ನವದೆಹಲಿ:2047ರ 'ವಿಕಸಿತ ಭಾರತ'ಕ್ಕಾಗಿ ನಾವು ಹಳೆಯ ಚಿಂತನೆ ಮತ್ತು ನಂಬಿಕೆಗಳನ್ನು ಬದಲಾಯಿಸಬೇಕು. ನಿರಾಶಾವಾದಿಗಳ ಹಿಡಿತದಿಂದ ದೇಶವನ್ನು ಮುಕ್ತಗೊಳಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿದ್ದಾರೆ.
ದೇಶ ಮುಂದಿನ 25 ವರ್ಷದಲ್ಲಿ ಸ್ವಾತಂತ್ರ್ಯದ ಶತಮಾನೋತ್ಸವ ಆಚರಿಸಲಿದ್ದೇವೆ. ಅಷ್ಟರೊಳಗೆ ರಾಷ್ಟ್ರ ಅಭ್ಯುದಯ ಸಾಧಿಸುವಂತಾಗಲು ವೇಗ, ವ್ಯಾಪ್ತಿ, ಪ್ರಮಾಣ ಮತ್ತು ಮಾನದಂಡಗಳ ಆಧಾರದ ಮೇಲೆ ನಾವು ತ್ವರಿತವಾಗಿ ಕೆಲಸ ಮಾಡಬೇಕು. ಇದು ವಿಕಸಿತ ಭಾರತಕ್ಕೆ ಅಡಿಪಾಯವಾಗಲಿದೆ ಎಂದು ಅವರು ಹೇಳಿದ್ದಾರೆ.
ಧ್ಯಾನ ಮುಗಿಸಿಕೊಂಡು ತಮಿಳುನಾಡಿನ ಕನ್ಯಾಕುಮಾರಿಯಿಂದ ದೆಹಲಿಗೆ ಹೊರಡುವ ಮಾರ್ಗಮಧ್ಯೆ ಅವರು ದೇಶದ ಜನರಿಗೆ ಬರೆದ ಪತ್ರದಲ್ಲಿ 'ಭವ್ಯ ಭಾರತ' ಕನಸು ಮತ್ತು ಜನರು ಮಾಡಬೇಕಾದ ಕೆಲಸಗಳ ಬಗ್ಗೆ ಸವಿಸ್ತಾರವಾಗಿ ಬರೆದಿದ್ದಾರೆ.
ಅಭಿವೃದ್ಧಿ ಚಿಂತನೆ ಬದಲಿಸಬೇಕು:21ನೇ ಶತಮಾನದ ಜಗತ್ತು ಭಾರತದ ಪ್ರಗತಿಯನ್ನು ಬೆರಗುಗಣ್ಣಿನಿಂದ ನೋಡುತ್ತಿದೆ. ಜಾಗತಿಕ ನಾಯಕತ್ವ ವಹಿಸುವತ್ತ ನಾವು ಮುಂದುವರಿಯಬೇಕಾದರೆ, ಹಲವಾರು ಬದಲಾವಣೆಗಳನ್ನು ಮಾಡಿಕೊಳ್ಳಬೇಕು. ಅಭಿವೃದ್ಧಿ ವಿಚಾರದಲ್ಲಿ ನಾವು ಸಾಂಪ್ರದಾಯಿಕ ಹಳೆಯ ಚಿಂತನೆಯಲ್ಲಿ ಮೊದಲು ಬದಲಾವಣೆ ಮಾಡಿಕೊಳ್ಳಬೇಕು. ಸುಧಾರಣೆ ಎಂದರೆ, ಅದು ಕೇವಲ ಆರ್ಥಿಕತೆ ಮಾತ್ರವಲ್ಲ ಎಂಬುದನ್ನು ಪ್ರಧಾನಿ ಪತ್ರದಲ್ಲಿ ಹೇಳಿದ್ದಾರೆ.
