ಅಯೋಧ್ಯೆಯಲ್ಲಿ ಪ್ರಧಾನಿ ಮೋದಿ ಮಾತು ಅಯೋಧ್ಯೆ (ಉತ್ತರ ಪ್ರದೇಶ):ಐದು ದಶಕಗಳ ಕಾಯುವಿಕೆಯ ನಂತರ ಇಂದು ನಮ್ಮ ಶ್ರೀರಾಮ ಬಂದಿದ್ದಾನೆ. ಭವ್ಯ ಮಂದಿರದಲ್ಲಿ ಇಂದು ರಾಮಲಲ್ಲಾ ನೆಲೆಸಿದ್ದಾನೆ. ಟೆಂಟ್ನಲ್ಲಿ ಇದ್ದ ಪ್ರಭು ರಾಮ ಈಗ ಮಂದಿರದಲ್ಲಿ ವಿರಾಜಮಾನನಾಗಿದ್ದಾನೆ. ಈ ಐತಿಹಾಸಿಕ ಕ್ಷಣವನ್ನು ದೇಶ- ವಿದೇಶದಲ್ಲಿರುವ ರಾಮ ಭಕ್ತರು ಸಂಭ್ರಮಿಸುವ ಕ್ಷಣವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದರು.
ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆಯ ಬಳಿಕ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜನವರಿ 22 ಬರೀ ದಿನಾಂಕವಲ್ಲ. ಅದು ಹೊಸಶಕೆಯ ಆರಂಭ. ಸಾವಿರಾರು ವರ್ಷಗಳ ನಂತರವೂ ಜನರು ಇಂದಿನ ದಿನವನ್ನು ನೆನಪಿಸಿಕೊಳ್ಳುತ್ತಾರೆ. ಇದು ರಾಮನ ದಿವ್ಯ ಆಶೀರ್ವಾದದ ಫಲ ಎಂದು ಪ್ರಧಾನಿ ಹೇಳಿದರು.
ವಿವಿಧ ಭಾಷೆಗಳಲ್ಲಿ ರಾಮಾಯಣ ಇಂದಿಗೂ ಪ್ರಚಲಿತದಲ್ಲಿದೆ. ಪ್ರತಿ ಕಾಲದಲ್ಲೂ ಜನರು ಭಗವಾನ್ ರಾಮನ ಭಕ್ತಿಯಲ್ಲಿ ಮಿಂದೆದ್ದಿದ್ದಾರೆ. ಜನರು ಭಗವಾನ್ ರಾಮನನ್ನು ವಿಭಿನ್ನ ರೀತಿಯಲ್ಲಿ ಆರಾಧಿಸಿದ್ದಾರೆ. ಇಂದು, ಈ ಐತಿಹಾಸಿಕ ಸಂದರ್ಭದಲ್ಲಿ ರಾಮಮಂದಿರಕ್ಕಾಗಿ ಪ್ರಾಣತ್ಯಾಗ ಮಾಡಿದವರನ್ನು ಸ್ಮರಿಸಬೇಕು ಎಂದರು.
ಕೋರ್ಟ್ ತೀರ್ಪಿಗೆ ಧನ್ಯವಾದ :ದೇಶದ ಕೋಟಿ ಕೋಟಿ ರಾಮಭಕ್ತರ ಗುರಿಯಾಗಿದ್ದ ರಾಮಮಂದಿರ ವಿವಾದವನ್ನು ಇತ್ಯರ್ಥ ಮಾಡಿದ ಕೋರ್ಟ್ ತೀರ್ಪಿಗೆ ಮೋದಿ ಧನ್ಯವಾದ ಹೇಳಿದರು. ದಶಕಗಳಿಂದ ಹೋರಾಟ ನಡೆಸುತ್ತಾ ಬಂದ ರಾಮಭಕ್ತರಿಗೆ ಕೊನೆಗೂ ಜಯ ಸಂದಿದೆ. ಇಂದು ರಾಮ ಟೆಂಟ್ ಬಿಟ್ಟು ಭವ್ಯ ಮಂದಿರದಲ್ಲಿ ಕುಳಿತಿದ್ದು, ಇದರ ನ್ಯಾಯಯುತ ತೀರ್ಪು ನೀಡಿದ ಭಾರತದ ನ್ಯಾಯಾಂಗಕ್ಕೆ ಕೃತಜ್ಞತೆ ಸಲ್ಲಿಸುವೆ ಎಂದರು.
ರಾಮಮಂದಿರ ನಿರ್ಮಾಣವಾದರೆ, ದೇಶಕ್ಕೆ ಬೆಂಕಿ ಬೀಳುತ್ತದೆ ಎಂದು ಕೆಲವರು ಟೀಕಿಸುತ್ತಿದ್ದರು. ಆದರೆ, ಇಂದು ಅದ್ಯಾವುದೂ ಆಗದೇ, ಶಾಂತಿ- ಸಂತಸ ದೇಶದಲ್ಲಿ ಹರಡಿದೆ. ಇದು ರಾಮಭಕ್ತಿಯ ಶಕ್ತಿ. ರಾಮ ಎಂದಿಗೂ ಅಗ್ನಿಯಲ್ಲ, ಭಕ್ತಿ. ರಾಮಭೂಮಿ ವಿವಾದವಲ್ಲ. ಅದು ಕೋಟ್ಯಂತರ ಜನರ ಭಾವನೆಯಾಗಿದೆ. ಇದಕ್ಕೆ ಸಾಕ್ಷಿ ಇಂದು ರಾಮಲಲ್ಲಾನ ಪ್ರತಿಷ್ಠಾಪನೆ ಎಂದು ಅಭಿಪ್ರಾಯಪಟ್ಟರು.
ದೇಶದ ಶಕ್ತಿ, ನಂಬಿಕೆಯ ಪ್ರತಿಷ್ಠಾಪನೆ:ಇಂದು ಬರಿಯ ರಾಮನ ವಿಗ್ರಹದ ಪ್ರಾಣ ಪ್ರತಿಷ್ಠಾಪನೆಯಾಗಿಲ್ಲ. ದೇಶದ ಜನರ ಭಾವನೆ, ಶಕ್ತಿ, ನಂಬಿಕೆಗಳು ಇಂದು ಪ್ರತಿಷ್ಠಾಪನೆಯಾಗಿದೆ. ಇಂದಿನ ಕಾರ್ಯಕ್ರಮ ಇಡೀ ವಿಶ್ವಕ್ಕೆ ಭಾರತದ ಶಕ್ತಿಯನ್ನು ಸಾರಿದೆ. ಸರ್ವೇಜನ ಸುಖಿನೋ ಭವಂತುಃ ಎಂಬ ದೇಶದ ಚಿಂತನೆಯು ವಿಶ್ವಕ್ಕೆ ಹರಡಿದೆ ಎಂದರು.
ಇದನ್ನೂ ಓದಿ:ಕೋಟ್ಯಂತರ ಜನರ ಕನಸು ಸಾಕಾರ; ಅಯೋಧ್ಯೆದಲ್ಲಿ ಪ್ರತಿಷ್ಠಾಪನೆಯಾದ ಶ್ರೀರಾಮ