ನವದೆಹಲಿ:ದೀಪಾವಳಿ ಹಬ್ಬದ ಆಚರಣೆಯ ಬಳಿಕ ಇಂದು ರಾಷ್ಟ್ರ ರಾಜಧಾನಿಯಲ್ಲಿನ ವಾಯುಮಾಲಿನ್ಯ ಮತ್ತಷ್ಟು ಹದಗೆಟ್ಟಿದ್ದು, ಅತ್ಯಂತ ಕಳಪೆ ಮಟ್ಟಕ್ಕೆ ಕುಸಿತ ಕಂಡಿದೆ. ನಗರವಿಡೀ ವಿಷಕಾರಿ ಹೊಗೆಯ ಹೊದಿಕೆಯನ್ನು ಹೊದ್ದಂತಿದೆ. ಕೇಂದ್ರೀಯ ಮಾಲಿನ್ಯ ಮತ್ತು ನಿಯಂತ್ರಣ ಮಂಡಳಿಯ ಪ್ರಕಾರ ದೆಹಲಿಯಲ್ಲಿ ಇಂದು ಬೆಳಗ್ಗೆ 7:30ರವರೆಗೆ ಸರಾಸರಿ ವಾಯು ಗುಣಮಟ್ಟ ಸೂಚ್ಯಂಕ (AQI) 361 ರಷ್ಟಿದೆ.
ನಿಮಗೆ ತಿಳಿದರಿಲಿ AQI 100 ಮತ್ತು 100ಕ್ಕಿಂತ ಕಡಿಮೆ ಇದ್ದರೆ ಆರೋಗ್ಯಯುತ. ಅದಕ್ಕಿಂತ ಅಧಿಕವಿದ್ದರೆ ಅದು ಅಪಾಯಕಾರಿ. ದೆಹಲಿಯ AQI 300ಕ್ಕೂ ಅಧಿಕವಿದೆ. ದೆಹಲಿಯ ಹೆಚ್ಚಿನ ಪ್ರದೇಶಗಳು 350ಕ್ಕಿಂತ ಅಧಿಕ ವಾಯುಗುಣ ಮಟ್ಟ ಸೂಚ್ಯಂಕವನ್ನು ದಾಖಲಿಸಿದೆ.
ಪ್ರಮುಖ ಪ್ರದೇಶಗಳ AQI ಮಟ್ಟ ಹೀಗಿದೆ:
- ಅಲಿಪುರದಲ್ಲಿ AQI 353
- ಆನಂದ್ ವಿಹಾರ್ AQI 395
- ಅಶೋಕ್ ವಿಹಾರ್ AQI 387
- ಬವಾನಾ AQI 392
- ಬುರಾರಿ ಕ್ರಾಸಿಂಗ್ AQI 395
- ಚಾಂದಿನಿ ಚೌಕ್ AQI 395
- ಮಥುರಾ ರಸ್ತೆ AQI 371
- ಡಾ ಕರ್ಣಿ ಸಿಂಗ್ ಶೂಟಿಂಗ್ ರೇಂಜ್ AQI 372
- ಐಜಿಐ ಏರ್‌ಪೋರ್ಟ್ AQI 375
- ಐಟಿಒ AQI 334
- ಜಹಾಂಗೀರಪುರಿ AQI 390
- ಜವಾಹರಲಾಲ್ ನೆಹರು ಕ್ರೀಡಾಂಗಣ AQI 343
- ಲೋಧಿ ರಸ್ತೆ AQI 314
- ಮುಂಡ್ಕಾ AQI 374
- ನಜಫ್‌ಗಢ AQI 329
- ನೆಹರು ನಗರ AQI 385
- ಉತ್ತರ ಕ್ಯಾಂಪಸ್ AQI 390
- ದ್ವಾರಕಾ AQI 352
- ಓಖ್ಲಾ ಫೇಸ್ 2 AQI 369
- ಪಂಜಾಬಿ ಭಾಗ್ AQI 392
- ಶಾದಿಪುರ AQI 388
- ಸೋನಿಯಾ ವಿಹಾರ್ AQI 395
