ಮುಂಬೈ:ಮೀನುಗಾರರು, ರೈತರು ಮತ್ತು ಪರಿಸರವಾದಿಗಳ ತೀವ್ರ ವಿರೋಧದ ನಡುವೆ ಇಂದು ಪ್ರಧಾನಿ ನರೇಂದ್ರ ಮೋದಿ ಪಾಲ್ಘಾರ್ ಜಿಲ್ಲೆಯಲ್ಲಿ ವಧವನ್ ಬಂದರಿಗೆ ಭೂಮಿ ಪೂಜೆ ನಡೆಸಲಿದ್ದಾರೆ. 76,200 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಈ ಬಂದರಿನಿಂದ ಪರಿಸರಕ್ಕೆ ಹಾನಿಯಾಗುತ್ತದೆ ಎಂಬ ಕೂಗು ಜೋರಾಗಿತ್ತು. ಈ ಹಿನ್ನೆಲೆಯಲ್ಲಿ ಕಾರ್ಯಕ್ರಮಕ್ಕೆ ಬಿಗಿ ಭದ್ರತೆ ಒದಗಿಸಲಾಗಿದ್ದು, 7 ಸಾವಿರ ಪೊಲೀಸರನ್ನು ನಿಯೋಜಿಸಲಾಗಿದೆ.
ಕಾರ್ಯಕ್ರಮವೂ ಪಾಲ್ಘಾರ್ನ ಸಿಐಡಿಸಿಒ ಮೈದಾನದಲ್ಲಿ ನಡೆಯಲಿದ್ದು, ಮಹಾರಾಷ್ಟ್ರ ರಾಜ್ಯಪಾಲರಾದ ಸಿಪಿ ರಾಧಾಕೃಷ್ಣನ್, ಮುಖ್ಯಮಂತ್ರಿ ಏಕನಾಥ್ ಶಿಂಧೆ, ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್, ಅಜಿತ್ ಪವಾರ್, ಕೇಂದ್ರ ಬಂದರು ಸಚಿವರಾದ ಸರ್ಬಾನಂದ ಸೊನೊವಾಲ್, ಕೇಂದ್ರ ಮೀನುಗಾರಿಕೆ ಮತ್ತು ಪಶು ಸಂಗೋಪನೆ ಸಚಿವ ಎಸ್ಪಿ ಸಿಂಗ್ ಬಘೇಲ್ ಮತ್ತು ಜಾರ್ಜ್ ಕುರಿಯನ್ ಭಾಗಿಯಾಗಲಿದ್ದಾರೆ.
ಮಹಾರಾಷ್ಟ್ರದ ಪಶ್ಚಿಮ ಕರಾವಳಿಯಲ್ಲಿ ಉತ್ತರ ಮುಂಬೈನಿಂದ 130 ಕಿ.ಮೀ ದೂರದಲ್ಲಿನ ದಹನು ಬಳಿ ಈ ಬಂದರಿದೆ. ಅರಬ್ಬಿ ಸಮುದ್ರದ ಈ ತೀರ ಸರ್ವಋತುಗಳಲ್ಲೂ ಹಚ್ಚು ಹಸಿರಿನಿಂದ ಕೂಡಿರುತ್ತದೆ. ಇಲ್ಲಿ ಬಂದರು ನಿರ್ಮಾಣದ ಕುರಿತು ಜೂನ್ನಲ್ಲಿ ಕೇಂದ್ರ ಕ್ಯಾಬಿನೆಟ್ನ ಅನುಮತಿ ಪಡೆಯಲಾಗಿದ್ದು, ದೇಶದ ಬೃಹತ್ ಬಂದರನ್ನು ಇಲ್ಲಿ ನಿರ್ಮಾಣ ಮಾಡುವ ಯೋಜನೆ ಸಿದ್ಧವಾಗಿದೆ. ಇದು ಭಾರತದ 13ನೇ ಬಂದರಾಗಿದ್ದು, ಇದರ ಸಾಮರ್ಥ್ಯ 298 ಮಿಲಿಯನ್ ಟನ್ ಆಗಿದೆ.
ಈ ಬಂದರನ್ನು ವಧವನ್ ಪೋರ್ಟ್ ಪ್ರಾಜೆಕ್ಟ್ ಲಿಮಿಟೆಡ್ (ವಿಪಿಪಿಎಲ್) ಮತ್ತು ಮಹಾರಾಷ್ಟ್ರ ಸಾಗರ ಮಂಡಳಿ (ಎಂಎಂಬಿ) ಸಹಯೋಗದಲ್ಲಿ ಶೇ 74 ಮತ್ತು ಶೇ 26ರಷ್ಟು ಪಾಲುದಾರಿಕೆಯಲ್ಲಿ ನಿರ್ಮಾಣ ಮಾಡಲಾಗುವುದು. ಈ ಯೋಜನೆಯು ಸಮುದ್ರದಲ್ಲಿ 1,448 ಹೆಕ್ಟೇರ್ ಪ್ರದೇಶವನ್ನು ಪುನಶ್ಚೇತನಗೊಳಿಸಲಾಗುವುದು. 10.14 ಕಿಮೀ ಕಡಲ ತೀರದಲ್ಲಿ ಬ್ರೇಕ್‌ವಾಟರ್ ಮತ್ತು ಕಂಟೈನರ್ ಪ್ರದೇಶ ಹೊಂದಿರಲಿದೆ ಎಂದು ಮೂಲಗಳು ತಿಳಿಸಿದೆ.