ನವದೆಹಲಿ:ರಾಜಧಾನಿ ದೆಹಲಿಯಲ್ಲಿ ಅಪರಾಧಗಳು ನಿರಂತರವಾಗಿ ಹೆಚ್ಚುತ್ತಿವೆ. ಪಶ್ಚಿಮ ದೆಹಲಿಯ ರಜೌರಿ ಗಾರ್ಡನ್‌ನಲ್ಲಿರುವ ಪ್ರಸಿದ್ಧ ಬರ್ಗರ್ ಔಟ್‌ಲೆಟ್ ಬರ್ಗರ್ ಕಿಂಗ್ ರೆಸ್ಟೋರೆಂಟ್‌ನಲ್ಲಿ ಭಾರಿ ಗುಂಡಿನ ದಾಳಿ ನಡೆದಿದೆ. ಈ ಗುಂಡಿನ ದಾಳಿಯಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾನೆ. ಆದರೆ, ಮೃತರ ಗುರುತು ಪತ್ತೆಯಾಗಿಲ್ಲ. ಈ ಪ್ರಕರಣದ ಕುರಿತು ಪೊಲೀರು ತನಿಖೆ ಆರಂಭಿಸಿದ್ದಾರೆ.
ದೊರೆತಿರುವ ಮಾಹಿತಿ ಪ್ರಕಾರ, ಮಂಗಳವಾರ ರಾತ್ರಿ ಪಶ್ಚಿಮ ದೆಹಲಿಯ ರಾಜೌರಿ ಗಾರ್ಡನ್‌ನಲ್ಲಿರುವ ಬರ್ಗರ್ ಕಿಂಗ್ ಹೋಟೆಲ್ಗೆ ಬಂದ ದುಷ್ಕರ್ಮಿಗಳು ಮನಬಂದಂತೆ ಗುಂಡು ಹಾರಿಸಿದ್ದಾರೆ. ರೆಸ್ಟೋರೆಂಟ್‌ನಲ್ಲಿ ಕುಳಿತಿದ್ದ ವ್ಯಕ್ತಿಯ ಮೇಲೆ ಗುಂಡು ಹಾರಿಸಿ ಸ್ಥಳದಿಂದ ಪರಾರಿಯಾಗಿದ್ದಾರೆ. ಘಟನೆಯ ನಂತರ ಗೊಂದಲದ ವಾತಾವರಣವಿತ್ತು. ಘಟನೆಯ ಬಗ್ಗೆ ಮಾಹಿತಿ ಪಡೆದ ತಕ್ಷಣವೇ ಉನ್ನತ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು, ಅಪರಾಧ ತಂಡವೂ ಸ್ಥಳವನ್ನು ಪರಿಶೀಲಿಸಿತು. ಮೃತರ ಗುರುತು ಇನ್ನೂ ಪತ್ತೆಯಾಗಿಲ್ಲ.
ಮಾಹಿತಿ ನೀಡಿದ ಪಶ್ಚಿಮ ದೆಹಲಿ ಜಿಲ್ಲೆಯ ಡಿಸಿಪಿ ಅವರು, ''ದುಷ್ಕರ್ಮಿಗಳನ್ನು ಹಿಡಿಯಲು ಹಲವು ತಂಡಗಳನ್ನು ರಚಿಸಲಾಗಿದೆ. ಅಲ್ಲದೇ, ಬರ್ಗರ್ ಕಿಂಗ್‌ನಲ್ಲಿ ಅಳವಡಿಸಲಾಗಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಸಹ ಪರಿಶೀಲಿಸಲಾಗುತ್ತಿದೆ'' ಎಂದರು. ಸದ್ಯ ಈ ಘಟನೆಗೆ ಹಳೆ ವೈಷಮ್ಯವೇ ಕಾರಣ ಎನ್ನಲಾಗುತ್ತಿದ್ದು, ಇದುವರೆಗೂ ಮೃತರ ಗುರುತಿನ ಕುರಿತು ಪೊಲೀಸರು ಯಾವುದೇ ಮಾಹಿತಿ ನೀಡಿಲ್ಲ.
