ನವದೆಹಲಿ: ವಿವಾದಾತ್ಮಕ ಚುನಾವಣಾ ಬಾಂಡ್ ಯೋಜನೆಯ ಬಗ್ಗೆ ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸಬೇಕೆಂದು ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು (ಪಿಐಎಲ್) ಸುಪ್ರೀಂ ಕೋರ್ಟ್ ಸೋಮವಾರ ವಿಚಾರಣೆ ನಡೆಸಲಿದೆ. ಚುನಾವಣಾ ಬಾಂಡ್ ಯೋಜನೆಯನ್ನು ಫೆಬ್ರವರಿಯಲ್ಲಿ ಸುಪ್ರೀಂ ಕೋರ್ಟ್ ರದ್ದುಗೊಳಿಸಿತ್ತು.
ಹಿರಿಯ ವಕೀಲ ಪ್ರಶಾಂತ್ ಭೂಷಣ್ ಸಲ್ಲಿಸಿದ ಅರ್ಜಿಗಳ ಬಗ್ಗೆ ಶುಕ್ರವಾರ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಉನ್ನತ ನ್ಯಾಯಾಲಯದ ಪೀಠವು, ಜುಲೈ 22 ರಂದು ಪಿಐಎಲ್ಗಳ ಬಗ್ಗೆ ವಿಚಾರಣೆ ನಡೆಸುವುದಾಗಿ ಹೇಳಿತು. ಕಾಮನ್ ಕಾಸ್ ಮತ್ತು ಸೆಂಟರ್ ಫಾರ್ ಪಬ್ಲಿಕ್ ಇಂಟರೆಸ್ಟ್ ಲಿಟಿಗೇಷನ್ (ಸಿಪಿಐಎಲ್) ಎಂಬ ಎರಡು ಎನ್ಜಿಒಗಳು ಈ ಪ್ರಕರಣದಲ್ಲಿ ಪಿಐಎಲ್ ಸಲ್ಲಿಸಿದ ಅರ್ಜಿದಾರರಾಗಿವೆ. ಇದಲ್ಲದೆ, ಇದೇ ರೀತಿಯ ಮತ್ತೊಂದು ಮನವಿ ಬಂದಿದ್ದು, ಅದನ್ನು ಕೂಡ ಒಟ್ಟಾಗಿ ಜುಲೈ 22 ರಂದು ವಿಚಾರಣೆ ನಡೆಸಲಾಗುವುದು.
ಚುನಾವಣಾ ಬಾಂಡ್ಗಳು ರಾಜಕೀಯ ಪಕ್ಷಗಳು, ಸರ್ಕಾರಿ ಸಂಸ್ಥೆಗಳು ಮತ್ತು ತನಿಖಾ ಸಂಸ್ಥೆಗಳ ನಡುವೆ ಹಿತಾಸಕ್ತಿಗಳ ಸಾಧನೆಗಾಗಿ ಬಳಸಲಾಗಿದೆ ಎಂದು ಪಿಐಎಲ್ನಲ್ಲಿ ಆರೋಪಿಸಲಾಗಿದೆ. ಅಂದರೆ ವ್ಯವಸ್ಥೆಯಲ್ಲಿನ ಭಾಗೀದಾರರು ಪರಸ್ಪರ ಲಾಭಕ್ಕಾಗಿ ಚುನಾವಣಾ ಬಾಂಡ್ ವ್ಯವಸ್ಥೆಯನ್ನು ಬಳಸಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ.