ಹೈದರಾಬಾದ್: ತೆಲಂಗಾಣ ರಾಜ್ಯದಲ್ಲಿ ಸಂಚಲನ ಸೃಷ್ಟಿಸಿದ್ದ ಫೋನ್ ಟ್ಯಾಪಿಂಗ್ ಪ್ರಕರಣ ಸಂಬಂಧ ಬಿಆರ್ಎಸ್ ಮಾಜಿ ಶಾಸಕ ಜೈಪಾಲ್ ಯಾದವ್ ಇಂದು ಹೈದರಾಬಾದ್ ಜೂಬ್ಲಿಹಿಲ್ಸ್ ಪೊಲೀಸರ ಮುಂದೆ ಹಾಜರಾಗಿ ವಿಚಾರಣೆ ಎದುರಿಸಿದರು. ಪೊಲೀಸರು ಸುಮಾರು ಎರಡು ಗಂಟೆಗಳ ಕಾಲ ಜೈಪಾಲ್‌ಯಾದವ್ ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿಕೊಂಡರು.
ಈ ಕುರಿತು ಮಾಜಿ ಶಾಸಕ ಜೈಪಾಲ್ ಯಾದವ್ ಮಾತನಾಡಿ, "ಎಎಸ್ಪಿ ತಿರುಪತನ್ನ ಮೂಲಕ ಫೋನ್ ಟ್ಯಾಪಿಂಗ್ ಮಾಡಿಸಿದ್ದೇನೆ ಎಂಬ ಆರೋಪ ಸಂಬಂಧ ಪೊಲೀಸರು ನೋಟಿಸ್ ನೀಡಿದ್ದರು. ಎರಡು ಕುಟುಂಬಗಳ ನಡುವಿನ ವಿವಾದ ಪ್ರಕರಣ ಸಂಬಂಧ ಎರಡು ಫೋನ್ ನಂಬರ್‌ಗಳನ್ನು ತಿರುಪತನ್ನ ಅವರಿಗೆ ನೀಡಿದ್ದೆ. ಎರಡು ಫೋನ್ ನಂಬರ್‌ಗಳನ್ನು ಟ್ಯಾಪಿಂಗ್ ಮಾಡಿರುವುದು ನನಗೆ ಗೊತ್ತಿಲ್ಲ" ಎಂದರು.
"ತಿರುಪತನ್ನ ನನ್ನ ಸಮುದಾಯಕ್ಕೆ ಸೇರಿದವರಾಗಿದ್ದು, ಅವರನ್ನು ವಿವಾದವೊಂದರ ಸಂಬಂಧ ಭೇಟಿಯಾಗಿದ್ದೆ. ಪೊಲೀಸರು ತಾನು ನೀಡಿದ ಎರಡು ಫೋನ್ ನಂಬರ್‌ಗಳನ್ನು ತಿರುಪತನ್ನ ಟ್ಯಾಪಿಂಗ್ ಮಾಡಿರುವುದಾಗಿ ಹೇಳಿ ಕೆಲ ಸಾಕ್ಷ್ಯಗಳನ್ನು ನನ್ನ ಮುಂದಿರಿಸಿ ವಿಚಾರಣೆ ನಡೆಸಿದರು. ಫೋನ್ ಟ್ಯಾಪಿಂಗ್ ಪ್ರಕರಣದ ಸಂಬಂಧ ನನ್ನನ್ನು ಯಾವಾಗ ವಿಚಾರಣೆಗೆ ಕರೆದರೂ ಹೋಗುತ್ತೇನೆ" ಎಂದು ತಿಳಿಸಿದರು.
ಇದನ್ನೂ ಓದಿ: ಆಂಧ್ರ ಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಿಧನ