ನವದೆಹಲಿ: ''ಮಹಿಳಾ ದಿನದಂದು ನಮ್ಮ ಸರ್ಕಾರವು ಅಡುಗೆ ಅನಿಲ ಸಿಲಿಂಡರ್ ಬೆಲೆಯನ್ನು 100 ರೂಪಾಯಿಗಳಷ್ಟು ಕಡಿಮೆ ಮಾಡಲು ನಿರ್ಧರಿಸಿದೆ. ಇದರಿಂದ ಲಕ್ಷಾಂತರ ಕುಟುಂಬಗಳ ಆರ್ಥಿಕ ಹೊರೆ ಕಡಿಮೆಯಾಗಲಿದೆ. ವಿಶೇಷವಾಗಿ, ಇದು ನಮ್ಮ ನಾರಿ ಶಕ್ತಿಗೆ ಪ್ರಯೋಜನ ನೀಡುತ್ತದೆ" ಎಂದು ಪ್ರಧಾನಿ ತಿಳಿಸಿದ್ದಾರೆ.
"ಕೈಗೆಟುಕುವ ಬೆಲೆಯಲ್ಲಿ ಅಡುಗೆ ಸಿಲಿಂಡರ್ ಒದಗಿಸುವ ಮೂಲಕ ನಾವು ಕುಟುಂಬಗಳ ಯೋಗಕ್ಷೇಮವನ್ನು ಬೆಂಬಲಿಸುತ್ತಿದ್ದೇವೆ. ಇದಕ್ಕಾಗಿ ಅವರಿಗೆ ಆರೋಗ್ಯಕರ ವಾತಾವರಣ ಕಲ್ಪಿಸಲು ಶ್ರಮಿಸುತ್ತಿದ್ದೇವೆ. ಮಹಿಳಾ ಸಬಲೀಕರಣ ಮತ್ತು ಸುಲಭ ಜೀವನ ವಿಧಾನವನ್ನು ಒದಗಿಸುವ ಭಾಗವಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ" ಎಂದು ಅವರು ಸಾಮಾಜಿಕ ಜಾಲತಾಣ ವೇದಿಕೆ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಎಲ್‌ಪಿಜಿ ಸಿಲಿಂಡರ್ ಬೆಲೆ ಪಟ್ಟಿ: ಪ್ರಸ್ತುತ ಕರ್ನಾಟಕದ ಬೆಂಗಳೂರಿನಲ್ಲಿ 14.2 ಕೆಜಿ ಅಡುಗೆ ಅನಿಲ ಸಿಲಿಂಡರ್ ಬೆಲೆ 905.50 ರೂ ಇದ್ದು, ಕೇಂದ್ರದ ನಿರ್ಧಾರದಿಂದ 805.50ಕ್ಕೆ ಇಳಿಕೆಯಾಗಲಿದೆ. ಹೈದರಾಬಾದ್‌ನಲ್ಲಿ ಅಡುಗೆ ಅನಿಲ ಸಿಲಿಂಡರ್ ಬೆಲೆ 955 ರೂ ಇದ್ದು, 855 ರೂಪಾಯಿಗೆ ಇಳಿಯಲಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಗ್ಯಾಸ್ ಸಿಲಿಂಡರ್ ಬೆಲೆ 903 ಇದ್ದು, 803 ರೂ.ಗೆ ಇಳಿಕೆ ಆಗಲಿದೆ. ಕೋಲ್ಕತ್ತಾದಲ್ಲಿ 929 ಇದ್ದು, 829 ರೂಪಾಯಿ ಹಾಗು ಮುಂಬೈನಲ್ಲಿ 802.50 ರೂಪಾಯಿ ಆಗಲಿದೆ.
ಮತ್ತೊಂದೆಡೆ, ಉಜ್ವಲ ಯೋಜನೆಯಡಿ ಎಲ್‌ಪಿಜಿ ಸಿಲಿಂಡರ್ ಮೇಲಿನ 300 ರೂ ಸಬ್ಸಿಡಿಯನ್ನು ಮುಂದಿನ ಹಣಕಾಸು ವರ್ಷದಲ್ಲೂ ಮುಂದುವರಿಸಲಾಗುವುದು ಎಂದು ಕೇಂದ್ರ ಗುರುವಾರ ತಿಳಿಸಿತ್ತು. ಸಬ್ಸಿಡಿ ಅವಧಿ ಮಾ.31ಕ್ಕೆ ಮುಕ್ತಾಯವಾಗಿರುವ ಹಿನ್ನೆಲೆಯಲ್ಲಿ ಕೇಂದ್ರವು ಈ ನಿರ್ಧಾರ ಪ್ರಕಟಿಸಿತ್ತು. ಕಳೆದ ವರ್ಷ ರಕ್ಷಾಬಂಧನದ ಸಂದರ್ಭದಲ್ಲಿ ಸಿಲಿಂಡರ್ ಬೆಲೆಯಲ್ಲಿ 200 ರೂ ಇಳಿಸಲಾಗಿತ್ತು.