ಕೊಂಡಗಾಂವ್ (ಛತ್ತೀಸ್ಗಢ): ದೀಪಗಳ ಸಂಭ್ರಮದ ಹಬ್ಬ ದೀಪಾವಳಿಯಲ್ಲಿ ಮನೆಯ ಮುಂದೆ ಹಚ್ಚಿಟ್ಟ ದೀಪದಲ್ಲಿ ಪದೇ ಪದೇ ಎಣ್ಣೆ ಖಾಲಿಯಾಯ್ತಾ ಎಂದು ಪರೀಕ್ಷೆ ಮಾಡುವುದು ಸಹಜ. ಈ ದೀಪಗಳು ಸದಾ ಉರಿಯಬೇಕು ಎಂಬುದು ಅನೇಕರ ಆಸೆ. ಆದರೆ, ಎಣ್ಣೆ ಎಲ್ಲಿಂದ ತರುವುದು ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ.
ಕೊಂಡಗಾಂವ್ನ ನಿವಾಸಿ ಅಶೋಕ್ ಚಕ್ರಧಾರಿ ಮ್ಯಾಜಿಕ್ ದೀಪವೊಂದನ್ನು ಅವಿಷ್ಕರಿಸಿದ್ದಾರೆ. ಎಣ್ಣೆಯ ಸಹಾಯವಿಲ್ಲದೇ 24 ರಿಂದ 48ಗಂಟೆಗಳ ಕಾಲ ಇದು ಉರಿಯುತ್ತದೆ. ಕುಂಬಾರಿಕೆ ವೃತ್ತಿ ನಿಭಾಯಿಸುತ್ತಿರುವ ಅಶೋಕ್ ಅವರ ಈ ದೀಪ ಇದೀಗ ಎಂತಹವರಲ್ಲೂ ಅಚ್ಚರಿ ಮೂಡಿಸಿದೆ.
ಅಶೋಕ್ ಅವರ ಈ ವಿಶೇಷ ದೀಪಕ್ಕೆ ಇದೀಗ ಬೇಡಿಕೆ ಹೆಚ್ಚಿದ್ದು, ದೀಪಾವಳಿ ಸಮಯದಲ್ಲಿ ಜನರು ಮುಗಿ ಬಿದ್ದುಕೊಳ್ಳಲು ಮುಂದಾಗಿದ್ದಾರೆ. ಚೀನಿ ತಂತ್ರಜ್ಞಾನ ನಾಚಿಸುವಂತೆ ಮಾಡಿರುವ ಆಶೋಕ್ ಅವರ ಪ್ರಯತ್ನಕ್ಕೆ ಮೆಚ್ಚುಗೆ ಕೂಡ ವ್ಯಕ್ತವಾಗಿದೆ.
ಹೇಗೆ ಕಾರ್ಯ ನಿರ್ವಹಿಸುತ್ತದೆ ದೀಪ?: ಈ ದೀಪಗಳು ವ್ಯವಸ್ಥಿತ ಎಣ್ಣೆ ಭರ್ತಿ ತಂತ್ರಜ್ಞಾನ ಹೊಂದಿದೆ. ಅಂದರೆ, ದೀಪದ ಮೇಲ್ಭಾಗದಲ್ಲಿ ಒಂದು ಬಾರಿ ಎಣ್ಣೆ ಭರ್ತಿ ಮಾಡಬೇಕು. ಈ ದೀಪದ ಎಣ್ಣೆಯು ಇನ್ನೇನು ಮುಗಿಯುತ್ತಿದೆ ಎಂದಾಗ ದೀಪ ಮೇಲೆ ಇರುವ ಎಣ್ಣೆ ದೀಪದ ಕೆಳಭಾಗಕ್ಕೆ ತಲುಪುತ್ತದೆ. ಕೆಳಗಿನ ಭಾಗವು ತುಂಬಿದ ತಕ್ಷಣ, ಎಣ್ಣೆಯು ಮೇಲಿನಿಂದ ಸ್ವಯಂಚಾಲಿತವಾಗಿ ನಿಲ್ಲುತ್ತದೆ. ಇದರಿಂದ ದೀಪದಲ್ಲಿ ಎಣ್ಣೆ ಇದೆಯಾ ಎಂದು ನೋಡುವ ಕಷ್ಟ ತಪ್ಪಲಿದೆ. ಇನ್ನು ಅಶೋಕ್ ಚಕ್ರಧಾರಿ ಅವರ ಕೌಶಲ್ಯಕ್ಕೆ ರಾಷ್ಟ್ರೀಯ ಮೆರಿಟ್ ಪ್ರಶಸ್ತಿಯನ್ನು ಸಹ ಪಡೆದಿದ್ದಾರೆ.
ಭೋಪಾಲ್ನಿಂದ ಬಂದ ಐಡಿಯಾ: ಅಶೋಕ್ 35 ವರ್ಷದ ಹಿಂದೆ ಭೋಪಾಲ್ನಲ್ಲಿ ಒಂದು ಎಕ್ಸಿಬಿಷನ್ಗೆ ಹೋಗಿದ್ದರಂತೆ. ಅಲ್ಲಿ ಇದೇ ರೀತಿಯ ತಂತ್ರಜ್ಞಾನದ ದೀಪ ಕಂಡು ಬೆರಗಾದರಂತೆ. ಇದರಿಂದ ಸ್ಪೂರ್ತಿ ಪಡೆದು ಅದೇ ರೀತಿಯ ದೀಪ ಮಾಡಲು ಮುಂದಾಗಿದ್ದಾರೆ. ಈ ದೀಪಕ್ಕೆ ಅತ್ಯದ್ಬುತ ವಿನ್ಯಾಸವನ್ನು ಅಶೋಕ್ ನೀಡಲು ಆರಂಭಿಸಿದರು. ಹಲವು ವರ್ಷಗಳ ಪ್ರಯತ್ನದಿಂದ ಇದೀಗ ಅವರ ಕನಸು ಸಾಕಾರವಾಗಿದೆ. ಇದೀಗ ಹಲವು ರಾಜ್ಯಗಳಿಂದ ಅಶೋಕ್ ಅವರ ದೀಪಗಳಿಗೆ ಬೇಡಿಕೆ ಬರುತ್ತಿದೆ. ಪ್ರತಿನಿತ್ಯ ಈ ರೀತಿಯ 100 ದೀಪ ನಿರ್ಮಾಣ ಮಾಡುವಲ್ಲಿ ಅಶೋಕ್ ಬ್ಯುಸಿಯಾಗಿದ್ದು, ತಮ್ಮ ಶ್ರಮ ಸಾರ್ಥಕವಾಗಿದ ಭಾವ ಅವರಲ್ಲಿದೆ.
ಇದನ್ನೂ ಓದಿ:ದೀಪಾವಳಿಗೆ ಹಿತ್ತಾಳೆ ಹಣತೆಗಳು ಚಿನ್ನದಂತೆ ಫಳಫಳ ಹೊಳೆಯಲು ಇಲ್ಲಿವೆ ಟಿಪ್ಸ್