ನವದೆಹಲಿ:ಮಹಾರಾಷ್ಟ್ರ ಚುನಾವಣೆಯಲ್ಲಿ ಮಹಾ ವಿಕಾಸ್ ಅಘಾಡಿ (ಎಂವಿಎ) ವಿರುದ್ಧ ಬಿಜೆಪಿ ನೇತೃತ್ವದ 'ಮಹಾಯುತಿ' ಅಮೋಘ ಜಯ ಸಾಧಿಸುತ್ತಿದ್ದಂತೆಯೇ ಪ್ರಧಾನಿ ನರೇಂದ್ರ ಮೋದಿ ಅವರನ್ನು ‘ಜಾಣತಾ ರಾಜಾ’ ಎಂದು ಬಿಂಬಿಸುವ ಹಳೆಯ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಜನಪ್ರಿಯ ಎಕ್ಸ್ ಖಾತೆ ‘ಮೋದಿ ಆರ್ಕೈವ್’ನಲ್ಲಿ ಪ್ರಧಾನಿ ಮೋದಿ ಮಹಾರಾಜನ ಗೆಟಪ್ನಲ್ಲಿರುವ ಚಿತ್ರವನ್ನು ಹಂಚಿಕೊಳ್ಳಲಾಗಿದೆ. 2006ನೇ ವರ್ಷ, ಕರ್ಣಾವತಿ ಕ್ಲಬ್‌ನಲ್ಲಿ ನಡೆದ ಛತ್ರಪತಿ ಶಿವಾಜಿ ಮಹಾರಾಜರ ನೈಜ ಜೀವನ ಆಧಾರಿತ ನಾಟಕದಲ್ಲಿ ‘ಜಾಣತಾ ರಾಜಾ’ ಎಂಬ ಪಾತ್ರದಲ್ಲಿ ಮೋದಿ ಭಾಗವಹಿಸಿದ್ದರು ಎಂದು ಶೀರ್ಷಿಕೆ ನೀಡಲಾಗಿದೆ.
ಮೋದಿಯ ಜಾಣತಾ ರಾಜಾ ಪಾತ್ರ:ಮರಾಠರ ಮಹಾನ್ ಯೋಧ, ರಾಜ ಛತ್ರಪತಿ ಶಿವಾಜಿ ಮಹಾರಾಜರ ಜೀವನ ಮತ್ತು ಸಾಧನೆಗಳನ್ನು ಮರುಸೃಷ್ಟಿಸಲು 2006 ರಲ್ಲಿ 'ಜಾಣತಾ ರಾಜಾ' ಎಂಬ ಜನಪ್ರಿಯ ನಾಟಕ ಪ್ರದರ್ಶಿಸಲಾಗಿತ್ತು. ಅಹಮದಾಬಾದ್‌ನ ಕರ್ಣಾವತಿ ಕ್ಲಬ್‌ನಲ್ಲಿ ನಡೆದ ಈ ನಾಟಕದಲ್ಲಿ ಗುಜರಾತ್ನ ಅಂದಿನ ಮುಖ್ಯಮಂತ್ರಿ ಆಗಿದ್ದ ನರೇಂದ್ರ ಮೋದಿ ಅವರು ಛತ್ರಪತಿ ಶಿವಾಜಿ ಅವರ ಜೀವನಾಧಾರಿತ ನಾಟಕದಲ್ಲಿ ಭಾಗವಹಿಸಿದ್ದರು.