ಹೈದರಾಬಾದ್ (ತೆಲಂಗಾಣ):ವೃದ್ಧಾಪ್ಯದಲ್ಲಿ ತಂದೆ- ತಾಯಿಗೆ ಮಕ್ಕಳು ನೆರಳಾಗಬೇಕು. ಇದು ಸಮಾಜದ ಅಲಿಖಿತ ನಿಯಮ. ಆದರೆ, ಈಗಿನ ಕಾಲದಲ್ಲಿ ಎಲ್ಲವೂ ಬದಲಾಗಿದೆ. ಹಣ, ಆಸ್ತಿಗಾಗಿ ಹೆತ್ತವರನ್ನೇ ಅಬ್ಬೆಪಾರಿ ಮಾಡಿ ಬೀದಿಗೆ ಬಿಸಾಡುತ್ತಿರುವ ಹಲವಾರು ಪ್ರಕರಣಗಳು ನಮ್ಮ ಮುಂದಿವೆ. ಹೈದರಾಬಾದ್ನಲ್ಲಿ ಇದೀಗ, ಅಂಥಹದ್ದೇ ಪ್ರಕರಣವೊಂದು ಬಯಲಿಗೆ ಬಂದಿದೆ.
ಹೆತ್ತವರಿಗೆ ಸೇರಿದ ಚಿನ್ನವನ್ನು ಪಡೆದುಕೊಂಡ ಪುತ್ರಿ, ಅವರಿಗೆ ವಾಪಸ್ ನೀಡದೆ ಗೋಳಾಡಿಸುತ್ತಿದ್ದಾಳಂತೆ. ಈ ಬಗ್ಗೆ ಪೊಲೀಸರು, ಬಂಧು- ಬಾಂಧವರು, ನೆರೆಹೊರೆಯವರು ಹೇಳಿದರೂ ಆಕೆ ಮಾತ್ರ ಸುತಾರಾಂ ಒಪ್ಪುತ್ತಿಲ್ಲ. ಇದರಿಂದ ಬೀದಿಗೆ ಬಂದಿರುವ ಪೋಷಕರು ಮಗಳ ಮನೆಯ ಮುಂದೆ ಧರಣಿ ನಡೆಸುತ್ತಿದ್ದಾರೆ.
ಈ ಘಟನೆ ನಡೆದಿದ್ದು, ಹೈದರಾಬಾದ್ನ ಮಲ್ಕಜ್ಗಿರಿಯ ವಾಣಿನಗರದಲ್ಲಿ. ಮಗಳೇ ತಮಗೆ ಮೋಸ ಮಾಡುತ್ತಿದ್ದಾಳೆ ಎಂದು ಆರೋಪಿಸಿ ಆಕೆಯ ತಂದೆ- ತಾಯಿ ತಮ್ಮವರೊಂದಿಗೆ ಸೇರಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಆರೋಪವೇನು?ಮಲ್ಕಜ್ ಗಿರಿಯ ಶಿವಮ್ಮ ಹಾಗೂ ಮಲ್ಲಯ್ಯ ದಂಪತಿಯು ಪುತ್ರಿ ಬಾಲಾಮಣಿ ವಿರುದ್ಧ ಪ್ರತಿಭಟನೆ ನಡೆಸುತ್ತಿರುವವರು. ಎರಡು ವರ್ಷಗಳ ಹಿಂದೆ ದಂಪತಿಯು ತಮ್ಮ ಬಳಿ ಇದ್ದ 30 ತೊಲ ಚಿನ್ನವನ್ನು ಕಳ್ಳರ ಕಾಟದಿಂದ ರಕ್ಷಿಸಲು ಪುತ್ರಿಗೆ ನೀಡಿದ್ದರು. ಕೆಲ ದಿನಗಳ ಬಳಿಕ ತಮ್ಮ ಬಂಗಾರವನ್ನು ವಾಪಸ್ ನೀಡುವಂತೆ ವೃದ್ಧ ದಂಪತಿ ಕೇಳಿದ್ದಾರೆ. ಆದರೆ, ಮಗಳು ಅದನ್ನು ಹಿಂದಿರುಗಿಸಲು ನಿರಾಕರಿಸಿದ್ದಾಳೆ ಎಂದು ಆರೋಪಿಸಿದ್ದಾರೆ.