ಕೋಲ್ಕತ್ತಾ (ಪಶ್ಚಿಮ ಬಂಗಾಳ):ಕೋಲ್ಕತ್ತಾದಲ್ಲಿ ಬಾಂಗ್ಲಾದೇಶ ಸಂಸದ ಅನ್ವರುಲ್ ಅಜೀಂ ಅನಾರ್ ಹತ್ಯೆ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದೆ. ಅಜೀಂ ಅನಾರ್ ಅವರನ್ನು ಹನಿ ಟ್ರ್ಯಾಪ್ ಖೆಡ್ಡಾಕ್ಕೆ ಕಡೆವಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಅಲ್ಲದೇ, ಸುಪಾರಿ ಕೊಟ್ಟು ಹತ್ಯೆ ಮಾಡಿಸಿರುವ ಅಂಶ ಕೂಡ ಬೆಳಕಿಗೆ ಬಂದಿದೆ.
ಬಾಂಗ್ಲಾದೇಶದ ಆಡಳಿತಾರೂಢ ಪಕ್ಷ ಅವಾಮಿ ಲೀಗ್ನ ಸಂಸದರಾಗಿದ್ದ ಅನ್ವರುಲ್ ಅಜೀಂ ಅನಾರ್, ಮೇ 13ರಂದು ಭಾರತದಲ್ಲಿ ನಾಪತ್ತೆಯಾಗಿದ್ದರು. ಮೇ 14ರಿಂದ ಫೋನ್ ಕೂಡ ಸ್ವಿಚ್ಡ್ ಆಫ್ ಆಗಿತ್ತು. ಸಂಪರ್ಕಕ್ಕೆ ಸಿಗದ ಕಾರಣ ಸಂಸದರ ಪುತ್ರಿ ಮುಮ್ತಾರಿನ್ ಫಿರ್ದೌಸ್ ಮೇ 18ರಂದು ಢಾಕಾ ಪೊಲೀಸರಿಗೆ ನಾಪತ್ತೆ ದೂರು ನೀಡಿದ್ದರು. ಇದಾದ ಬಳಿಕ ಮೇ 22ರಂದು ಕೋಲ್ಕತ್ತಾದ ನ್ಯೂಟೌನ್ ಪ್ರದೇಶದ ಫ್ಲಾಟ್‌ನಲ್ಲಿ ಅಜೀಂ ಅನಾರ್ ಅವರ ಶವ ಪತ್ತೆಯಾಗಿತ್ತು. ಈ ಬಗ್ಗೆ ಕೋಲ್ಕತ್ತಾದ ಸಿಐಡಿ ತನಿಖೆ ಕೈಗೊಂಡಿದೆ.
ಹನಿ ಟ್ರ್ಯಾಪ್ ಖೆಡ್ಡಾಕ್ಕೆ ಕಡೆವಿ ಕೊಲೆ?: ಬಾಂಗ್ಲಾ ಸಂಸದ ಅಜೀಂ ಅನಾರ್ ಅವರನ್ನು ಹನಿ ಟ್ರ್ಯಾಪ್ ಖೆಡ್ಡಾಕ್ಕೆ ಕಡೆವಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಅಜೀಂ ಅನಾರ್ ಅವರ ಸ್ನೇಹಿತನಿಗೆ ಹತ್ತಿರವಿದ್ದ ಮಹಿಳೆಯೊಬ್ಬರು ಹನಿ ಟ್ರ್ಯಾಪ್‌ಗೆ ಸಿಲುಕಿದ್ದಾರೆ. ಅನಾರ್ ಅವರನ್ನು ಆಮಿಷವೊಡ್ಡಿ ಮಹಿಳೆಯು ನ್ಯೂ ಟೌನ್ ಫ್ಲ್ಯಾಟ್‌ಗೆ ಕರೆದಿದ್ದರು ಎಂಬ ಶಂಕೆ ತನಿಖೆ ವೇಳೆ ಮೂಡಿಸಿದೆ. ಫ್ಲ್ಯಾಟ್‌ಗೆ ಹೋದ ಕೂಡಲೇ ಅನಾರ್ ಅವರನ್ನು ಕೊಲೆ ಮಾಡಲಾಗಿದೆ ಎಂದು ನಾವು ಶಂಕಿಸಿದ್ದೇವೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ಅಲ್ಲದೇ, ಅನಾರ್ ಅವರು ಓರ್ವ ಪುರುಷ ಮತ್ತು ಮಹಿಳೆಯೊಂದಿಗೆ ಫ್ಲಾಟ್‌ಗೆ ಪ್ರವೇಶಿಸಿದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ದೃಶ್ಯಾವಳಿಗಳನ್ನು ಸಿಐಡಿ ಪರಿಶೀಲಿಸುತ್ತಿದೆ. ಇದೊಂದು ಪೂರ್ವಯೋಜಿತ ಕೊಲೆಯಾಗಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಕೊಲೆಗೆ 5 ಕೋಟಿ ಸುಪಾರಿ ಶಂಕೆ!: ಸಂಸದರ ಕೊಲೆಗೆ ಹಳೆಯ ಸ್ನೇಹಿತನು ಸುಪಾರಿ ನೀಡಿರುವ ಮಾಹಿತಿ ಸಹ ಲಭ್ಯವಾಗಿದೆ. ಕೃತ್ಯವನ್ನು ಕಾರ್ಯಗತಗೊಳಿಸಲು ಹಂತಕರಿಗೆ ಸುಮಾರು 5 ಕೋಟಿ ರೂಪಾಯಿಗಳನ್ನು ನೀಡಿರುವ ಶಂಕೆಯನ್ನೂ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.
ಸಿಸಿಟಿವಿ ದೃಶ್ಯಗಳಲ್ಲಿ ಇಬ್ಬರು ವ್ಯಕ್ತಿಗಳೊಂದಿಗೆ ಸಂಸದ ಅನಾರ್ ಫ್ಲಾಟ್‌ಗೆ ಪ್ರವೇಶಿಸುತ್ತಿರುವುದು ಕಂಡುಬಂದಿದೆ. ಇಬ್ಬರೂ ನಂತರ ಹೊರಗೆ ಬಂದು ಮರುದಿನ ಮತ್ತೆ ಫ್ಲಾಟ್‌ಗೆ ಪ್ರವೇಶಿಸಿದ್ದಾರೆ. ಇದರ ಬಳಿಕ ಸಂಸದರು ಮತ್ತೆ ಕಾಣಿಸಿಕೊಂಡಿಲ್ಲ. ಆದರೆ, ನಂತರ ಇಬ್ಬರೂ ದೊಡ್ಡ ಟ್ರಾಲಿ ಸೂಟ್‌ಕೇಸ್‌ನೊಂದಿಗೆ ಫ್ಲಾಟ್‌ನಿಂದ ಹೊರಬರುತ್ತಿರುವುದು ಸಿಸಿಟಿವಿಯಲ್ಲಿ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.