ಪುಣೆ (ಮಹಾರಾಷ್ಟ್ರ): ಮಹಾರಾಷ್ಟ್ರದ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ತಮ್ಮ ಪ್ರೊಬೇಷನರಿ ಅವಧಿಯಲ್ಲೇ ಸಾಕಷ್ಟು ವಿವಾದಕ್ಕೆ ಸಿಲುಕಿದ್ದಾರೆ. ಈಗಾಗಲೇ ಅಧಿಕಾರ ದುರ್ಬಳಕೆಯಿಂದ ಒಂದು ಇಲಾಖೆಯಿಂದ ಮತ್ತೊಂದು ಇಲಾಖೆಗೆ ಎತ್ತಂಗಡಿಯಾಗಿದ್ಧಾರೆ. ಇದರ ನಡುವೆ ರೈತರಿಗೆ ಪೂಜಾ ಖೇಡ್ಕರ್ ಅವರ ತಾಯಿ ಪಿಸ್ತೂಲ್ ಹಿಡಿದು ಬೆದರಿಕೆ ಹಾಕಿರುವ ಹಳೆ ವಿಡಿಯೋವೊಂದು ಮುನ್ನಲೆಗೆ ಬಂದಿದೆ.
ಯುಪಿಎಸ್ಸಿ ಪರೀಕ್ಷೆಯಲ್ಲಿ 821ನೇ ರ‍್ಯಾಂಕ್ ಪಡೆದಿದ್ದ ಪೂಜಾ ಖೇಡ್ಕರ್ ಟ್ರೈನಿ ಐಎಎಸ್ ಆಗಿದ್ದಾರೆ. ಪುಣೆಯ ಸಹಾಯಕ ಜಿಲ್ಲಾಧಿಕಾರಿ ನೇಮಕಗೊಂಡಿದ್ದ ಪೂಜಾ ತಮ್ಮ ಖಾಸಗಿ ಕಾರಿನಲ್ಲಿ ಮೇಲೆ ಐಎಎಸ್ ಅಧಿಕಾರಿಗಳಿಗೆ ಸಿಗುವ ಕೆಂಪು ನೀಲಿ ಬಣ್ಣದ ದೀಪ ಅಳವಡಿಸಿಕೊಂಡಿದ್ದರು. ಈ ಮೂಲಕ ಅಧಿಕಾರ ದುರ್ಬಳಕೆ ಕಾರಣದಿಂದ ವಾಶಿಮ್ ಜಿಲ್ಲೆಗೆ ವರ್ಗಾಯಿಸಲಾಗಿದೆ. ಅಲ್ಲದೇ, ಖಾಸಗಿ ವಾಹನದ ಮೇಲೆ ಕೆಂಪು ದೀಪ ಬಳಸಿದ ಪೂಜಾ ವಿರುದ್ಧವೂ ಪುಣೆ ಸಂಚಾರ ಪೊಲೀಸರು ಕ್ರಮಕ್ಕೆ ಮುಂದಾಗಿದ್ದಾರೆ.
ಪೂಜಾ ತಂದೆ ದಿಲೀಪ್ ಖೇಡ್ಕರ್ ಸರ್ಕಾರಿ ನೌಕರಿಯಲ್ಲಿದ್ದು, ಕೋಟ್ಯಂತರ ರೂಪಾಯಿ ಆಸ್ತಿ ಸಂಪಾದಿಸಿದ್ದಾರೆ. ದಿಲೀಪ್ಗೆ ಸೇರಿದ ಅನೇಕ ಆಸ್ತಿಗಳಿವೆ. ಪುಣೆ ಜಿಲ್ಲೆಯ ಮುಲ್ಶಿ ತಾಲೂಕಿನಲ್ಲಿ 25 ಎಕರೆ ಭೂಮಿಯನ್ನು ಖರೀದಿಸಿದ್ದಾರೆ. ಜೊತೆಗೆ ರೈತರ ಭೂಮಿಯನ್ನು ಅತಿಕ್ರಮಿಸಲು ಪ್ರಯತ್ನಿಸಿದ್ದರು ಎಂದು ಮೂಲಗಳು ತಿಳಿಸಿವೆ. ಇದಕ್ಕೆ ಸಂಬಂಧಿಸಿದಂತೆ ಪೂಜಾ ತಾಯಿ ಮನೋರಮಾ ಖೇಡ್ಕರ್ ತಮ್ಮ ಬೌನ್ಸರ್‌ಗಳ ಸಹಾಯದಿಂದ ಮತ್ತು ಪಿಸ್ತೂಲ್ ಬಳಸಿ ರೈತರಿಗೆ ಬೆದರಿಕೆ ಹಾಕಿರುವ ವಿಡಿಯೋ ಬೆಳಕಿಗೆ ಬಂದಿದೆ. ಈ ವಿಡಿಯೋದಲ್ಲಿ ಮನೋರಮಾ ರೈತರೊಂದಿಗೆ ತೀವ್ರ ವಾಗ್ವಾದ ನಡೆಸುತ್ತಿರುವುದು ಸೆರೆಯಾಗಿದೆ.
ಈ ಕುರಿತು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ರೈತರು ಯತ್ನಿಸಿದರೂ, ಇದುವರೆಗೂ ದೂರು ದಾಖಲಾಗಿಲ್ಲ. ಇದೇ ವೇಳೆ ಖೇಡ್ಕರ್ ಕುಟುಂಬದ ಪರ ವಕೀಲ ರವೀಂದ್ರ ಸುತಾರ್, ವೈರಲ್ ವಿಡಿಯೋ ಕುರಿತು ಮಾತನಾಡಿ, ಈ ವಿಡಿಯೋ 2023ರ ಜೂನ್ ತಿಂಗಳದ್ದಾಗಿದೆ. ಮುಲ್ಶಿಯಲ್ಲಿನ ಜಮೀನನ್ನು ಖೇಡ್ಕರ್ ಕುಟುಂಬದವರು ಖರೀದಿಸಿದ್ದಾರೆ. ಮನೋರಮಾ ಈ ಜಮೀನಿಗೆ ಹಕ್ಕುಪತ್ರ ನೀಡಲು ಹೋದಾಗ ಜನರು ತಡೆದಿದ್ದರು. ಈ ಬಗ್ಗೆ ಪೌಡ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸದ್ಯ ಈ ಪ್ರಕರಣ ಪುಣೆಯ ನ್ಯಾಯಾಲಯದಲ್ಲಿ ನಡೆಯುತ್ತಿದೆ. ಮನೋರಮಾ ಬಳಿ ಆತ್ಮರಕ್ಷಣೆಗಾಗಿ ಪರವಾನಗಿ ಪಡೆದ ಪಿಸ್ತೂಲ್ ಇದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ:ಅಧಿಕಾರ ದುರ್ಬಳಕೆ ಆರೋಪ: ಪ್ರೊಬೇಷನರಿ ಅವಧಿಯಲ್ಲೇ ಐಎಎಸ್ ಅಧಿಕಾರಿ ಎತ್ತಂಗಡಿ!