ನವದೆಹಲಿ:ಬ್ರೂನೈ ಮತ್ತು ಸಿಂಗಾಪುರ್ ದೇಶಗಳಿಗೆ ಮೂರು ದಿನಗಳ ಪ್ರವಾಸ ಕೈಗೊಂಡಿದ್ದ ಪ್ರಧಾನಿ ನರೇಂದ್ರ ಮೋದಿ ಸ್ವದೇಶಕ್ಕೆ ಮರಳಿದ್ದಾರೆ. ಎರಡು ದೇಶಗಳ ನಾಯಕರ ಜೊತೆಗೆ ದ್ವಿಪಕ್ಷೀಯ ಸಂಬಂಧ ಬಲವರ್ಧನೆ ಕುರಿತು ಅನೇಕ ಸಭೆಗಳನ್ನು ನಡೆಸಿದ್ದು, ಹಲವು ಒಪ್ಪಂದಗಳಿಗೂ ಸಹಿ ಹಾಕಲಾಗಿದೆ.
ಮೊದಲಿಗೆ ಬ್ರೂನೈಗೆ ಭೇಟಿ ನೀಡಿದ ಮೋದಿ, ಅಲ್ಲಿನ ಸುಲ್ತಾನ ಹಾಜಿ ಹಸನಲ್ ಬೊಲ್ಕಿಯಾ ಜೊತೆಗೆ ಅನೇಕ ವಿಷಯಗಳ ಕುರಿತು ಮಾತುಕತೆ ನಡೆಸಿದ್ದರು. ಈ ವೇಳೆ ಎರಡೂ ದೇಶಗಳ ನಡುವೆ ಸಿಮೆಂಟ್ ಪೂರೈಕೆ ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು.
ಬಳಿಕ ಸಿಂಗಾಪುರ್‌ಗೆ ಭೇಟಿ ನೀಡಿದ ಮೋದಿ ಅಲ್ಲಿನ ಪ್ರಧಾನಿ ಲಾರೆನ್ಸ್ ವೊಂಗ್ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಡಿಜಿಟಲ್ ಟೆಕ್ನಾಲಜಿ, ಕೌಶಲ್ಯ ಅಭಿವೃದ್ಧಿ ಮತ್ತು ಆರೋಗ್ಯ ಸೇವೆ ಸೇರಿದಂತೆ ನಾಲ್ಕು ಪ್ರಮುಖ ಒಪ್ಪಂದಕ್ಕೆ ಸಹಿ ಹಾಕಿದರು. ಇದೇ ವೇಳೆ, ವೊಂಗ್ ಅವರನ್ನು ಮೋದಿ ಭಾರತಕ್ಕೆ ಆಹ್ವಾನಿಸಿದರು.
ಇಂದು ಜಲ್ ಸಂಚಯ್ ಜನ್ ಭಾಗೀದಾರಿ ಯೋಜನೆಗೆ ಚಾಲನೆ:ಪ್ರಧಾನಿ ಮೋದಿ ಇಂದು ಗುಜರಾತ್ನ ಸೂರತ್ನಲ್ಲಿ ಜಲ್ ಸಂಚಯ್ ಜನ್ ಭಾಗೀದಾರಿ ಯೋಜನೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಲಿದ್ದಾರೆ.
ಈ ಕುರಿತು 'ಎಕ್ಸ್' ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು, 'ನಮ್ಮ ಸರ್ಕಾರ ನೀರಿನ ಸಂರಕ್ಷಣೆಗೆ ಬದ್ಧವಾಗಿದೆ. ಈ ನಿಟ್ಟಿನಲ್ಲಿ ಮಧ್ಯಾಹ್ನ 12.30ಕ್ಕೆ ಸೂರತ್ನಲ್ಲಿ ನಡೆಯಲಿರುವ ಜಲ್ ಸಂಚಯ್ ಜನ್ ಭಾಗೀದಾರಿ ಕಾರ್ಯಕ್ರಮವನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸುತ್ತೇನೆ' ಎಂದು ತಿಳಿಸಿದ್ದಾರೆ.
ಏನಿದು ಯೋಜನೆ?: ಮಳೆ ನೀರಿನ ಕೊಯ್ಲು, ದೀರ್ಘಾವಧಿ ನೀರಿನ ಭದ್ರತೆ, ನಿರ್ವಹಣೆ, ಜನರು, ಸ್ಥಳೀಯ ಆಡಳಿತ, ಉದ್ಯಮಗಳಿಗೆ ಪರಿಣಾಮಕಾರಿಯಾಗಿ ಮಳೆನೀರಿ ಕೊಯ್ಲು ಅಳವಡಿಸುವಂತೆ ಪ್ರೋತ್ಸಾಹಿಸುವುದು ಈ ಯೋಜನೆಯ ಉದ್ದೇಶಗಳಾಗಿವೆ. (ಐಎಎನ್ಎಸ್)
ಇದನ್ನೂ ಓದಿ: ಅಗ್ನಿಪಥ್ ಯೋಜನೆಯಲ್ಲಿ ಬದಲಾವಣೆಗೆ ಮುಂದಾದ ಕೇಂದ್ರ ಸರ್ಕಾರ: ಈ ನಿಯಮಗಳು ಪರಿಷ್ಕರಣೆ ಸಾಧ್ಯತೆ