ಬೆಂಗಳೂರು: ಇಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ 92ನೇ ವರ್ಷದ ಜನ್ಮದಿನದ ಸಂಭ್ರಮ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಸೇರಿದಂತೆ ಹಲವು ಗಣ್ಯರು ಶುಭ ಕೋರಿದ್ದಾರೆ.
ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ಮೋದಿ, 'ಮಾಜಿ ಪ್ರಧಾನಿ ಡಾ.ಮನಮೋಹನ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. ನಿಮಗೆ ದೀರ್ಘಾಯುಷ್ಯ ಮತ್ತು ಆರೋಗ್ಯಯುತ ಜೀವನ ಸಿಗಲಿ ಎಂದು ಪ್ರಾರ್ಥಿಸುತ್ತೇನೆ' ಎಂದು ಶುಭ ಹಾರೈಸಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿ, 'ದೇಶದ ಭವಿಷ್ಯ ರೂಪಿಸುವಲ್ಲಿ ನಿಮ್ಮ ಬುದ್ಧಿವಂತಿಕೆ ಮತ್ತು ನಿಸ್ವಾರ್ಥ ಸೇವೆ ನನಗೆ ಮತ್ತು ಲಕ್ಷಾಂತರ ಭಾರತೀಯರಿಗೆ ಸ್ಫೂರ್ತಿ ನೀಡಿದೆ. ನಿಮಗೆ ಉತ್ತಮ ಆರೋಗ್ಯ ಮತ್ತು ಸಂತೋಷದಾಯಕ ಜೀವನ ಸಿಗಲೆಂದು ಬಯಸುತ್ತೇನೆ' ಎಂದು ತಿಳಿಸಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಪ್ರತಿಕ್ರಿಯಿಸಿ, 'ನೀವು ರಾಜಕೀಯ ಕ್ಷೇತ್ರದಲ್ಲಿ ಸರಳತೆ, ಘನತೆ ಮತ್ತು ಜಾಣ್ಮೆಯ ವ್ಯಕ್ತಿ. ನಿಮಗೆ ಪ್ರೀತಿಯ ಶುಭಾಶಯ' ಎಂದಿದ್ದಾರೆ. ಮುಂದುವರೆದು, 'ಮಾತಿಗಿಂತ ಕೆಲಸದ ಮೂಲಕ ಸದ್ದು ಮಾಡಿದ ರಾಜಕಾರಣಿ. ದೇಶಕ್ಕೆ ನೀವು ನೀಡಿರುವ ಕೊಡುಗೆಗಳಿಗೆ ನಾವು ಕೃತಜ್ಞರು. ಉತ್ತಮ ಆರೋಗ್ಯ, ಸಂತೋಷ ಮತ್ತು ದೀರ್ಘಾಯುಷ್ಯ ಸಿಗಲೆಂದು ಹಾರೈಸುತ್ತೇನೆ' ಎಂದು ಬರೆದುಕೊಂಡಿದ್ದಾರೆ.
ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಶುಭ ಹಾರೈಸಿದ್ದು, 'ದೂರದೃಷ್ಟಿಯ ನಾಯಕತ್ವ ಮತ್ತು ಭಾರತದ ಆರ್ಥಿಕತೆ ಸುಧಾರಣೆಯಲ್ಲಿ ಡಾ.ಸಿಂಗ್ ಸೇವೆ ಸ್ಮರಣೀಯ ಮತ್ತು ಶಾಶ್ವತ' ಎಂದು ತಿಳಿಸಿದ್ದಾರೆ.
ಡಾ.ಮನಮೋಹನ್ ಸಿಂಗ್ ಅವರು ಯುಪಿಎ ಸರ್ಕಾರದಲ್ಲಿ 2004ರಿಂದ 2014ರವರೆಗೆ ಭಾರತದ ಪ್ರಧಾನ ಮಂತ್ರಿಯಾಗಿ ಕಾರ್ಯ ನಿರ್ವಹಿಸಿದ್ದರು. 1991-96ರ ಪಿ.ವಿ.ನರಸಿಂಹ ರಾವ್ ಅವಧಿಯಲ್ಲಿ ಹಣಕಾಸು ಸಚಿವರಾಗಿ ಅನೇಕ ಆರ್ಥಿಕ ಸುಧಾರಣೆಗಳನ್ನು ಮಾಡಿದ್ದರು.
ಇದನ್ನೂ ಓದಿ:ಹರಿಯಾಣದಲ್ಲಿ ಸದ್ದು ಮಾಡಿದ ಮುಡಾ ಪ್ರಕರಣ: ಕಾಂಗ್ರೆಸ್ ವಿರುದ್ಧ ಪಿಎಂ ಮೋದಿ ವಾಗ್ದಾಳಿ