ದೌಸಾ (ರಾಜಸ್ಥಾನ): ರಾಜಸ್ಥಾನದ ಕರೌಲಿಯಲ್ಲಿನ ಮೆಹಂದಿಪುರ್ ಬಾಲಾಜಿಯಲ್ಲಿ ಕುಟುಂಬದ ನಾಲ್ವರ ಸಾವಿನ ಸುದ್ದಿ ಇದೀಗ ಭಾರಿ ಸುದ್ದಿಯಾಗಿದೆ. ತೊಡಭೀಮ್ ಪೊಲೀಸ್ ಠಾಣೆಯಲ್ಲಿ ಕರೌಲಿ ಬ್ರಜೇಶ್ ಜ್ಯೋತಿ ಉಪಾಧ್ಯಾಯ ನೇತೃತ್ವದಲ್ಲಿ ಈ ಪ್ರಕರಣದ ತನಿಖೆ ನಡೆಸಲಾಗುತ್ತಿದೆ.
ಏನಿದು ಘಟನೆ?: ಇಲ್ಲಿನ ರಾಮಕೃಷ್ಣ ಆಶ್ರಮ ಧರ್ಮಶಾಲೆಗೆ ಉತ್ತರಾಖಂಡ್ನ ಡೆಹ್ರಾಡೂನ್ ಮೂಲದ ಕುಟುಂಬವೊಂದು ಆಗಮಿಸಿತ್ತು. ಈ ಕುಟುಂಬದ ಅನುಮಾನಸ್ಪದ ಸಾವು ಇಲ್ಲಿನ ಜನರನ್ನು ಬೆಚ್ಚಿ ಬೀಳಿಸಿದೆ. ಸಂಜೆವರೆಗೂ ಖುಷಿ ಖುಷಿಯಿಂದ ದೇವರ ದರ್ಶನ ಪಡೆದುಕೊಂಡ ಕುಟುಂಬದ ನಾಲ್ವರು ಸದಸ್ಯರು ಆಶ್ರಮದ 119ನೇ ಕೊಠಡಿಯಲ್ಲಿ ಇದ್ದಕ್ಕಿದ್ದಂತೆ ಮೃತಪಟ್ಟಿದ್ದಾರೆ.
ಕೋಣೆಗೆ ಬಂದ ಆಶ್ರಮದ ಉದ್ಯೋಗಿ ಇವರ ದೇಹಗಳು ನೆಲದ ಮೇಲೆ ಬಿದ್ದಿರುವುದುನ್ನು ಗಮನಿಸಿ, ಹೋಟೆಲ್ ಮಾಲೀಕರಿಗೆ ದೂರು ನೀಡಿದ್ದಾನೆ. ಈ ವೇಳೆ ಕೋಣೆಗೆ ಹೋದಾಗ ಕುಟುಂಬದ ನಾಲ್ವರು ಸಾವನ್ನಪ್ಪಿರುವುದು ಬೆಳಕಿಗೆ ಬಂದಿದ್ದು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸಾವಿನ ಬಗ್ಗೆ ಅನುಮಾನ: ಸಿಸಿಟಿವಿ ಕ್ಯಾಮರಾದ ಪ್ರಕಾರ, ಸುರೇಂದ್ರ ಕುಟುಂಬ ಬಾಲಾಜಿ ಮಹಾರಾಜ್ ದರ್ಶನವಾದ ಬಳಿಕ ಮಂಗಳವಾರ ರಾತ್ರಿ 8ರ ಸುಮಾರಿಗೆ ಕೋಣೆಗೆ ಹಿಂದುರಿಗಿದಾಗ ಈ ಅವಘಡ ನಡೆದಿದೆ. ಕುಟುಂಬದ ಯಜಮಾನ ಸುರೇಂದ್ರ ಮಂಚದ ಮೇಲೆ ಬಿದ್ದಿದ್ದು, ಅವರ ಪಕ್ಕದಲ್ಲಿ ಅವರ ಪತ್ನಿ ಕಮಲೇಶ್ ಮತ್ತು ಮಗಳು ನೀಲಮ್ ಸಾವನ್ನಪ್ಪಿದ್ದಾರೆ. ಮಗ ನಿತಿನ್ ಬಾತ್ರೂಂ ಬಾಗಿಲು ಮುಂದೆ ಬಿದ್ದಿದ್ದಾರೆ.
