ಕೂಚ್ ಬೆಹಾರ್ (ಪಶ್ಚಿಮ ಬಂಗಾಳ): ರಾಹುಲ್ ಗಾಂಧಿ ನೇತೃತ್ವದ 'ಭಾರತ್ ಜೋಡೋ ನ್ಯಾಯ್ ಯಾತ್ರೆ' ಗುರುವಾರ ಪಶ್ಚಿಮ ಬಂಗಾಳ ಪ್ರವೇಶಿಸಿದೆ. ಆದರೆ ರಾಹುಲ್ ಗಾಂಧಿ ಅವರ ಯಾತ್ರೆ ಬಂಗಾಳಕ್ಕೆ ಪ್ರವೇಶಿಸುತ್ತಿದ್ದಂತೆಯೇ ಕೂಚ್ ಬೆಹಾರ್ನಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಯಾತ್ರೆಗೆ ಪ್ರತಿರೋಧ ವ್ಯಕ್ತಪಡಿಸಿದ್ದಾರೆ. ಬಂಗಾಳದಲ್ಲಿ ದೀದಿ ಸಾಕು ಎಂದು ಬರೆದ ಪೋಸ್ಟರ್ಗಳನ್ನು ಟಿಎಂಸಿ ಕಾರ್ಯಕರ್ತರು ಯಾತ್ರೆಯ ಮುಂದೆ ಪ್ರದರ್ಶಿಸಿದರು.
ಅನ್ಯಾಯದ ವಿರುದ್ಧ ಹೋರಾಟ ಎಂದ ರಾಹುಲ್: ದೇಶಾದ್ಯಂತ ನಡೆಯುತ್ತಿರುವ ಅನ್ಯಾಯದ ವಿರುದ್ಧ ಪ್ರತಿಪಕ್ಷಗಳ ಮೈತ್ರಿಕೂಟ ಐಎನ್ಡಿಐಎ ಹೋರಾಡಲಿದೆ ಎಂಬ ವಿಶ್ವಾಸವನ್ನು ರಾಹುಲ್ ಈ ಸಂದರ್ಭದಲ್ಲಿ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಮತ್ತು ಆರ್ಎಸ್ಎಸ್ ದ್ವೇಷ ಮತ್ತು ಹಿಂಸಾಚಾರ ಹರಡುತ್ತಿವೆ ಎಂದು ಆರೋಪಿಸಿದ ರಾಹುಲ್ ಗಾಂಧಿ, ದೇಶಾದ್ಯಂತ ಅನ್ಯಾಯ ನಡೆಯುತ್ತಿರುವುದರಿಂದ ತಮ್ಮ ಯಾತ್ರೆಯ ಹೆಸರಿನಲ್ಲಿ ನ್ಯಾಯ ಎಂಬ ಪದವನ್ನು ಸೇರಿಸಲಾಗಿದೆ ಎಂದು ಹೇಳಿದರು. ಪಶ್ಚಿಮ ಬಂಗಾಳಕ್ಕೆ ಬಂದ ರಾಹುಲ್ ಗಾಂಧಿ ಅವರನ್ನು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಅಧೀರ್ ಚೌಧರಿ ಸ್ವಾಗತಿಸಿದರು. ಯಾತ್ರೆಯು ರಾಜ್ಯದ ಉತ್ತರ ಭಾಗದ ಕೂಚ್ ಬೆಹಾರ್ ಜಿಲ್ಲೆಯ ಬಕ್ಷಿರ್ಹಾಟ್ ಮೂಲಕ ಪಶ್ಚಿಮ ಬಂಗಾಳ ಪ್ರವೇಶಿಸಿತು.
ಎಫ್ಐಆರ್ ದಾಖಲು: ಏತನ್ಮಧ್ಯೆ ಭಾರತ್ ಜೋಡೋ ನ್ಯಾಯ್ ಯಾತ್ರೆಗೆ ಅಡ್ಡಿ ಆತಂಕಗಳು ಹೆಚ್ಚಾಗುತ್ತಿವೆ. ಅಸ್ಸೋಂ ಗುವಾಹಟಿಯಲ್ಲಿ ಕಾಂಗ್ರೆಸ್ ಬೆಂಬಲಿಗರು ಪೊಲೀಸರೊಂದಿಗೆ ಘರ್ಷಣೆ ನಡೆಸಿದ ಕಾರಣಕ್ಕೆ ರಾಹುಲ್ ಗಾಂಧಿ, ಕೆ.ಸಿ. ವೇಣುಗೋಪಾಲ್ ಮತ್ತು ಕನ್ಹಯ್ಯ ಕುಮಾರ್ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.