ನವದೆಹಲಿ: 'ಬ್ರಿಕ್ಸ್ ಶೃಂಗಸಭೆ ವೇಳೆ ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ರೊಂದಿಗೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ ನಡೆಸಿದರು. ಈ ವೇಳೆ, ಭಾರತ ಮತ್ತು ಇರಾನ್ ನಡುವಿನ ಸಂಬಂಧಗಳ ಬಗ್ಗೆ ಸಮಾಲೋಚನೆ ನಡೆಸಲಾಯಿತು ' ಎಂದು ಪ್ರಧಾನಿ ಮೋದಿ ಅವರು ಮಂಗಳವಾರ ಹೇಳಿದ್ದಾರೆ.
ರಷ್ಯಾದ ಕಜಾನ್ ನಗರದಲ್ಲಿ ವ್ಲಾಡಿಮಿರ್ ಪುಟಿನ್ ಆಯೋಜಿಸಿರುವ 16ನೇ ಬ್ರಿಕ್ಸ್ ಶೃಂಗಸಭೆಯ ಮೊದಲ ದಿನದ ಮಾತುಕತೆ ಯಶಸ್ವಿಯಾಗಿ ಮಂಗಳವಾರ ನಡೆದಿದೆ. ಇಂದು ಕೂಡ ಶೃಂಗಸಭೆಯ 2ನೇ ದಿನದ ಅಧಿವೇಶನಗಳು ಮುಂದುವರೆಯಲಿವೆ. ಈ ಶೃಂಗಸಭೆಯಲ್ಲಿ ಭಾಗವಹಿಸಿರುವ ಮೋದಿ ಅವರು ಸಭೆಯಲ್ಲಿ ನಡೆದ ಮಾತುಕತೆಯ ಬಗ್ಗೆ ತಮ್ಮ X ಖಾತೆಯ ಮೂಲಕ ಹಂಚಿಕೊಂಡಿದ್ದಾರೆ.
"ಇರಾನ್‌ನ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರೊಂದಿಗೆ ಉತ್ತಮ ಸಭೆಯನ್ನು ನಡೆಸಿದ್ದೇವೆ. ನಾವು ನಮ್ಮ ದೇಶಗಳ ನಡುವಿನ ಸಂಪೂರ್ಣ ಶ್ರೇಣಿಯ ಸಂಬಂಧಗಳನ್ನು ಪರಿಶೀಲಿಸಿದ್ದೇವೆ. ಭವಿಷ್ಯದಲ್ಲಿ 2 ದೇಶಗಳ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸುವ ಮಾರ್ಗಗಳ ಬಗ್ಗೆಯೂ ನಾವು ಚರ್ಚಿಸಿದ್ದೇವೆ" ಎಂದು ಬರೆದು ಮೋದಿ ಅವರು ಪೋಸ್ಟ್ ಹಾಕಿಕೊಂಡಿದ್ದಾರೆ.
ಮಸೌದ್ ಪೆಜೆಶ್ಕಿಯಾನ್ ಇರಾನ್ ಅಧ್ಯಕ್ಷರಾದ ನಂತರ ಮೋದಿ ಅವರೊಂದಿಗಿನ ಮೊದಲ ದ್ವಿಪಕ್ಷೀಯ ಸಭೆ ಇದಾಗಿದೆ. ನಿಮಗೆ ತಿಳಿದಿರುವಂತೆ ಹೆಲಿಕಾಪ್ಟರ್ ಅಪಘಾತದಲ್ಲಿ ಮೇ 19 ರಂದು ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಮರಣ ಹೊಂದಿದ್ದರು. ಆ ಬಳಿಕ ಜುಲೈನಲ್ಲಿ ಇರಾನ್ ಅಧ್ಯಕ್ಷರಾಗಿ ಮಸೌದ್ ಪೆಜೆಶ್ಕಿಯಾನ್ ಅಧಿಕಾರ ಸ್ವೀಕರಿಸಿದ್ದಾರೆ. ಇರಾನ್‌ನ 9ನೇ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಪೆಜೆಶ್ಕಿಯಾನ್ ಅವರನ್ನು ಪ್ರಧಾನಿ ಮೋದಿ ಅಭಿನಂದಿಸಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಶೃಂಗಸಭೆಯಲ್ಲಿ ಇರಾನ್ ದೇಶವನ್ನು ಬ್ರಿಕ್ಸ್ ಕುಟುಂಬಕ್ಕೆ ಸ್ವಾಗತಿಸಲಾಯಿತು. ಪಿಎಂ ಮೋದಿ ಹಾಗೂ ಇರಾನ್ ಅಧ್ಯಕ್ಷರು ದ್ವಿಪಕ್ಷೀಯ ಸಂಬಂಧಗಳ ಬಗ್ಗೆ ಚರ್ಚಿಸಿದರು. ಚಬಹಾರ್ ಬಂದರಿನ ದೀರ್ಘಾವಧಿಯ ಒಪ್ಪಂದಕ್ಕೆ ಸಹಿ ಹಾಕುವುದು ದ್ವಿಪಕ್ಷೀಯ ಸಂಬಂಧಗಳಲ್ಲಿ ಪ್ರಮುಖ ಮೈಲಿಗಲ್ಲು ಎಂದು ಗಮನಿಸಲಾಗಿದೆ. ಅಫ್ಘಾನಿಸ್ತಾನದ ಪುನರ್ನಿರ್ಮಾಣ ಮತ್ತು ಪುನರಾಭಿವೃದ್ಧಿಗೆ ಮತ್ತು ಮಧ್ಯ ಏಷ್ಯಾದೊಂದಿಗೆ ವ್ಯಾಪಾರ ಮತ್ತು ಆರ್ಥಿಕ ಸಂಪರ್ಕಗಳನ್ನು ಹೆಚ್ಚಿಸಲು ಇಬ್ಬರು ನಾಯಕರು ಅದರ ಪ್ರಾಮುಖ್ಯತೆಯನ್ನು ಪುನರುಚ್ಚರಿಸಿದ್ದಾರೆ. ಹಾಗೇ, ಪಶ್ಚಿಮ ಏಷ್ಯಾದ ಪರಿಸ್ಥಿತಿ ಒಳಗೊಂಡಂತೆ ಪ್ರಾದೇಶಿಕ ಅಭಿವೃದ್ಧಿಯ ಬಗ್ಗೆ ಉಭಯ ನಾಯಕರು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿದೆ.
ಇದನ್ನೂ ಓದಿ:ಬ್ರಿಕ್ಸ್ ಶೃಂಗಸಭೆ: ಚೀನಾ ಅಧ್ಯಕ್ಷರ ಜೊತೆ ಇಂದು ದ್ವಿಪಕ್ಷೀಯ ಮಾತುಕತೆ ನಡೆಸಲಿರುವ ನರೇಂದ್ರ ಮೋದಿ