- ಶ್ರೀ ಅರಬಿಂದೋ ಮಾರ್ಗ AQI 314
- ವಜೀರ್‌ಪುರ AQI 389
ಕಣ್ಣು ತೆರೆಯುವುದು ಅಸಾಧ್ಯ: ಇಲ್ಲಿನ ಸೈಕ್ಲಿಸ್ಟ್ ಸ್ಟೀಫನ್ ದೆಹಲಿಯ ವಾಯುಗುಣದ ಭಯಾನಕತೆಯನ್ನು ಬಿಚ್ಚಿಟ್ಟಿದ್ದಾರೆ. "ದೀಪಾವಳಿ ಆಚರಣೆಯ ನಂತರ ದೆಹಲಿಯ ಇಂಡಿಯಾ ಗೇಟ್ ಮೂಲಕ ಹಾದುಹೋಗುವಾಗ ಗಮನಿಸಿದೆ ಇಡೀ ಪ್ರದೇಶ ಹೊಗೆಯಿಂದ ತುಂಬಿಕೊಂಡಿದೆ. ಇಲ್ಲಿನ AQI 317ರಲ್ಲಿ ದಾಖಲಾಗಿದೆ. ಮಾಲಿನ್ಯದಿಂದಾಗಿ ಭಯಾನಕ ಘಟನೆಗಳು ನಡೆಯುತ್ತಿವೆ. ಈ ಬಾರಿ ಗಾಳಿಯಲ್ಲಿನ ಮಾಲಿನ್ಯವು ಇದ್ದಕ್ಕಿದ್ದಂತೆ ಕಾಣಿಸಿಕೊಂಡಿದೆ. ಕೆಲವು ದಿನಗಳ ಹಿಂದೆ ಏನೂ ಇರಲಿಲ್ಲ".
"ಪರಿಣಾಮ ಈಗ ನನ್ನ ಸಹೋದರ ಅನಾರೋಗ್ಯಕ್ಕೆ ಒಳಗಾಗಿದ್ದಾನೆ. ನಾನು ನನ್ನ ಸಹೋದರನೊಂದಿಗೆ ನಿತ್ಯ ಸೈಕಲ್‌ನಲ್ಲಿ ಇಲ್ಲಿಗೆ ಬರುತ್ತಿದ್ದೆ. ಆದರೆ ಇತ್ತೀಚಿನ ಮಲಿನದಿಂದಾಗಿ ಆತನ ಆರೋಗ್ಯ ತೀವ್ರ ಹದಗೆಟ್ಟಿದೆ. ದೀಪಾವಳಿ ಹಿನ್ನೆಲೆ ನಿನ್ನೆ ಬಹಳಷ್ಟು ಪಟಾಕಿಗಳನ್ನು ಸಿಡಿಸಲಾಗಿದೆ. ಶಬ್ದಕ್ಕೆ ನನಗೆ ನಿದ್ರೆ ಕೂಡ ಸಾಧ್ಯವಾಗಲಿಲ್ಲ. ನಾವು ನಿಜವಾಗಿಯೂ ತೊಂದರೆಗೊಳಗಾಗಿದ್ದೇವೆ. ನನ್ನ ಸಹೋದರನಿಗೆ ಗಂಟಲು ನೋಯುತ್ತಿದ್ದು, ಉಸಿರಾಡಲು ಕಷ್ಟವಾಗುತ್ತಿದೆ. ಸೈಕ್ಲಿಂಗ್ ಮಾಡುವಾಗ ನಮಗೆ ಕಣ್ಣುಗಳನ್ನು ತೆರೆಯಲು ಸಹ ಕಷ್ಟವಾಗುತ್ತಿದೆ" ಎಂದು ವಿವರಿಸಿದ್ದಾರೆ.
ಮಹಾನಗರಗಳಲ್ಲಿ ಕೆಟ್ಟಿದೆ ವಾಯುಗುಣಮಟ್ಟ:ಈ ವಾಯುಮಾಲಿನ್ಯ ಕೇವಲ ದೆಹಲಿಯಲ್ಲಿ ಮಾತ್ರ ಸಮಸ್ಯೆಯಾಗಿಲ್ಲ, ಚೆನ್ನೈ ಮತ್ತು ಮುಂಬೈನಂತಹ ಮಹಾನಗರಗಳು ಸೇರಿದಂತೆ ಭಾರತದಾದ್ಯಂತ ಹಲವಾರು ಇತರ ನಗರಗಳಲ್ಲಿ ಕಳಪೆ ವಾಯುಗುಣಮಟ್ಟದ ಬಗ್ಗೆ ವರದಿಯಾಗಿದೆ.