ನವದೆಹಲಿ:ದೇಶದ ಅತ್ಯಂತ ಪ್ರಭಾವಿ ರಾಜಕಾರಣಿಗಳ ಪಟ್ಟಿಯನ್ನು ಮಾಧ್ಯಮ ಸಂಸ್ಥೆಯೊಂದು ಬಿಡುಗಡೆ ಮಾಡಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಮೊದಲ ಸ್ಥಾನದಲ್ಲಿದ್ದಾರೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಮುಖ್ಯಸ್ಥರಾದ ಮೋಹನ್ ಭಾಗವತ್ ಎರಡನೇ, ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಅವರ ಮೂರನೇ ಪವರ್ಫುಲ್ ರಾಜಕಾರಣಿಯಾಗಿದ್ದಾರೆ.
ದೇಶದ ರಾಜಕೀಯ ಸ್ಥಿತಿ ಮತ್ತು 2024 ರಲ್ಲಿ ನಾಯಕರ ಕಾರ್ಯಕ್ಷಮತೆ ಆಧರಿಸಿ ಈ ಸಮೀಕ್ಷೆ ನಡೆಸಲಾಗಿದೆ. ಅದರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ವರ್ಚಸ್ಸಿಗೆ ಧಕ್ಕೆ ಬಂದಿಲ್ಲ ಎಂದು ತಿಳಿಸಿದೆ.
60 ವರ್ಷಗಳ ದಾಖಲೆ ಪುಡಿ:ಮೋದಿ ಅವರು ಸತತ ಮೂರನೇ ಬಾರಿಗೆ ಪ್ರಧಾನಿಯಾಗಿ ಆಯ್ಕೆಯಾಗುವ ಮೂಲಕ 60 ವರ್ಷಗಳ ದಾಖಲೆಯನ್ನು ತಿದ್ದಿ ಬರೆದಿದ್ದಾರೆ. ಒಂದೆಡೆ ಅಮೆರಿಕ, ಇನ್ನೊಂದೆಡೆ ರಷ್ಯಾ, ಉಕ್ರೇನ್, ಇಸ್ರೇಲ್ ಜೊತೆಗೆ ಸೌಹಾರ್ದ ಸಂಬಂಧವನ್ನು ಏಕಕಾಲಕ್ಕೆ ಉಳಿಸಿಕೊಂಡು ಭಾರತದ ಆರ್ಥಿಕತೆಯನ್ನು 4 ಟ್ರಿಲಿಯನ್ ಡಾಲರ್ ಮಟ್ಟಕ್ಕೆ ಕೊಂಡೊಯ್ದಿದ್ದಾರೆ. ಇದು ಅವರ ವರ್ಚಸ್ಸನ್ನು ಹೆಚ್ಚಿಸಿದೆ ಎಂದಿದೆ ಸಮೀಕ್ಷೆ.
ಪ್ರಧಾನಿಯ ಕಣ್ಣು ಮತ್ತು ಕಿವಿ:ಪ್ರಧಾನಿ ಮೋದಿ ನಂತರ ಕೇಂದ್ರ ಸರ್ಕಾರದಲ್ಲಿ ಅತ್ಯಂತ ಪ್ರಭಾವಿ ವ್ಯಕ್ತಿ ಎಂದು ಹೆಸರಾಗಿರುವ ಅಮಿತ್ ಶಾ ಅವರು ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಅವರು ಪ್ರಧಾನಿಯ ಕಣ್ಣು ಮತ್ತು ಕಿವಿಯಂತೆ ಕೆಲಸ ಮಾಡುತ್ತಾರೆ. ಕೇಂದ್ರದ ಪ್ರತಿಯೊಂದು ನಿರ್ಧಾರವು ಅವರ ಅನುಮೋದನೆಯ ನಂತರ ಜಾರಿಗೆ ಬರುತ್ತದೆ.