ವಾರಾಣಸಿ: ಪ್ರಧಾನಿ ನರೇಂದ್ರ ಮೋದಿ ಅವರು ಮೇ 14 ರಂದು ಉತ್ತರ ಪ್ರದೇಶದ ವಾರಾಣಸಿ ಲೋಕಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಲಿದ್ದು, ಅದಕ್ಕೂ ಮನ್ನ ಮೇ 13 ರಂದು ಜಿಲ್ಲೆಯಲ್ಲಿ ಭರ್ಜರಿ ರೋಡ್ ಶೋ ನಡೆಸಲಿದ್ದಾರೆ. ಅವರ ನಾಮಪತ್ರ ಸಲ್ಲಿಕೆ ದಿನವನ್ನು ಐತಿಹಾಸಿಕ ದಿನವನ್ನಾಗಿ ಮಾಡಲು ಬಿಜೆಪಿ ಬೃಹತ್ ಯೋಜನೆ ಹಾಕಿಕೊಂಡಿದೆ.
ಅರ್ಧ ಡಜನ್‌ಗಿಂತಲೂ ಹೆಚ್ಚು ರಾಜ್ಯಗಳ ಮುಖ್ಯಮಂತ್ರಿಗಳು, ಹತ್ತಕ್ಕೂ ಹೆಚ್ಚು ಕೇಂದ್ರ ಸಚಿವರು ಮತ್ತು ಅಷ್ಟೇ ಸಂಖ್ಯೆಯ ಕ್ಯಾಬಿನೆಟ್ ಮಂತ್ರಿಗಳು ಮೋದಿ ಅವರ ರೋಡ್ ಶೋ ಮತ್ತು ನಾಮಪತ್ರ ಸಲ್ಲಿಕೆಯ ದಿನಕ್ಕೆ ಸಾಕ್ಷಿಯಾಗಲಿದ್ದಾರೆ. ಮೋದಿ ಅವರ ನಾಮಪತ್ರದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಎನ್‌ಡಿಎ ಮೈತ್ರಿಕೂಟದ ರಾಷ್ಟ್ರೀಯ ನಾಯಕರು ಮತ್ತು ಮುಖ್ಯಮಂತ್ರಿಗಳ ಉಪಸ್ಥಿತಿಗೆ ಸಿದ್ಧತೆ ನಡೆಸಲಾಗಿದೆ. ಇವರೊಂದಿಗೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಸಾರಿಗೆ ಸಚಿವ ನಿತಿನ್ ಗಡ್ಕರಿ, ಕೈಗಾರಿಕಾ ಸಚಿವ ಡಾ.ಮಹೇಂದ್ರ ನಾಥ್ ಪಾಂಡೆ, ಕೃಷಿ ಸಚಿವ ಅರ್ಜುನ್ ಮುಂಡಾ, ಕೇಂದ್ರ ಸಚಿವೆ ಅನುಪ್ರಿಯಾ ಪಟೇಲ್ ಸೇರಿದಂತೆ ಅನೇಕ ಕೇಂದ್ರ ಸಚಿವರು ಭಾಗಿಯಾಗಲಿದ್ದಾರೆ.
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ, ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್, ಛತ್ತೀಸ್‌ಗಢ ಮುಖ್ಯಮಂತ್ರಿ ವಿಷ್ಣು ದೇವ್ ಸಾಯಿ. ರಾಜಸ್ಥಾನ ಸಿಎಂ ಭಜನಲಾಲ್ ಶರ್ಮಾ, ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರಭಾಯಿ ಪಟೇಲ್ ಮತ್ತು ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಕೂಡ ಉಪಸ್ಥಿತರಿರುವರು. ಎನ್‌ಡಿಎ ಮೈತ್ರಿಕೂಟದ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಲೋಕ್ ಜನಶಕ್ತಿ ಪಕ್ಷದ ಚಿರಾಗ್ ಪಾಸ್ವಾನ್ ಅವರಿಗೂ ನಾಮಪತ್ರ ಸಲ್ಲಿಸಲು ಬರುವಂತೆ ಆಹ್ವಾನ ನೀಡಲಾಗಿದೆ. ಮೇ 13ರಂದು ನಡೆಯಲಿರುವ ಪ್ರಧಾನಿ ನರೇಂದ್ರ ಮೋದಿ ಅವರ ರೋಡ್ ಶೋ ಅನ್ನು ಅವಿಸ್ಮರಣೀಯವಾಗಿಸಲು ಬಿಜೆಪಿ ಭರದ ಸಿದ್ಧತೆ ಆರಂಭಿಸಿದೆ. ರೋಡ್ ಶೋನಲ್ಲಿ 5 ಲಕ್ಷಕ್ಕೂ ಹೆಚ್ಚು ಜನರನ್ನು ಒಟ್ಟುಗೂಡಿಸಲು ಸಿದ್ಧತೆ ನಡೆಸುತ್ತಿದೆ. 13 ರಂದು ವಾರಾಣಸಿಗೆ ಬರುವ ಪ್ರಧಾನಿ ಮೋದಿ, ಬನಾರಸ್ ಲೋಕೋಮೋಟಿವ್ ವರ್ಕ್‌ಶಾಪ್‌ನ ಅತಿಥಿ ಗೃಹದಲ್ಲಿ ರಾತ್ರಿ ವಿಶ್ರಾಂತಿ ಪಡೆಯಲಿದ್ದು, ಇಲ್ಲಿಂದ ಹೊರಟು ಮರುದಿನ ಬೆಳಗ್ಗೆ ಪೂಜೆ ಸಲ್ಲಿಸಲಿದ್ದಾರೆ. ಬಳಿಕ ನೇರವಾಗಿ ನಾಮಪತ್ರ ಸಲ್ಲಿಕೆಗೆ ತೆರಳಲಿದ್ದಾರೆ.