ಇಟಾನಗರ(ಅರುಣಾಚಲ ಪ್ರದೇಶ): ಅರುಣಾಚಲ ಪ್ರದೇಶದಲ್ಲಿ ಸರ್ಕಾರ ರಚನೆಗೆ ಬಿಜೆಪಿ ಸಜ್ಜಾಗಿದೆ. ಬುಧವಾರ ಶಾಸಕಾಂಗ ಪಕ್ಷದ ನಾಯಕರಾಗಿ ಸಿಎಂ ಪೆಮಾ ಖಂಡು ಆಯ್ಕೆಯಾಗಿದ್ದಾರೆ. ಈ ಮೂಲಕ ಸತತ ಮೂರನೇ ಬಾರಿಗೆ ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದಾರೆ.
ಇತ್ತೀಚೆಗೆ ನಡೆದ ಚುನಾವಣೆಯಲ್ಲಿ 60 ಸದಸ್ಯ ಬಲದ ವಿಧಾನಸಭೆಯಲ್ಲಿ ಬಿಜೆಪಿ 46 ಸ್ಥಾನ ಗೆದ್ದಿದೆ. ಈಗ ಮೂರನೇ ಬಾರಿಗೆ ಅಧಿಕಾರಕ್ಕೆ ಬರಲು ಸಿದ್ಧತೆ ನಡೆಸುತ್ತಿದೆ. ಬಿಜೆಪಿಯ ಕೇಂದ್ರ ವೀಕ್ಷಕರಾಗಿ ತರುಣ್ ಚುಗ್ ಮತ್ತು ರವಿಶಂಕರ್ ಪ್ರಸಾದ್ ಹಾಗೂ ಕೇಂದ್ರ ಸಚಿವ ಕಿರಣ್ ರಿಜಿಜು ಸಮ್ಮುಖದಲ್ಲಿ ಶಾಸಕಾಂಗ ಪಕ್ಷದಲ್ಲಿ ಒಮ್ಮತದಿಂದ ಪೆಮಾ ಖಂಡು ಅವರನ್ನು ಆಯ್ಕೆ ಮಾಡಲಾಯಿತು.
ನಂತರ ಖಂಡು ಅವರು ತರುಣ್ ಚುಗ್, ಹಲವಾರು ಶಾಸಕರ ಜೊತೆಗೂಡಿ ರಾಜಭವನಕ್ಕೆ ತೆರಳಿದರು. ಗವರ್ನರ್ ಲೆ.ಜನರಲ್ (ನಿವೃತ್ತ) ಕೆ.ಟಿ.ಪಾರನಾಯಕ್ ಅವರನ್ನು ಭೇಟಿಯಾಗಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದರು. ಇದಾದ ಸ್ವಲ್ಪ ಹೊತ್ತಿನಲ್ಲೇ ರಾಜ್ಯಪಾಲರು ಸಿಎಂ ಮತ್ತು ಸಚಿವರನ್ನು ಪ್ರಮಾಣ ವಚನಕ್ಕೆ ಆಹ್ವಾನಿಸಿದರು.