ಕರ್ನಾಟಕ

karnataka

ETV Bharat / bharat

ಲೋಕಸಭೆ, ವಿಧಾನಸಭೆ ಎಲೆಕ್ಷನ್​​ನಲ್ಲಿ ಬೂತ್​ ವಶಪಡಿಸಿಕೊಂಡ 925 ಕೇಸ್​ ದಾಖಲು, 14 ಮಂದಿ ಬಂಧನ - booth capturing complaints - BOOTH CAPTURING COMPLAINTS

ಈಚೆಗೆ ಮುಗಿದ ಲೋಕಸಭೆ ಮತ್ತು ರಾಜ್ಯಗಳ ವಿಧಾನಸಭೆ ಚುನಾವಣೆಗಳಲ್ಲಿ ಬೂತ್​ ವಶಪಡಿಸಿಕೊಂಡ ಘಟನೆಗಳಿಗೆ ಸಂಬಂಧಿಸಿದ ದೂರು ಮತ್ತು ಕ್ರಮಗಳ ಬಗ್ಗೆ ಕೇಂದ್ರ ಸರ್ಕಾರ ರಾಜ್ಯಸಭೆಗೆ ಮಾಹಿತಿ ನೀಡಿದೆ.

ಎಲೆಕ್ಷನ್​​ನಲ್ಲಿ ಬೂತ್​ ವಶಪಡಿಸಿಕೊಂಡ ಕೇಸ್​
ಎಲೆಕ್ಷನ್​​ನಲ್ಲಿ ಬೂತ್​ ವಶಪಡಿಸಿಕೊಂಡ ಕೇಸ್​ (ETV Bharat)

By PTI

Published : Jul 25, 2024, 8:09 PM IST

ನವದೆಹಲಿ:ಇತ್ತೀಚೆಗೆ ಮುಗಿದ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳಲ್ಲಿ ಹಲವು ರಾಜ್ಯಗಳಲ್ಲಿ ಮತದಾನ ಕೇಂದ್ರಗಳ ನಾಶ, ಒತ್ತೆಯಾಗಿಟ್ಟುಕೊಳ್ಳುವುದು, ಗದ್ದಲ ಮಾಡಿದ ಆರೋಪಗಳ 925 ದೂರುಗಳು ಬಂದಿವೆ. ಇದರಲ್ಲಿ ಪಶ್ಚಿಮ ಬಂಗಾಳದಲ್ಲೇ 875 ಪ್ರಕರಣಗಳು ನಡೆದಿವೆ. ಘಟನೆಗಳಿಗೆ ಸಂಬಂಧಿಸಿದಂತೆ 14 ಜನರನ್ನು ಬಂಧಿಸಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಚುನಾವಣಾ ಆಯೋಗ ನೀಡಿದ ವಿವರಗಳನ್ನು ರಾಜ್ಯಸಭೆಗೆ ಲಿಖಿತ ಉತ್ತರದ ಮೂಲಕ ನೀಡಿದ ಕಾನೂನು ಸಚಿವ ಅರ್ಜುನ್​ ರಾಮ್​ ಮೇಘವಾಲ್ ಅವರು, ಚುನಾವಣೆಯ ವೇಳೆ ನಡೆದ ದೌರ್ಜನ್ಯ, ಬೂತ್​ ವಶಪಡಿಸಿಕೊಳ್ಳುವುದು, ದಾಳಿಗಳ ವಿರುದ್ಧ ಕ್ರಮ ಜರುಗಿಸಲಾಗಿದೆ. ಪಶ್ಚಿಮ ಬಂಗಾಳದಲ್ಲಿ ಅತಿಹೆಚ್ಚು ಘಟನೆಗಳು ನಡೆದಿವೆ. ಬಳಿಕ ಬಿಹಾರದಲ್ಲಿ ಹೆಚ್ಚು ದೂರುಗಳು ಬಂದಿವೆ ಎಂದರು.

ಬಂಗಾಳದಲ್ಲಿ ಹೆಚ್ಚು ದೂರು:ತೃಣಮೂಲ ಕಾಂಗ್ರೆಸ್​ ಆಡಳಿತದ ಬಂಗಾಳದಲ್ಲಿ ಈ ವರ್ಷ ನಡೆದ ಲೋಕಸಭೆ ಚುನಾವಣೆಯ ವೇಳೆ ಇಂತಹ 875 ದೂರುಗಳು ಬಂದಿವೆ. ಆದರೆ, ಯಾವುದೇ ಪ್ರಕರಣಗಳು ರುಜುವಾತಾಗದ ಕಾರಣ, ಸಂಬಂಧಪಟ್ಟ ಜಿಲ್ಲಾ ಚುನಾವಣಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿ, ಪೊಲೀಸ್ ಆಯುಕ್ತರ ವರದಿಯಂತೆ ದೂರುಗಳನ್ನು ವಿಲೇವಾರಿ ಮಾಡಲಾಗಿದೆ ಎಂದು ಸದನಕ್ಕೆ ತಿಳಿಸಿದರು.

