ನವದೆಹಲಿ:ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಸ್ಮಾರಕ ನಿರ್ಮಾಣ ಮಾಡುವ ಕುರಿತು ಬಿಜೆಪಿ ಮತ್ತು ಕಾಂಗ್ರೆಸ್ ಮಧ್ಯೆ ಮಾತಿನ ಯುದ್ಧ ನಡೆಯುತ್ತಿದ್ದರೆ, ಇತ್ತ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಪುತ್ರಿ ಕಾಂಗ್ರೆಸ್‌ನ ಇಬ್ಬಗೆ ನೀತಿಯ ವಿರುದ್ಧ ಕಿಡಿಕಾರಿದ್ದಾರೆ.
ಡಾ.ಸಿಂಗ್ ಅವರ ಸ್ಮಾರಕವನ್ನು ಅಂತ್ಯಕ್ರಿಯೆ ನಡೆಸಲಾದ ನಿಗಮ್ ಬೋಧ್ ಘಾಟ್‌ನಲ್ಲಿ ನಿರ್ಮಿಸಬೇಕು ಎಂದು ಕಾಂಗ್ರೆಸ್ ಕೋರಿದೆ. ಕುಟುಂಬಸ್ಥರ ಜೊತೆ ಮಾತುಕತೆ ನಡೆಸಿ ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ಕೇಂದ್ರ ಸರ್ಕಾರ ಹೇಳಿದೆ.
ಸಂತಾಪ ಸಭೆ ಕೂಡ ನಡೆಸಲಿಲ್ಲ:ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರಿಗೆ ಪ್ರತ್ಯೇಕ ಸ್ಮಾರಕ ನಿರ್ಮಾಣ ಕೋರಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಬರೆದಿರುವ ಪತ್ರವನ್ನ ಟೀಕಿಸಿ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಪ್ರಣಬ್ ಮುಖರ್ಜಿ ಅವರ ಪುತ್ರಿ ಶರ್ಮಿಷ್ಠಾ ಮುಖರ್ಜಿ ಅವರು, ನನ್ನ ತಂದೆ ಮತ್ತು ಭಾರತದ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು 2020ರ ಆಗಸ್ಟ್ನಲ್ಲಿ ನಿಧನರಾದಾಗ, ಕಾಂಗ್ರೆಸ್ ಪಕ್ಷವು ಕನಿಷ್ಠ ತನ್ನ ಕಾರ್ಯಕಾರಿ ಸಮಿತಿಯಲ್ಲಿ (CWC) ಸಂತಾಪ ಸೂಚಕ ಸಭೆಯನ್ನೂ ನಡೆಸಲಿಲ್ಲ ಎಂದು ಬೇಸರಿಸಿದ್ದಾರೆ.
ತಮ್ಮ ತಂದೆಯವರ ಸ್ಮಾರಕಕ್ಕಾಗಿ ಕಾಂಗ್ರೆಸ್ ಎಂದೂ ಧ್ವನಿ ಎತ್ತಿಲಿಲ್ಲ ಯಾಕೆ?. ಈ ಬಗ್ಗೆ ಆ ಪಕ್ಷದ ನಾಯಕರು ನನ್ನ ದಾರಿ ತಪ್ಪಿಸಿದರು. ರಾಷ್ಟ್ರಪತಿಗಳಿಗೆ ಸಂತಾಪ ಸೂಚಕ ಸಭೆ ಮತ್ತು ಸ್ಮಾರಕ ನಿರ್ಮಾಣದ ಪದ್ಧತಿ ಇಲ್ಲ ಎಂದು ಹೇಳಿದ್ದರು ಎಂದು ಆರೋಪಿಸಿದ್ದಾರೆ.