ಪಶ್ಚಿಮ ವಿಭಾಗದ ಡಿಸಿಪಿ ಹೇಳಿದ್ದೇನು?:ಪಶ್ಚಿಮ ವಿಭಾಗದ ಡಿಸಿಪಿ ವಿಚಿತ್ರಾ ವೀರ್ ಪ್ರತಿಕ್ರಿಯಿಸಿ, ''ಬರ್ಗರ್ ಕಿಂಗ್ ರೆಸ್ಟೋರೆಂಟ್‌ನಲ್ಲಿ ನಡೆದ ಗುಂಡಿನ ದಾಳಿ ನಡೆದಿರುವ ಕುರಿತು ಮಂಗಳವಾರ ರಾತ್ರಿ 9.45ರ ಸುಮಾರಿಗೆ ರಾಜೌರಿ ಗಾರ್ಡನ್ ಪೊಲೀಸ್ ಠಾಣೆಗೆ ಮಾಹಿತಿ ಬಂದಿದೆ. ಬಳಿಕ ಬೀಟ್ ಅಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಲಾಯಿತು. ಅವರು ಘಟನೆ ನಿಜವೆಂದು ದೃಢಪಡಿಸಿದರು. ನಂತರ ವಿಶೇಷ ಸಿಬ್ಬಂದಿ, ಮಾದಕ ದ್ರವ್ಯ ವಿರೋಧಿ, ಎಎಟಿಎಸ್ ಹಾಗೂ ವಿವಿಧ ತಂಡಗಳು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದರು. ಸುಮಾರು 10 ಅಥವಾ ಅದಕ್ಕಿಂತ ಹೆಚ್ಚು ಸುತ್ತು ಗುಂಡು ಹಾರಿಸಲಾಗಿದೆ ಎಂದು ತಿಳಿದು ಬಂದಿದೆ. ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದಾನೆ. ಆ ವ್ಯಕ್ತಿಯ ಗುರುತು ಇನ್ನು ಪತ್ತೆಯಾಗಿಲ್ಲ. ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾದ ದೃಶ್ಯಗಳಿಂದ ಇನ್ನಷ್ಟು ಮಾಹಿತಿ ಲಭಿಸಲಿದೆ. ಗುಂಡಿನ ದಾಳಿ ನಡೆಸಿದವರನ್ನು ಬಂಧಿಸಲು ತಂಡಗಳನ್ನು ರಚಿಸಲಾಗುತ್ತಿದೆ. ಪ್ರಕರಣದ ತನಿಖೆಯನ್ನು ತೀವ್ರಗೊಳಿಸಲಾಗಿದೆ ಎಂದು ತಿಳಿಸಿದರು.
ಗಾಯಗೊಂಡವರ ಬಗ್ಗೆ ಮಾಹಿತಿ ನೀಡಲು ನಿರಾಕರಣೆ:ಮೂಲಗಳ ಪ್ರಕಾರ, ಗುಂಡು ಹಾರಿಸಿದ ವ್ಯಕ್ತಿ ತನ್ನ ಸ್ನೇಹಿತನೊಂದಿಗೆ ರೆಸ್ಟೋರೆಂಟ್‌ನಲ್ಲಿ ಕುಳಿತಿದ್ದಾಗ, ರೆಸ್ಟೊರೆಂಟ್‌ನಲ್ಲಿದ್ದ ಕೆಲವರು ವ್ಯಕ್ತಿ ಮತ್ತು ಅವರ ಸ್ನೇಹಿತರ ಮೇಲೆ 10 ರಿಂದ 12 ಸುತ್ತು ಗುಂಡು ಹಾರಿಸಿದ್ದಾರೆ. ಎರಡೂ ಗುಂಪಿನವರಿಗೆ ಮೊದಲೇ ಪರಿಚಯವಿದ್ದು, ಹಳೆ ವಿಚಾರಕ್ಕೆ ಇಬ್ಬರ ನಡುವೆ ಜಗಳ ನಡೆದಿತ್ತು. ಮೃತರು ಸ್ಥಳದಲ್ಲೇ ಕುಸಿದು ಬಿದ್ದ ನಂತರ ಆರೋಪಿಗಳು, ಸುಮಾರು ಮೂವರು ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಗುಂಡಿನ ದಾಳಿಯಿಂದ ಇನ್ನೂ ಕೆಲವರಿಗೆ ಗಾಯಗಳಾಗಿವೆ. ಈ ಪ್ರಕರಣದಲ್ಲಿ ಗ್ಯಾಂಗ್ ವಾರ್ ಸೇರಿದಂತೆ ಹಲವು ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಗಾಯಗೊಂಡವರ ಬಗ್ಗೆ ಮಾಹಿತಿ ನೀಡಲು ಹಿರಿಯ ಪೊಲೀಸ್ ಅಧಿಕಾರಿಗಳು ನಿರಾಕರಿಸಿದ್ದಾರೆ. ಆರೋಪಿಗಳ ಬಂಧನಕ್ಕೆ ತಂಡಗಳನ್ನು ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:’ಬಾಂಬ್‌ಗಳು ಶೀಘ್ರದಲ್ಲೇ ಸ್ಫೋಟಗೊಳ್ಳುತ್ತವೆ, ನೀವೆಲ್ಲರೂ ಸಾಯುತ್ತೀರಿ’: ದೇಶದ 41 ವಿಮಾನ ನಿಲ್ದಾಣಗಳಿಗೆ ನಕಲಿ ಬಾಂಬ್ ಬೆದರಿಕೆ - Hoax Bomb Threat