ಸುರೇಂದ್ರ ಕುಮಾರ್ ಕುಟುಂಬ ಸಂತಸದಿಂದಲೇ ಇತ್ತು. ಅವರು ಬಾಲಾಜಿ ಮಹಾರಾಜ್ರ ಆರಾಧನೆ ಮಾಡುತ್ತಿದ್ದರು. ಕಳೆದ ಎರಡು ವರ್ಷಗಳ ಹಿಂದೆ ಕೂಡ ಮೆಹಂದಿಪುರ್ ಬಾಲಾಜಿಗೆ ಭೇಟಿ ನೀಡಿದ್ದರು. ಇದೀಗ ಅವರ ಸಾವನ್ನಪ್ಪಿರುವ ಸುದ್ದಿ ಆಘಾತ ಮೂಡಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸುರೇಂದ್ರ ಕುಟುಂಬದವರಿಗೆ ಯಾವುದೇ ಆರೋಗ್ಯ ಸಮಸ್ಯೆ ಇರಲಿಲ್ಲ. ಅವರು ಡೆಹ್ರಾಡೂನ್ನಲ್ಲಿ ಕಂಪನಿಯನ್ನು ಹೊಂದಿದ್ದು, ಅವರ ಮಗ ಕೂಡ ಇದರಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಇತ್ತೀಚಿಗಷ್ಟೇ ಮಗ ನಿತಿನ್ ಮದುವೆ ಕೂಡ ಆಗಿತ್ತು. ಮಗಳು ವೈವಾಹಿಕ ಸಂಬಂಧದಲ್ಲಿ ಬಿರುಕು ಮೂಡಿದ್ದು, ಗಂಡನಿಂದ ವಿಚ್ಛೇದನ ಪಡೆದಿದ್ದು, ಕಳೆದ ಐದಾರು ವರ್ಷದಿಂದ ತಂದೆಯ ಮನೆಯಲ್ಲೇ ವಾಸವಾಗಿದ್ದರು ಎಂದು ಪೊಲೀಸರು ಮಾಹಿತಿ ಒದಗಿಸಿದ್ದಾರೆ.
ಸದ್ಯ ಈ ಕುಟುಂಬ ಅನಾರೋಗ್ಯದಿಂದ ಸಾವನ್ನಪ್ಪಿಲ್ಲ ಎಂದು ತಿಳಿದು ಬಂದಿದ್ದು, ಇದೊಂದು ಸಾಮೂಹಿಕ ಆತ್ಮಹತ್ಯೆ ಆಗಿದ್ದು, ಇದಕ್ಕೆ ಕಾರಣ ತಿಳಿದು ಬಂದಿಲ್ಲ. ಈ ಕುರಿತು ತನಿಖೆ ಮುಂದುವರೆದಿದ್ದು, ಎಫ್ಎಸ್ಎಲ್ ತಂಡ ಸ್ಥಳಕ್ಕೆ ಆಗಮಿಸಿದ್ದು, ತನಿಖೆಗೆ ಮುಂದಾಗಿದೆ. ಸದ್ಯ ಎಫ್ಎಸ್ಎಲ್ ತಂಡ ಸಾಕ್ಷ್ಯಾಧರಗಳನ್ನು ಸಂಗ್ರಹಿಸಿದ್ದು, ತನಿಖೆಗೆ ಒಳಪಡಿಸಿದೆ.
ಕುಟುಂಬದೊಂದಿಗೆ ಕಡೆಯದಾಗಿ ಮಾತನಾಡಿದ್ದ ಕುಟುಂಬ: ಕಮಲೇಶ್ ಸಾವಿಗೂ ಮುನ್ನ ಅಳಿಯ ಸುಶೀಲ್ ಅವರಿಗೆ ಕರೆ ಮಾಡಿದ್ದು, ಮನೆ ಚನ್ನಾಗಿ ನೋಡಿಕೊಳ್ಳುವಂತೆ ತಿಳಿಸಿದ್ದರು. ಸಂಜೆ 7 ಗಂಟೆಗೆ ಕರೆ ಮಾಡಿದ್ದ ಅವರು ಬಳಿಕ ಸಂಪರ್ಕಕ್ಕೆ ಸಿಕ್ಕಿಲ್ಲ ಎಂದು ಸುರೇಂದ್ರ ತಮ್ಮ ಮುಖೇಶ್ ತಿಳಿಸಿದ್ದಾರೆ. ಸದ್ಯ ಮೃತರ ಮರಣೋತ್ತರ ಪರೀಕ್ಷೆ ಸಾಗಿದ್ದು, ಬಳಿಕ ಅವರ ಕುಟುಂಬಕ್ಕೆ ಮೃತದೇಹಗಳನ್ನು ಹಸ್ತಾಂತರಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಸಂಕ್ರಾಂತಿಗೆ ಊರಿಗೆ ಹೋಗುವಾಗ ಜಾಣತನ ಮೆರೆದ ಮನೆ ಮಾಲೀಕ: ಕಳ್ಳನಿಗೊಂದು ವಿಶೇಷ ಪತ್ರ