ನವದೆಹಲಿ:ಪ್ರತಿ ವರ್ಷದಂತೆ ಈ ವರ್ಷವೂ ಅಂತಾರಾಷ್ಟ್ರೀಯ ಯೋಗ ದಿನವನ್ನು ಜೂನ್ 21 ರಂದು ಆಚರಣೆ ಮಾಡಲಾಗುತ್ತಿದೆ. ಈ ವರ್ಷ ಜಮ್ಮು- ಕಾಶ್ಮೀರದ ಶ್ರೀನಗರದಲ್ಲಿ ಪ್ರಧಾನ ಯೋಗ ಕಾರ್ಯಕ್ರಮ ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸಲಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಆಯುಷ್ ಸಚಿವಾಲಯದ ಕಾರ್ಯದರ್ಶಿ ವೈದ್ಯ ರಾಜೇಶ್ ಕೊಟೆಚಾ ಅವರು, ಈ ವರ್ಷದ ಯೋಗದ ದಿನದ ಧ್ಯೇಯವಾಕ್ಯವು "ಸ್ವಯಂ ಮತ್ತು ಸಮಾಜಕ್ಕಾಗಿ ಯೋಗ"ವಾಗಿದೆ. ಈ ಸಂದೇಶದ ಪ್ರಮುಖ ಉದ್ದೇಶವೆಂದರೆ, ಯೋಗ ಮಾಡುವ ಮೂಲಕ ಇಡೀ ಸಮುದಾಯವನ್ನೂ ಪ್ರೇರೇಪಿಸಬೇಕು. ಜೀವನದ ಪ್ರತಿ ಹಂತದಲ್ಲೂ ಯೋಗ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಈ ಬಾರಿ ಜಮ್ಮು ಕಾಶ್ಮೀರದ ಶ್ರೀನಗರದಲ್ಲಿ ಪ್ರಮುಖ ಆಚರಣೆ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಒಂದೇ ಸಮಯದಲ್ಲಿ ಯೋಗ ಕಾರ್ಯಕ್ರಮಗಳು ಜರುಗಲಿವೆ ಎಂದು ತಿಳಿಸಿದರು.
ಕೇಂದ್ರ ಸರ್ಕಾರದ ಎಲ್ಲಾ ಕಚೇರಿಗಳ ಸಿಬ್ಬಂದಿ ಭಾಗಿ; ಈ ಬಾರಿಯ ಯೋಗ ದಿನಾಚರಣೆ ವಿಶೇಷವೆಂದರೆ, ಕೇಂದ್ರ ಸರ್ಕಾರದ ಎಲ್ಲಾ ಕಚೇರಿಗಳ ಸಿಬ್ಬಂದಿ ಯೋಗ ದಿನದಲ್ಲಿ ಭಾಗಿಯಾಗಲಿದ್ದಾರೆ. ಎಲ್ಲಾ ರಾಜ್ಯ ಸರ್ಕಾರಗಳೂ ಪಾಲುದಾರರಾಗಲಿದ್ದಾರೆ. ದೇಶದ ತುಂಬೆಲ್ಲಾ ಯೋಗಾಯೋಗ ಇರಲಿದೆ. ಯೋಗವು ಭಾರತದಲ್ಲಿ ಹುಟ್ಟಿಕೊಂಡ ಪ್ರಾಚೀನ ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಅಭ್ಯಾಸವಾಗಿದೆ ಎಂದರು.