ಚಂಡೀಗಢ:ಇತ್ತೀಚೆಗೆ ಮುಗಿದ ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಭರ್ಜರಿಯಾಗಿ ಗೆಲುವು ಸಾಧಿಸಿದ್ದು, ಸರ್ಕಾರದ ಪ್ರಮಾಣ ವಚನ ಸ್ವೀಕಾರ ಸಮಾರಂಭವು ಅಕ್ಟೋಬರ್ 17 ರಂದು ಹಮ್ಮಿಕೊಳ್ಳಲಾಗಿದೆ. ಇಲ್ಲಿನ ಪಂಚಕುಲದ ಸೆಕ್ಟರ್ 5ರ ಪರೇಡ್ ಮೈದಾನದಲ್ಲಿ ಕಾರ್ಯಕ್ರಮ ನಡೆಯಲಿದೆ.
ಈ ಬಗ್ಗೆ ಶನಿವಾರ ಮಾಹಿತಿ ಹಂಚಿಕೊಂಡಿರುವ ಹರಿಯಾಣದ ಮಾಜಿ ಸಿಎಂ ಮತ್ತು ಕೇಂದ್ರ ಸಚಿವ ಮನೋಹರ್ ಲಾಲ್ ಖಟ್ಟರ್, ಚುನಾವಣೆಯಲ್ಲಿ ಪಕ್ಷವು ನಿಚ್ಚಳ ಬಹುಮತ ಸಾಧಿಸಿದ್ದು, ಇದೇ 17 ರಂದು ಪಂಚಕುಲದ ಸೆಕ್ಟರ್ 5ರ ಪರೇಡ್ ಮೈದಾನದಲ್ಲಿ ನೂತನ ಸಿಎಂ ಮತ್ತು ಸಚಿವರ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ಜರುಗಲಿದೆ. ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಆಡಳಿತದ ಸಿಎಂಗಳು ಭಾಗವಹಿಸಿದ್ದಾರೆ ಎಂದರು.
ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳು ಲೋಕಸಭೆ ಚುನಾವಣೆಯಂತೆ ಇಲ್ಲೂ ಸೋಲು ಕಂಡಿದ್ದಾರೆ. ಅಂದು ಪ್ರಧಾನ ಮಂತ್ರಿ ಆಗಲು ಪ್ರಯತ್ನಿಸಿ ಮುಗ್ಗರಿಸಿದ್ದರು. ಈಗ ಹರಿಯಾಣದಲ್ಲಿ ಕಾಂಗ್ರೆಸ್, ಸರ್ಕಾರ ರಚನೆ ಮಾಡೇ ಬಿಟ್ಟಿತು ಎಂದು ಬೀಗಿ, ಮುಖಭಂಗ ಅನುಭವಿಸಿದೆ. ಜನಪರ ಕಾರ್ಯಕ್ಕಾಗಿ ನಮ್ಮ ಪಕ್ಷ ಮತ್ತು ಸರ್ಕಾರ ಸದಾ ಬದ್ಧವಾಗಿರುತ್ತದೆ. ನಾವು ನುಡಿದಂತೆ ನಡೆದಿದ್ದೇವೆ ಎಂದು ಖಟ್ಟರ್ ಹೇಳಿದರು.
ಸೈನಿ ಸಿಎಂ ಆಗಿ ಮುಂದುವರಿಕೆ?ಬಿಜೆಪಿಯನ್ನು ಅದ್ಭುತ ಗೆಲುವಿನತ್ತ ಮುನ್ನಡೆಸಿದ ಹರಿಯಾಣದ ಹಂಗಾಮಿ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ಅವರು ಮತ್ತೊಮ್ಮೆ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಎಲ್ಲಾ ಸಾಧ್ಯತೆಗಳಿವೆ. ಸೈನಿ ಅವರನ್ನು ಶಾಸಕಾಂಗ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಿ, ಅವರಿಗೇ ಎರಡನೇ ಬಾರಿ ಸಿಎಂ ಪಟ್ಟ ಕಟ್ಟಲು ಪಕ್ಷ ಮುಂದಾಗಿದೆ ಎಂದು ತಿಳಿದುಬಂದಿದೆ.