ಬಿಡುಗಡೆಯಾದ ಕಿಶೋರ್ ಅನಾರೋಗ್ಯಕ್ಕೊಳಗಾಗಿದ್ದರು. ಶೇಖಪುರ್​ನ ತಮ್ಮ ನಿವಾಸದಲ್ಲಿದ್ದ ಕಿಶೋರ್ ಅವರನ್ನು ಆಂಬ್ಯುಲೆನ್ಸ್ ಮೂಲಕ ಪಾಟ್ನಾದ ಮೇದಾಂತ ಆಸ್ಪತ್ರೆಗೆ ದಾಖಲಿಸಲಾಗಿದೆ.

ದೀರ್ಘಕಾಲದ ಉಪವಾಸದಿಂದಾಗಿ ಕಿಶೋರ್ ನಿರ್ಜಲೀಕರಣದಿಂದ ಬಳಲುತ್ತಿದ್ದಾರೆ ಎಂದು ಆಂಬ್ಯುಲೆನ್ಸ್ ಜೊತೆಗಿದ್ದ ವೈದ್ಯರು ಹೇಳಿದ್ದಾರೆ. "ಅವರು ಹಲವಾರು ದಿನಗಳಿಂದ ಆಹಾರವನ್ನು ಸೇವಿಸಿಲ್ಲ. ಇದರಿಂದ ಅವರಿಗೆ ನಿರ್ಜಲೀಕರಣ, ಜಠರದುರಿತ ಮತ್ತು ಹೊಟ್ಟೆ ನೋವು ಕಾಣಿಸಿಕೊಂಡಿದೆ" ಎಂದು ವೈದ್ಯರು ತಿಳಿಸಿದ್ದಾರೆ. ಮೇದಾಂತ ಆಸ್ಪತ್ರೆಯ ವೈದ್ಯರ ತಂಡವು ಅವರ ಸಂಪೂರ್ಣ ಆರೋಗ್ಯ ಮೌಲ್ಯಮಾಪನ ನಡೆಸುತ್ತಿದೆ.

70 ನೇ ಬಿಪಿಎಸ್​ಸಿ ಪರೀಕ್ಷೆಯನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ಕಿಶೋರ್ ಪಾಟ್ನಾದ ಗಾಂಧಿ ಮೈದಾನದಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದರು. ಆದರೆ ಸೋಮವಾರ ಮುಂಜಾನೆ ಪೊಲೀಸರು ಅವರನ್ನು ಬಂಧಿಸಿದ್ದರು.

ಬಂಧನದ ನಂತರ, ಕಿಶೋರ್ ಅವರನ್ನು ಪಾಟ್ನಾ ಸಿವಿಲ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ನಂತರ ನ್ಯಾಯಾಲಯ ಅವರಿಗೆ 25,000 ರೂ.ಗಳ ಬಾಂಡ್ ಮೇಲೆ ಷರತ್ತುಬದ್ಧ ಜಾಮೀನು ನೀಡಿತ್ತು. ಆದರೆ ಜಾಮೀನಿನ ಷರತ್ತುಗಳನ್ನು ಒಪ್ಪಲು ನಿರಾಕರಿಸಿದ ಕಿಶೋರ್ ನ್ಯಾಯಾಂಗ ಬಂಧನಕ್ಕೊಳಗಾಗಿದ್ದರು. ಭವಿಷ್ಯದಲ್ಲಿ ಇಂಥ ಪ್ರತಿಭಟನೆಗಳಲ್ಲಿ ಭಾಗವಹಿಸದಂತೆ ನ್ಯಾಯಾಲಯ ಷರತ್ತು ವಿಧಿಸಿತ್ತು. ಆದರೆ ಸತ್ಯಾಗ್ರಹದ ಸಿದ್ಧಾಂತದಲ್ಲಿ ನಂಬಿಕೆ ಇಟ್ಟಿರುವ ತಾವು ಈ ಷರತ್ತು ಒಪ್ಪಲ್ಲ ಎಂದಿದ್ದರು.

"ನಾನು ಮತ್ತೆ ಆ ಪ್ರತಿಭಟನೆಯಲ್ಲಿ ಭಾಗವಹಿಸುವುದಿಲ್ಲ ಎಂಬ ಷರತ್ತಿನ ಮೇಲೆ ನನಗೆ ಜಾಮೀನು ನೀಡಲಾಯಿತು. ಆದರೆ ಮೂಲಭೂತ ಹಕ್ಕು ಮತ್ತು ನ್ಯಾಯಕ್ಕಾಗಿ ಈ ಪ್ರತಿಭಟನೆ ನಡೆಯುತ್ತಿದೆ. ಮಹಿಳೆಯರು ಮತ್ತು ಯುವಕರ ಮೇಲೆ ಲಾಠಿ ಪ್ರಹಾರದಂತಹ ಅನ್ಯಾಯಗಳ ವಿರುದ್ಧ ಧ್ವನಿ ಎತ್ತುವುದು ಬಿಹಾರದಲ್ಲಿ ಅಪರಾಧವಾಗಿದ್ದರೆ, ನಾನು ಜೈಲಿಗೆ ಹೋಗಲು ಸಿದ್ಧನಿದ್ದೇನೆ. ಬಿಹಾರವು ಮಹಾತ್ಮ ಗಾಂಧಿ ಸತ್ಯಾಗ್ರಹ ಮಾಡಿದ ಸ್ಥಳವಾಗಿದೆ ಮತ್ತು ಇಲ್ಲಿ ಅದೇ ರೀತಿ ಸತ್ಯಾಗ್ರಹ ಮಾಡುವುದು ಅಪರಾಧವಾಗಿದ್ದರೆ, ನಾನು ಅಂಥ ಅಪರಾಧ ಮಾಡಲು ಸಿದ್ಧನಿದ್ದೇನೆ" ಎಂದು ಕಿಶೋರ್ ಘೋಷಿಸಿದರು.

ಷರತ್ತುಬದ್ಧ ಜಾಮೀನು ನಿರಾಕರಿಸಿದ ನಂತರ, ಕಿಶೋರ್ ಅವರನ್ನು ಪಾಟ್ನಾ ಪೊಲೀಸರು 14 ದಿನಗಳ ನ್ಯಾಯಾಂಗ ಬಂಧನದಲ್ಲಿರಿಸಿದರು. ಆದರೆ ನಂತರ ನ್ಯಾಯಾಲಯ ಅವರಿಗೆ ಬೇಷರತ್ತಾದ ಜಾಮೀನು ನೀಡಿತ್ತು. ಹೀಗಾಗಿ ಸೋಮವಾರ ರಾತ್ರಿ ಅವರನ್ನು ಬೇಯೂರ್ ಕೇಂದ್ರ ಕಾರಾಗೃಹದಿಂದ ಬಿಡುಗಡೆ ಮಾಡಲಾಯಿತು.

ಇದನ್ನೂ ಓದಿ : ಕುಂಭಮೇಳ: ಗೋ ರಕ್ಷಣೆ ಜಾಗೃತಿಗಾಗಿ 324 ಕುಂಡಗಳಲ್ಲಿ ಮಹಾಯಜ್ಞ, 1100 ಪುರೋಹಿತರು ಭಾಗಿ - MAHA KUMBH MELA 2025

Last Updated : Jan 7, 2025, 3:30 PM IST

ABOUT THE AUTHOR

...view details