ಕರ್ನಾಟಕ

karnataka

ETV Bharat / bharat

ರಾಷ್ಟ್ರಪತಿಗಳ ಭಾಷಣ ಪ್ರಗತಿ, ಉತ್ತಮ ಆಡಳಿತದ ಮಾರ್ಗಸೂಚಿ: ಪ್ರಧಾನಿ ಮೋದಿ - Joint Session Of Parliament - JOINT SESSION OF PARLIAMENT

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದು ಸಂಸತ್ತಿನ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಿದ್ದು, 2047ರ ಭವ್ಯ ಭಾರತದ ಬಗ್ಗೆ ಪ್ರಸ್ತಾಪಿಸಿದ್ದಾರೆ. ಇದನ್ನು ಆಡಳಿತ ಪಕ್ಷ ಶ್ಲಾಘಿಸಿದರೆ, ಪ್ರತಿಪಕ್ಷಗಳು ಟೀಕಿಸಿವೆ.

ಪ್ರಧಾನಿ ಮೋದಿ
ಪ್ರಧಾನಿ ಮೋದಿ (ETV Bharat)

By ANI

Published : Jun 27, 2024, 4:13 PM IST

ನವದೆಹಲಿ:ಸಂಸತ್ತಿನ ಜಂಟಿ ಸದನಗಳನ್ನು ಉದ್ದೇಶಿಸಿ ಇಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮಾಡಿದ ಭಾಷಣವು ಪ್ರಗತಿ ಮತ್ತು ಉತ್ತಮ ಆಡಳಿತದ ಮಾರ್ಗಸೂಚಿಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದರು.

'ಎಕ್ಸ್'​ ಖಾತೆಯಲ್ಲಿ ಪೋಸ್ಟ್​ ಹಂಚಿಕೊಂಡಿರುವ ಪ್ರಧಾನಿ, ರಾಷ್ಟ್ರಪತಿ ಮುರ್ಮು ಅವರು ಸಂಸತ್ತಿನ ಉಭಯ ಸದನಗಳನ್ನು ಉದ್ದೇಶಿಸಿ ಮಾಡಿದ ಭಾಷಣವು ಸಮಗ್ರತೆಯಿಂದ ಕೂಡಿದೆ. ಪ್ರಗತಿ ಮತ್ತು ಉತ್ತಮ ಆಡಳಿತದ ಮಾರ್ಗಸೂಚಿಯನ್ನು ಅದು ಪ್ರಸ್ತುತಪಡಿಸಿದೆ. ದೇಶ ಪ್ರಗತಿಯತ್ತ ಇಡುತ್ತಿರುವ ದಾಪುಗಾಲು ಮತ್ತು ಅದರ ಸಾಮರ್ಥ್ಯದ ಪ್ರತಿಬಿಂಬ ಎಂದು ಹೇಳಿದರು.

ರಾಷ್ಟ್ರಪತಿಗಳು ತಮ್ಮ ಹೇಳಿಕೆಯಲ್ಲಿ ದೇಶದ ಅಭಿವೃದ್ಧಿಗೆ ಸರ್ಕಾರ ಕೈಗೊಂಡಿರುವ ಕ್ರಮಗಳು ಮತ್ತು ಮುಂದಿನ ಸವಾಲಗಳನ್ನು ಪ್ರಸ್ತಾಪಿಸಿದ್ದಾರೆ. ಜನಜೀವನದಲ್ಲಿ ಗುಣಾತ್ಮಕ ಬದಲಾವಣೆ ತರುವ ನಿಟ್ಟಿನಲ್ಲಿ ಸರ್ಕಾರ ದೊಡ್ಡ ಹೆಜ್ಜೆ ಇಟ್ಟಿದೆ ಎಂಬುದನ್ನು ಅವರು ಉಲ್ಲೇಖಿಸಿದ್ದಾರೆ ಎಂದು ಪ್ರಧಾನಿ ಮೋದಿ ಬರೆದಿದ್ದಾರೆ.

ರಾಷ್ಟ್ರಪತಿ ಭಾಷಣಕ್ಕೆ ಪರ-ವಿರೋಧ:ರಾಷ್ಟ್ರಪತಿ ಭಾಷಣವನ್ನು ಆಡಳಿತ ಪಕ್ಷ ಮೆಚ್ಚಿಕೊಂಡರೆ, ಪ್ರತಿಪಕ್ಷಗಳು ಇದು ಸರ್ಕಾರವೇ ಬರೆದುಕೊಟ್ಟ ಸಹಜ ಹೇಳಿಕೆ ಎಂದು ಛೇಡಿಸಿವೆ. ಈ ಬಗ್ಗೆ ಕೇಂದ್ರ ಸಚಿವ ಜಯಂತ್ ಚೌಧರಿ ಮಾತನಾಡಿ, "ರಾಷ್ಟ್ರಪತಿಗಳು ಒಗ್ಗಟ್ಟಿನ ಸಂದೇಶ ನೀಡಿದ್ದಾರೆ. ದೇಶವನ್ನು ಮುಂದೆ ಕೊಂಡೊಯ್ಯಲು ಮತ್ತು 2047ರ ವೇಳೆಗೆ ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡುವ ಬಗ್ಗೆ ಪ್ರಸ್ತಾಪಿಸಿದ್ದಾರೆ" ಎಂದು ಹೇಳಿದರು.