ಅಭಿವೃದ್ಧಿಶೀಲ ರಾಷ್ಟ್ರಕ್ಕಾಗಿ ಸುಧಾರಣೆ, ಸಾಧನೆ ಮತ್ತು ಪರಿವರ್ತನೆಯ ಹಾದಿಯನ್ನು ಹಾಕಿದ್ದೇನೆ. ಇದನ್ನು ಮುಂದುವರಿಸಿಕೊಂಡು ಹೋಗುವ ಜವಾಬ್ದಾರಿ ನಾಯಕರ ಮೇಲಿದೆ. ಇವುಗಳ ಆಧಾರದ ಮೇಲೆ ಅಧಿಕಾರ ವರ್ಗ ಕೆಲಸ ಮಾಡಬೇಕು. ಜನರೂ ಇದರಲ್ಲಿ ಭಾಗಿಯಾದಾಗ ಪರಿವರ್ತನೆಯಲ್ಲಿ ವೇಗ ಇನ್ನಷ್ಟು ಹೆಚ್ಚಲಿದೆ ಎಂದಿದ್ದಾರೆ.
ಪ್ರಗತಿಗಾಗಿ ನಾಲ್ಕು ಸೂತ್ರಗಳು:ವಿಕಸಿತ ಭಾರತಕ್ಕಾಗಿ ನಾವು ಶ್ರೇಷ್ಠತೆಯನ್ನು ಮೂಲಭೂತ ತತ್ವವನ್ನಾಗಿ ಮಾಡಿಕೊಳ್ಳಬೇಕು. ವೇಗ, ಪ್ರಮಾಣ, ವ್ಯಾಪ್ತಿ ಮತ್ತು ಮಾನದಂಡಗಳು ನಮ್ಮ ಕೆಲಸದ ಪರಿಮಾಣವಾಗಬೇಕು. ಗುಣಮಟ್ಟದ ಮೇಲೆ ಕೇಂದ್ರೀಕರಿಸಬೇಕು. 'ಶೂನ್ಯ ದೋಷ-ಶೂನ್ಯ ಪರಿಣಾಮ' ಹೊಂದಿರಬೇಕು. ದೇಶದ ಅನಂತ ಮತ್ತು ಶಾಶ್ವತ ಶಕ್ತಿಯಲ್ಲಿ ನಂಬಿಕೆ ಇರಬೇಕು. ಕಳೆದ 10 ವರ್ಷಗಳಲ್ಲಿ ದೇಶದ ಸಾಮರ್ಥ್ಯದ ಪರಿಚಯವಾಗಿದೆ ಎಂದು ಮೋದಿ ಹೇಳಿದ್ದಾರೆ.
ಅಭೂತಪೂರ್ವ ಬೆಳವಣಿಗೆಯೊಂದರಲ್ಲಿ ಕೇವಲ 10 ವರ್ಷಗಳಲ್ಲಿ 25 ಕೋಟಿಗೂ ಹೆಚ್ಚು ಜನರು ಬಡತನದಿಂದ ಹೊರಬಂದಿರುವುದು ದೇಶದ ಆಡಳಿತ ವ್ಯವಸ್ಥೆಯು ಪ್ರಪಂಚದ ಅನೇಕ ದೇಶಗಳಿಗೆ ಮಾದರಿಯಾಗಿದೆ. 'ಡಿಜಿಟಲ್ ಇಂಡಿಯಾ' ಅಭಿಯಾನ ಜಗತ್ತಿಗೇ ಉದಾಹರಣೆಯಾಗಿದೆ. ಬಡವರ ಸಬಲೀಕರಣ, ಹಕ್ಕುಗಳ ರಕ್ಷಣೆಯಲ್ಲಿ ತಂತ್ರಜ್ಞಾನವನ್ನು ಹೇಗೆ ಬಳಸಬಹುದು ಎಂಬುದನ್ನು ಸರ್ಕಾರ ಸಾಧಿಸಿ ತೋರಿಸಿದೆ ಎಂದು ಪತ್ರದಲ್ಲಿ ಮೋದಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ:ಹೊಸ ಸರ್ಕಾರದ 100 ದಿನಗಳ ಕಾರ್ಯಸೂಚಿ ಬಗ್ಗೆ ಅಧಿಕಾರಿಗಳೊಂದಿಗೆ ಪ್ರಧಾನಿ ಮೋದಿ ಸಭೆ - PM Modi Meeting