ನವದೆಹಲಿ:ಅನ್ನದಾತರಿಗೆ ಸಂತಸದ ಸುದ್ದಿ. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 18ನೇ ಕಂತಿನ ಬಿಡುಗಡೆ ದಿನಾಂಕವನ್ನು ಕೇಂದ್ರ ಸರ್ಕಾರ ಪ್ರಕಟಿಸಿದೆ. ಈ ಯೋಜನೆಯ ಮೂಲಕ 9 ಕೋಟಿಗೂ ಹೆಚ್ಚು ರೈತರು ಪ್ರಯೋಜನ ಪಡೆಯಲಿದ್ದಾರೆ. ಹಾಗಾದರೆ, ಈ ಹಣ ರೈತರ ಖಾತೆಗೆ ಜಮಾ ಆಗುವುದು ಯಾವಾಗ? ಇ-ಕೆವೈಸಿಯನ್ನು ಯಾರಾದರೂ ಇನ್ನೂ ಮಾಡದಿದ್ದರೆ ಅದನ್ನು ಪೂರ್ಣಗೊಳಿಸುವುದು ಹೇಗೆ? ಅದನ್ನು ಈ ಸ್ಟೋರಿಯಲ್ಲಿ ನೋಡೋಣ.
ರೈತರಿಗೆ ಆರ್ಥಿಕ ಭದ್ರತೆ ಒದಗಿಸಲು ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು 2019 ರ ಫೆಬ್ರವರಿಯಲ್ಲಿ ಜಾರಿಗೆ ತಂದಿದೆ. ಈ ಯೋಜನೆಯ ಮೂಲಕ ರೈತರಿಗೆ ಪ್ರತಿ ಎಕರೆಗೆ ವರ್ಷಕ್ಕೆ 6 ಸಾವಿರ ರೂಪಾಯಿ ಬೆಳೆ ನೆರವು ನೀಡಲಾಗುತ್ತಿದೆ. ಈ 6 ಸಾವಿರ ರೂಪಾಯಿಯನ್ನು ಪ್ರತಿ ವರ್ಷ ಮೂರು ಕಂತುಗಳಲ್ಲಿ ನೇರವಾಗಿ ರೈತರ ಖಾತೆಗೆ ಜಮಾ ಮಾಡಲಾಗುತ್ತಿದೆ. ಏಪ್ರಿಲ್ - ಜುಲೈ ತಿಂಗಳಲ್ಲಿ ಮೊದಲ ಕಂತು, ಆಗಸ್ಟ್-ನವೆಂಬರ್ನಲ್ಲಿ ಎರಡನೇ ಕಂತು ಮತ್ತು ಡಿಸೆಂಬರ್-ಮಾರ್ಚ್ ಮೂರನೇ ಕಂತುಗಳಿಗೆ 2 ಸಾವಿರ ರೂಪಾಯಿಯನ್ನು ರೈತರಿಗೆ ನೇರವಾಗಿ ತಲುಪಿಸಲಾಗುತ್ತದೆ.
ಪಿಎಂ ಕಿಸಾನ್ ಯೋಜನೆ ಮೂಲಕ ಕೇಂದ್ರ ಸರ್ಕಾರ ಇದುವರೆಗೆ 17 ಬಾರಿ ರೈತರ ಖಾತೆಗೆ ಹಣ ಬಿಡುಗಡೆ ಮಾಡಿದೆ. ಇದೀಗ 18ನೇ ಕಂತಿನ ಹಣ ಬಿಡುಗಡೆಗಾಗಿ ಕಾದು ಕುಳಿತಿರುವ ರೈತರಿಗೆ ದಸರಾ ಮುನ್ನವೇ ಕೇಂದ್ರ ಶುಭಸುದ್ದಿ ನೀಡಿದೆ. ಅಕ್ಟೋಬರ್ 5 ರಂದು 18 ನೇ ಕಂತಿನ ಪಿಎಂ ಕಿಸಾನ್ ಹಣವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಬಿಡುಗಡೆ ಮಾಡಲಿದ್ದಾರೆ ಎಂದು ಪಿಎಂ ಕಿಸಾನ್‌ನ ಅಧಿಕೃತ ವೆಬ್‌ಸೈಟ್‌ನಲ್ಲಿ ತಿಳಿಸಲಾಗಿದೆ.