ರಾಮನಗರ(ಉತ್ತರಾಖಂಡ್): 'ನಗು' ಎಂಬುದು ಎಲ್ಲಾ ಸಮಸ್ಯೆಗೂ ರಾಮಬಾಣವಂತೆ. ಪ್ರಕೃತಿದತ್ತವಾದ ಈ ನಗು ಕೇವಲ ಮನುಷ್ಯರಿಗೆ ಮಾತ್ರ ಒಲಿದ ವರವಲ್ಲ ಎಂಬುದನ್ನು ಉತ್ತರಾಖಂಡದ ಮರ ಕೂಡಾ ಸಾಬೀತುಪಡಿಸಿದೆ. ಮುಟ್ಟಿದ್ರೆ ಮುನಿ ಸಸ್ಯದಂತೆ ಈ ಮರಕ್ಕೆ ನಯವಾಗಿ ಕಚಗುಳಿ ಇಟ್ಟರೆ ಎಲೆಗಳು ಹಸನ್ಮುಖಿಯಾಗಿ ಕಂಗೊಳಿಸುವುದಲ್ಲದೇ, ಎಲೆಗಳು ನಿಧಾನವಾಗಿ ಅಲುಗಾಡಿ, ಕೊಂಬೆ ನಗುವಿನಲ್ಲಿ ನಡುಗುವ ಅನುಭವವಾಗುತ್ತದೆ. ಇದೇ ಕಾರಣಕ್ಕೆ ಈ ಮರಕ್ಕೆ 'ನಗುವ ಮರ' ಎಂದು ಹೆಸರಿಡಲಾಗಿದೆ.
ರಾಮನಗರದ ಅರಣ್ಯದಲ್ಲಿ ಈ ಮರವನ್ನು ನೀವು ಕಾಣಬಹುದು. ರಾಂಡಿಯಾ ಡುಮಿಟೋರಮ್ ಎಂಬ ಜಾತಿಯ ಈ ಮರಕ್ಕೆ 'ಲಾಫಿಂಗ್ ಟ್ರಿ' ಎಂಬ ಹೆಸರಿದೆ. ಅಷ್ಟು ಮಾತ್ರವಲ್ಲ, ಔಷಧೀಯ ಗುಣವನ್ನೂ ಹೊಂದಿದ್ದು, ಪರಿಸರದಲ್ಲಿನ ಅಶುದ್ಧ ಗಾಳಿಯನ್ನು ಶುದ್ಧೀಕರಿಸುತ್ತದಂತೆ. ಮರಗಳ ಎಲೆ, ಕೊಂಬೆ ಮತ್ತು ತೊಗಟೆಗಳನ್ನು ಔಷಧ ತಯಾರಿಕೆಯಲ್ಲಿ ಬಳಸಲಾಗುತ್ತದೆ.
ಸ್ಥಳೀಯ ಭಾಷೆಯಲ್ಲಿ 'ಥಾನೈಲ್' ಎಂದೂ ಕರೆಯಲ್ಪಡುವ ಈ ಮರಗಳನ್ನು ನೈನಿತಾಲ್‌ನ ಛೋಟಿ ಹಲ್ದ್ವಾನಿ ಮತ್ತು ಕಾರ್ಬೆಟ್ ನಗರದಲ್ಲಿ ಹೆಚ್ಚಾಗಿ ಕಾಣಬಹುದು. ಇವು ಸುಮಾರು 300ರಿಂದ 1,300 ಮೀಟರ್ ಎತ್ತರ ಬೆಳೆಯುತ್ತದೆ.
ಜೀವವೈವಿಧ್ಯತೆಯ ತಾಣವಾಗಿ ರಾಮನಗರ ಖ್ಯಾತಿ ಗಳಿಸಿದೆ. ಇಲ್ಲಿನ ದಟ್ಟಾರಣ್ಯದಲ್ಲಿ ಎಲ್ಲಾ ರೀತಿಯ ಮರಗಿಡಗಳನ್ನು ಕಾಣಬಹುದು. ಈ ಪೈಕಿ ನಗುವ ಮರ ಎಲ್ಲರ ಗಮನ ಸೆಳೆಯುತ್ತಿದೆ. ಪ್ರಾಣಿಗಳ ಕೆಚ್ಚಲಿನಲ್ಲಿ ಗುಳ್ಳೆಯಾದಾಗ ಅಥವಾ ಇನ್ನಿತರ ಸಮಸ್ಯೆ ಕಾಣಿಸಿಕೊಂಡಾಗ ಈ ಮರದ ತೊಗಟೆಯನ್ನು ಪೇಸ್ಟ್ ರೂಪದಲ್ಲಿ ಹಚ್ಚುವುದರಿಂದ ಉಪಶಮನವಾಗುತ್ತದೆ ಎಂದು ಹೇಳಲಾಗುತ್ತಿದೆ.