ನವದೆಹಲಿ: ಭಾರತವು ಸಂವಿಧಾನವನ್ನು ಅಂಗೀಕರಿಸಿದ 75ನೇ ವರ್ಷಾಚರಣೆಯ ಭಾಗವಾಗಿ ದೇಶಾದ್ಯಂತ ಸಂವಿಧಾನ ಓದು ಅಭಿಯಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ. ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮ 'ಮನ್ ಕಿ ಬಾತ್' ನ 117 ನೇ ಸಂಚಿಕೆಯಲ್ಲಿ ಭಾನುವಾರ ಪ್ರಧಾನಿ ಈ ಘೋಷಣೆ ಮಾಡಿದ್ದಾರೆ.
"2025ನೇ ವರ್ಷ ಇನ್ನೇನು ಕೆಲವೇ ದಿನಗಳ ಹತ್ತಿರದಲ್ಲಿದೆ. ಜನವರಿ 26, 2025 ಕ್ಕೆ ಸಂವಿಧಾನವನ್ನು ಅಂಗೀಕರಿಸಿ 75 ವರ್ಷಗಳು ತುಂಬುತ್ತವೆ. ಇದು ನಮ್ಮೆಲ್ಲರಿಗೂ ಅಪಾರ ಹೆಮ್ಮೆಯ ವಿಷಯವಾಗಿದೆ. ನಮ್ಮ ಸಂವಿಧಾನ ರಚನಾಕಾರರು ನಮಗೆ ನೀಡಿದ ಸಂವಿಧಾನವು ಸಮಯದ ಪರೀಕ್ಷೆಯನ್ನು ಎದುರಿಸಿದೆ. ಸಂವಿಧಾನ ನಮ್ಮ ದಾರಿದೀಪ. ಸಂವಿಧಾನ ನೀಡಿದ ಶಕ್ತಿಯಿಂದಲೇ ನಾನು ಇಂದು ಈ ಸ್ಥಾನದಲ್ಲಿದ್ದೇನೆ ಮತ್ತು ನಿಮ್ಮೊಂದಿಗೆ ಮಾತನಾಡುತ್ತಿದ್ದೇನೆ" ಎಂದು ಅವರು ಹೇಳಿದರು.
"ಈ ವರ್ಷದ ನವೆಂಬರ್ 26 ರಂದು ಭಾರತವು ತನ್ನ ಸಂವಿಧಾನವನ್ನು ಅಂಗೀಕರಿಸಿದ 75 ನೇ ವರ್ಷಾಚರಣೆಯ ಅಂಗವಾಗಿ ಸಂವಿಧಾನ್ ದಿವಸ್ ಆಚರಿಸಲಾಯಿತು. ಈ ಮೈಲಿಗಲ್ಲನ್ನು ಗೌರವಿಸಲು, ಸಂವಿಧಾನದ ಪೀಠಿಕೆಯನ್ನು ಓದಲು ಮತ್ತು ನಾಗರಿಕರು ವೀಡಿಯೊಗಳನ್ನು ಹಂಚಿಕೊಳ್ಳಲು ಆಹ್ವಾನಿಸುವ ರಾಷ್ಟ್ರವ್ಯಾಪಿ ಅಭಿಯಾನವನ್ನು ನಡೆಸಲಾಗುವುದು. ಆ ಮೂಲಕ ಸಾಮೂಹಿಕ ಹೆಮ್ಮೆ ಮತ್ತು ಏಕತೆಯ ಪ್ರಜ್ಞೆಯನ್ನು ಜಾಗೃತಗೊಳಿಸಲಾಗುವುದು" ಎಂದು ಪ್ರಧಾನಿ ಹೇಳಿದರು.
ದೇಶದ ನಾಗರಿಕರನ್ನು ಸಂವಿಧಾನದ ಪರಂಪರೆಯೊಂದಿಗೆ ಸಂಪರ್ಕಿಸಲು ವಿಶೇಷ ವೆಬ್ ಸೈಟ್ http://Constitution75.com ರಚಿಸಲಾಗಿದೆ. ಶಾಲಾ ಕಾಲೇಜು ವಿದ್ಯಾರ್ಥಿಗಳು ಈ ವೆಬ್ಸೈಟ್ಗೆ ಭೇಟಿ ನೀಡಿ ಸಂವಿಧಾನ ದಿನಾಚರಣೆಯ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕೆಂದು ಅವರು ಕರೆ ನೀಡಿದರು.