ಅಂಬಿಕಾಪುರ(ಛತ್ತೀಸ್‌ಗಢ): ಕಾಂಗ್ರೆಸ್‌ನ ಅಪಾಯಕಾರಿ ಉದ್ದೇಶಗಳು ಒಂದರ ನಂತರ ಒಂದರಂತೆ ಬೆಳಕಿಗೆ ಬರುತ್ತಿವೆ. ಈಗ ಕಷ್ಟಪಟ್ಟು ಸಂಪಾದಿಸುವ ನಿಮ್ಮ ಮಕ್ಕಳ ಮೇಲೂ ಪಿತ್ರಾರ್ಜಿತ ತೆರಿಗೆ ಹೇರುವುದಾಗಿ ಆ ಪಕ್ಷ ಹೇಳುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದರು.
ಮಾ ಮಹಾಮಾಯಿ ಕಿ ಜೈ ಘೋಷಣೆಯೊಂದಿಗೆ ಇಂದು ಪ್ರಧಾನಿ ಮೋದಿ ಛತ್ತೀಸ್‌ಗಢದ ಸರ್ಗುಜಾ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ಸಭೆ ಉದ್ದೇಶಿಸಿ ಮಾತನಾಡಿದರು.
ಭಾರತ ಸ್ವಾವಲಂಬಿಯಾದರೆ ಕೆಲವು ಶಕ್ತಿಗಳ ಆಟಗಳು ಬಂದ್ ಆಗುತ್ತವೆ. ಬಿಜೆಪಿ ಭಯೋತ್ಪಾದನೆ ಮತ್ತು ನಕ್ಸಲ್ ಚಟುವಟಿಕೆಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುತ್ತಿದೆ. ಹಿಂಸಾಚಾರ ಹರಡುವವರನ್ನು ಕಾಂಗ್ರೆಸ್ ಬೆಂಬಲಿಸುತ್ತಿದೆ ಎಂದು ದೂರಿದರು.
ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಮುಸ್ಲಿಂ ಲೀಗ್‌ನ ಛಾಪು ಇದೆ. ಸಂವಿಧಾನ ರಚನೆಯಾಗುತ್ತಿರುವಾಗ ದೇಶದ ಪ್ರಜ್ಞಾವಂತರು ಒಟ್ಟಾಗಿ ಸೇರಿ ಭಾರತದಲ್ಲಿ ಧರ್ಮ ಆಧಾರದ ಮೇಲೆ ಮೀಸಲಾತಿ ಬೇಡ. ದಲಿತರು, ಗಿರಿಜನರ ಹೆಸರಲ್ಲಿ ಮೀಸಲಾತಿ ನೀಡುವುದಾಗಿ ತೀರ್ಮಾನಿಸಿದ್ದರು. ಆದರೆ ವೋಟ್ ಬ್ಯಾಂಕ್ ಹಸಿವಿನ ಕಾಂಗ್ರೆಸ್ ಇದಕ್ಕೆ ಕ್ಯಾರೇ ಎನ್ನಲಿಲ್ಲ. ಸಂವಿಧಾನ, ಬಾಬಾ ಸಾಹೇಬರ ಮಾತುಗಳ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ವರ್ಷಗಳ ಹಿಂದೆಯೇ ಆಂಧ್ರಪ್ರದೇಶದಲ್ಲಿ ಧರ್ಮದ ಆಧಾರದ ಮೇಲೆ ಮೀಸಲಾತಿ ನೀಡಲು ಕಾಂಗ್ರೆಸ್ ಯೋಜಿಸಿತ್ತು ಎಂದು ಆರೋಪಿಸಿದರು.