ಇನ್ನೂ, ಬಿಹಾರದಲ್ಲಿ 2024ರ ಲೋಕಸಭೆ ಚುನಾವಣೆ ವೇಳೆ ಬೂತ್ ವಶಪಡಿಸಿಕೊಂಡ ಬಗ್ಗೆ 47 ದೂರುಗಳು ದಾಖಲಾಗಿವೆ. 2019 ರ ಲೋಕಸಭೆ ಚುನಾವಣೆ ವೇಳೆಯೂ 50, 2020 ರಲ್ಲಿ ನಡೆದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ 13 ದೂರುಗಳು ಬಂದಿವೆ. ತನಿಖೆಯಲ್ಲಿ ಎಲ್ಲ ದೂರುಗಳು ನಕಲಿಯಾಗಿದ್ದು, ವಿಲೇವಾರಿ ಮಾಡಲಾಗಿದೆ ಎಂದು ತಿಳಿಸಿದರು.

ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗೆ ಏಕಕಾಲಕ್ಕೆ ಚುನಾವಣೆ ನಡೆದ ಅರುಣಾಚಲ ಪ್ರದೇಶದಲ್ಲಿ ಇಂಥದ್ದೇ ಒಂದು ದೂರು ದಾಖಲಾಗಿದೆ. ಕೇಸ್​ಗೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ. ರಾಜ್ಯ ಮುಖ್ಯ ಚುನಾವಣಾಧಿಕಾರಿಗಳಿಗೆ ಹೊಸದಾಗಿ ಚುನಾವಣೆ ನಡೆಸಲು ಕೇಂದ್ರ ಆಯೋಗ ಸೂಚಿಸಿತ್ತು. ಈ ಬಗ್ಗೆ ತನಿಖೆ ನಡೆಸಲೂ ಆದೇಶಿಸಲಾಗಿದೆ. ಬೂತ್​ ವಶಪಡಿಸಿಕೊಂಡು ಮತದಾನಕ್ಕೆ ಅಡ್ಡಿಯುಂಟಾದ ಕ್ಷೇತ್ರಗಳಲ್ಲಿ ಮರು ಮತದಾನ ನಡೆಸಲಾಗಿದೆ ಎಂದು ಮಾಹಿತಿ ಹಂಚಿಕೊಂಡರು.

ಒಡಿಶಾದಲ್ಲಿ ಮರು ಮತದಾನ:ಒಡಿಶಾದಲ್ಲಿ ಇತ್ತೀಚೆಗೆ ನಡೆದ ಲೋಕಸಭೆ ಮತ್ತು ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಎರಡು ದೂರುಗಳನ್ನು ಸ್ವೀಕರಿಸಲಾಗಿದೆ. 12 ಜನರನ್ನು ಬಂಧಿಸಿ ಕ್ರಿಮಿನಲ್ ಪ್ರೊಸೀಜರ್ ಕೋಡ್ ಅಡಿಯಲ್ಲಿ ಬಂಧಿಸಲಾಗಿದೆ. ಕಾಂತಾಮಾಲ್ ವಿಧಾನಸಭಾ ಕ್ಷೇತ್ರದ ಕಿರಸಿರಾಂಡ್ ಮತ್ತು ಮಹೇಶ್ವರಪಿಂಡ ಎಂಬ ಎರಡು ಮತಗಟ್ಟೆಗಳಲ್ಲಿ ಮರು ಮತದಾನವನ್ನೂ ಯಶಸ್ವಿಯಾಗಿ ನಡೆಸಲಾಗಿದೆ ಎಂದು ಚುನಾವಣಾ ಆಯೋಗದ ವಿವರಗಳನ್ನು ಸಚಿವರು ಉಲ್ಲೇಖಿಸಿದರು.

ಇದನ್ನೂ ಓದಿ:ಮತಗಟ್ಟೆ ಧ್ವಂಸ ಮಾಡಿದ್ದ ಇಂಡಿಗನತ್ತದಲ್ಲಿ ಮರು ಮತದಾನ: ಬೆಳಗ್ಗೆ 10 ರವರೆಗೆ 54 ಮಂದಿಯಿಂದ ಹಕ್ಕು ಚಲಾವಣೆ - Re Voting In Indiganatta

ABOUT THE AUTHOR

...view details