"2047ರ ವೇಳೆಗೆ ವಿಕಸಿತ ಭಾರತದ ಕನಸನ್ನು ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ. ಅವರ ಭಾಷಣದಲ್ಲಿ ಪ್ರಜಾಸತ್ತಾತ್ಮಕ ಸಂಸ್ಥೆಗಳು ಬಲಿಷ್ಠವಾಗಿವೆ. ಚುನಾವಣಾ ಆಯೋಗವು ಅತ್ಯುತ್ತಮ ಪಾತ್ರ ನಿರ್ವಹಿಸಿದೆ. ಸಾಮಾನ್ಯ ಜನರು ಹೊರಬಂದು ಮತ ಚಲಾಯಿಸಿದ ರೀತಿ, ಮಹಿಳೆಯರು ತಮ್ಮ ಆಯ್ಕೆಯ ಸರ್ಕಾರ ಮತ್ತು ಪ್ರತಿನಿಧಿಗೆ ಮತ ಹಾಕುವ ಮೂಲಕ ಭವಿಷ್ಯವನ್ನು ನಿರ್ಧರಿಸಿದ್ದಾರೆ ಎಂದು ಹೇಳಿರುವುದು ಶ್ಲಾಘನೀಯ "ಎಂದರು.

ಕೇಂದ್ರ ಸಚಿವ ರಾಮದಾಸ್ ಅಠಾವಳೆ ಮಾತನಾಡಿ, "ರಾಷ್ಟ್ರಪತಿಗಳ ಭಾಷಣದಲ್ಲಿ ಸರ್ಕಾರದ ನಿರ್ಧಾರಗಳ ಬಗ್ಗೆ ಪ್ರಸ್ತಾಪಿಸಲಾಗಿದೆ. ಹೊಸ ಯೋಜನೆಗಳು ಬಜೆಟ್ ಮೂಲಕ ಬರುತ್ತವೆ. ಪ್ರತಿಪಕ್ಷಗಳು ಟೀಕಿಸುವುದರಲ್ಲಿ ಅರ್ಥವಿಲ್ಲ. ರಾಷ್ಟ್ರಪತಿಗಳ ಭಾಷಣ ಉತ್ತಮವಾಗಿತ್ತು. ಪ್ರತಿಪಕ್ಷಗಳ ಆರೋಪದಲ್ಲಿ ಸತ್ಯಾಂಶವಿಲ್ಲ" ಎಂದು ತಿರುಗೇಟು ನೀಡಿದ್ದಾರೆ.

ಪ್ರತಿಪಕ್ಷಗಳ ಟೀಕೆ:ರಾಷ್ಟ್ರಪತಿಗಳ ಭಾಷಣವನ್ನು ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್​ ಯಾದವ್​ ಟೀಕಿಸಿದ್ದಾರೆ. "ಇದು ಸರ್ಕಾರ ತಯಾರಿಸಿದ ಭಾಷಣ. ರಾಷ್ಟ್ರಪತಿಗಳು ಸರ್ಕಾರದ ಭಾಷಣವನ್ನು ಓದಿದ್ದಾರೆ. ಇದರಲ್ಲಿ ಹೊಸತೇನಿಲ್ಲ" ಎಂದು ಟೀಕಿಸಿದ್ದಾರೆ.

ಕಾಂಗ್ರೆಸ್​ ಸಂಸದ ಪ್ರಮೋದ್​​ ತಿವಾರಿ ಮಾತನಾಡಿ, "ರಾಷ್ಟ್ರಪತಿಗಳ ಭಾಷಣದಲ್ಲಿ ಸರ್ಕಾರದಲ್ಲಿ ಇಚ್ಛಾಶಕ್ತಿಯ ಕೊರತೆ, ಸೋಲುಂಡ ಭಾವನೆ ಕಾಣಿಸುತ್ತಿದೆ. ದೇಶದ ಹಿತಕ್ಕಾಗಿ ಯಾವ ಮುಂದಾಲೋಚನೆ ಇದರಲ್ಲಿಲ್ಲ. ಪ್ರಧಾನಿ ಮೋದಿ ಅವರಿಗೆ ಚುನಾವಣಾ ಸೋಲಿನ ಬಗ್ಗೆ ಪಶ್ಚಾತ್ತಾಪವಿಲ್ಲ" ಎಂದು ಜರಿದಿದ್ದಾರೆ.

ಇದನ್ನೂ ಓದಿ:ಆಯುಷ್ಮಾನ್​​​​ ಭಾರತ್​​​: 70 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲ ವೃದ್ಧರಿಗೆ ಉಚಿತ ಚಿಕಿತ್ಸೆ ಘೋಷಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು - President Droupadi Murmu speech

ABOUT THE AUTHOR

...view details