ನವದೆಹಲಿ:ಜಮ್ಮು- ಕಾಶ್ಮೀರ ವಿಧಾನಸಭೆ ಚುನಾವಣೆ ಪ್ರಚಾರ ನಡೆಸುತ್ತಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರು ಭಾಷಣದ ವೇಳೆ ಅಸ್ವಸ್ಥರಾದ ಘಟನೆ ನಡೆದಿತ್ತು. ಇದರ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್ ಹಿರಿಯ ನಾಯಕನಿಗೆ ಕರೆ ಮಾಡಿ ಆರೋಗ್ಯ ವಿಚಾರಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಕಥುವಾ ಜಿಲ್ಲೆಯ ಜಸ್ರೋಟಾ ಬೆಲ್ಟ್‌ನಲ್ಲಿ ಭಾನುವಾರ ಸಾರ್ವಜನಿಕ ರ್ಯಾಲಿಯನ್ನುದ್ದೇಶಿಸಿ ಮಾತನಾಡುವಾಗ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಅಸ್ವಸ್ಥರಾದರು. ತಕ್ಷಣವೇ ವೇದಿಕೆ ಮೇಲಿದ್ದವರು ಕೈ ಹಿಡಿದುಕೊಂಡು ಆರೈಕೆ ಮಾಡಿದರು.
ಭಾಷಣ ಮುಂದುವರಿಸಲು ಪ್ರಯತ್ನಪಟ್ಟರೂ ಸಾಧ್ಯವಾಗಲಿಲ್ಲ. ನೀರು ಕುಡಿದು ತುಸು ಹೊತ್ತು ಸುಧಾರಿಸಿಕೊಂಡ ಬಳಿಕ ಭಾಷಣ ಮುಂದುವರಿಸಿದರು. ಕಾರ್ಯಕ್ರಮ ಮುಗಿದ ಬಳಿಕ ಖರ್ಗೆ ಅವರನ್ನು ವೈದ್ಯರ ಬಳಿಗೆ ಕರೆದೊಯ್ಯಲಾಗಿದೆ. ತಪಾಸಣೆ ನಡೆಸಲಾಗಿದ್ದು, ಸದ್ಯ ಅವರ ಆರೋಗ್ಯ ಉತ್ತಮವಾಗಿದೆ ಎಂದು ಪಕ್ಷದ ಮುಖಂಡರು ತಿಳಿಸಿದ್ದಾರೆ.
ಅಬ್ಬರಿಸಿದ ಖರ್ಗೆ:ಹಠಾತ್ತನೆ ಅಸ್ವಸ್ಥರಾಗಿ, ಬಳಿಕ ಚೇತರಿಸಿಕೊಂಡ ಖರ್ಗೆ ಅವರು ಮಾತು ಮುಂದುವರಿಸಿ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಧಿಕಾರದಿಂದ ಕೆಳಗಿಳಿಸುವವರೆಗೂ ನಾನು ಸಾಯುವುದಿಲ್ಲ ಎಂದರು.
"ನಾವು ಜಮ್ಮು- ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನವನ್ನು ಪುನಃಸ್ಥಾಪಿಸಲು ಹೋರಾಡುತ್ತೇವೆ. ನನಗೆ 83 ವರ್ಷ ವಯಸ್ಸು, ಆದರೆ ನಾನು ಇಷ್ಟು ಬೇಗ ಸಾಯುವುದಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಧಿಕಾರದಿಂದ ಕೆಳಗಿಳಿಸುವವರೆಗೂ ನಾನು ಜೀವಂತವಾಗಿರುತ್ತೇನೆ" ಎಂದರು.