ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇಂದಿನಿಂದ ಎರಡು ದಿನಗಳ ಕುವೈತ್ ಪ್ರವಾಸ ಕೈಗೊಳ್ಳಲಿದ್ದು, ಎರಡು ದೇಶಗಳ ದ್ವಿಪಕ್ಷೀಯ ಸಂಬಂಧ ಕುರಿತು ಮಾತುಕತೆ ನಡೆಸಲಿದ್ದಾರೆ. 43 ವರ್ಷಗಳ ಬಳಿಕ ಗಲ್ಫ್ ರಾಷ್ಟ್ರಕ್ಕೆ ಭಾರತದ ಪ್ರಧಾನಿಯೊಬ್ಬರ ಮೊದಲ ಭೇಟಿ ಇದಾಗಿದೆ.
ಈ ಭೇಟಿಗೆ ಮುನ್ನ ಹೇಳಿಕೆ ನೀಡಿರುವ ಪ್ರಧಾನಿ ಮೋದಿ, ಕುವೈತ್ ರಾಜಕುಮಾರ ಅಮೀರ್ ಆದ ಹೈನೆಸ್ ಶೇಖ್ ಮೆಶಾಲ್ ಅಲ್-ಅಹ್ಮದ್ ಅಲ್-ಜಾಬರ್ ಅಲ್-ಸಬಾಹ್ ಅವರ ಆಹ್ವಾನದ ಮೇರೆಗೆ ಭೇಟಿ ನೀಡಲಾಗುತ್ತಿದೆ. ಕುವೈತ್ನೊಂದಿಗಿನ ಹಲವು ಪೀಳಿಗೆಯ ಐತಿಹಾಸಿಕ ಸಂಪರ್ಕವನ್ನು ನಾವು ಗೌರವಿಸುತ್ತೇವೆ. ನಾವು ಕೇವಲ ವ್ಯಾಪಾರಿ ಮತ್ತು ಇಂದನ ಸಹಭಾಗಿಗಳಲ್ಲ. ಬದಲಾಗಿ ಪಶ್ಚಿಮ ಏಷ್ಯಾ ಪ್ರದೇಶದಲ್ಲಿ ಶಾಂತಿ, ಭದ್ರತೆ, ಸ್ಥಿರತೆ ಮತ್ತು ಸಮೃದ್ಧಿಯ ಭಾಗಿಯಾಗಿದ್ದೇವೆ ಎಂದು ತಿಳಿಸಿದ್ದಾರೆ.
ಭವಿಷ್ಯದ ಪಾಲುದಾರಿಕೆ ಮಾರ್ಗ:ತಮ್ಮ ಈ ಭೇಟಿ ಸಂದರ್ಭದಲ್ಲಿ ರಾಜಕುಮಾರ ಶೇಖ್ ಸಹಾಬ್ ಅಲ್ ಖಲೀದ್ ಆಲ್ ಸಹಾಬ್ ಅವರನ್ನು ಪ್ರಧಾನಿ ಭೇಟಿಯಾಗಲಿದ್ದಾರೆ. ಈ ಭೇಟಿ ನಮ್ಮ ಜನರು ಮತ್ತು ಪ್ರದೇಶದ ಪ್ರಯೋಜನಕ್ಕಾಗಿ ಭವಿಷ್ಯದ ಪಾಲುದಾರಿಕೆ ಮಾರ್ಗವಾಗಲಿದೆ ಎಂದಿದ್ದಾರೆ
ಪ್ರವಾಸದ ವೇಳೆ ಕುವೈತ್ನಲ್ಲಿರುವ ಭಾರತದ ರಾಯಭಾರಿಗಳನ್ನು ಭೇಟಿಯಾಗಲು ಉತ್ಸಾಹದಿಂದ ಇರುವುದಾಗಿ ತಿಳಿಸಿರುವ ಪ್ರಧಾನಿ, ಎರಡು ದೇಶಗಳ ನಡುವಿಮ ಸ್ನೇಹ ಸಂಬಂಧವನ್ನು ಬಲಗೊಳಿಸುವಲ್ಲಿ ಅವರ ಕೊಡುಗೆ ಅಪಾರ ಎಂದಿದ್ದಾರೆ.