ಕರ್ನಾಟಕ

karnataka

ETV Bharat / bharat

10 ವರ್ಷದಲ್ಲಿ ಮೋದಿ ಆಡಳಿತದ ವಿರುದ್ಧ ಒಂದೇ ಒಂದು ಭ್ರಷ್ಟಾಚಾರದ ಆರೋಪವಿಲ್ಲ: ಅಮಿತ್ ಶಾ - PRIME MINISTER NARENDRA MODI

ಕಳೆದ ಹತ್ತು ವರ್ಷಗಳಲ್ಲಿ ನರೇಂದ್ರ ಮೋದಿ ಆಡಳಿತದ ವಿರುದ್ಧ ಯಾವುದೇ ಭ್ರಷ್ಟಾಚಾರದ ಆರೋಪವಿಲ್ಲ ಎಂದು ಅಮಿತ್ ಶಾ ಹೇಳಿದರು. ಇದೇ ವೇಳೆ ದುರ್ಬಲ ರಾಷ್ಟ್ರ ಪಟ್ಟಿಯಲ್ಲಿದ್ದ ಭಾರತವನ್ನು ಅಭಿವೃದ್ಧಿ ರಾಷ್ಟ್ರವಾಗಿ ಬದಲಾವಣೆ ಮಾಡಲಾಗಿದೆ ಎಂದರು.

AMIT SHAH
ಅಮಿತ್​ ಶಾ (ETV Bharat)

By PTI

Published : Oct 10, 2024, 4:25 PM IST

ನವದೆಹಲಿ:ಕಳೆದ 10 ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಆಡಳಿತದಲ್ಲಿ ಒಂದೇ ಒಂದು ಭ್ರಷ್ಟಾಚಾರದ ಆರೋಪವಿಲ್ಲ. ಕೇಂದ್ರ ಸರ್ಕಾರ ಕೈಗೊಂಡ ನೀತಿಗಳಿಂದ ದೇಶವು ವಿಶ್ವದ 5 ದೊಡ್ಡ ಆರ್ಥಿಕ ರಾಷ್ಟ್ರಗಳಲ್ಲಿ ಒಂದಾಗಿ ಬೆಳೆದಿದೆ ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ಗುರುವಾರ ಇಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿ ಅವರ ಆಡಳಿತ ಕೈಗೊಳ್ಳುವ ಮಹತ್ತರ ನಿರ್ಣಯಗಳಿಂದ 2047ರ ವೇಳೆಗೆ ಭಾರತ ವಿಶ್ವದಲ್ಲಿಯೇ ಅತ್ಯಂತ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಒಂದಾಗಿ ಹೊರಹೊಮ್ಮಲಿದೆ ಎಂದು ಭರವಸೆ ನೀಡಿದರು.

2014ರಲ್ಲಿ ನರೇಂದ್ರ ಮೋದಿ ಅಧಿಕಾರ ವಹಿಸಿಕೊಂಡಾಗಿನಿಂದ ಮೂಲಸೌಕರ್ಯಗಳ ಉನ್ನತೀಕರಣ, ಸುಧಾರಿತ ಸಂಪರ್ಕ, ಡಿಜಿಟಲ್ ಆರ್ಥಿಕತೆ, ರೈಲ್ವೇ ಜಾಲಗಳ ವಿಸ್ತರಣೆ, ಅರೆವಾಹಕಗಳು ಮತ್ತು ಎಲೆಕ್ಟ್ರಿಕ್ ವಾಹನಗಳ ಉತ್ಪಾದನಾ ಕೈಗಾರಿಕೆಗಳಲ್ಲಿ ಪರಿಣಾಮಕಾರಿ ಬದಲಾವಣೆ ತಂದಿದೆ ಎಂದರು.

ಭ್ರಷ್ಟಾಚಾರ ಆರೋಪಮುಕ್ತ ಸರ್ಕಾರ:ದೇಶದಲ್ಲಿ ಸುಧಾರಣೆ ಮತ್ತು ಆರ್ಥಿಕ ಅಭಿವೃದ್ಧಿಯ ಅಲೆ ಎದ್ದಿದೆ. ಬಿಜೆಪಿ ಸರ್ಕಾರದ ಹತ್ತು ವರ್ಷಗಳ ಅವಧಿಯಲ್ಲಿ ಒಂದೇ ಒಂದು ಭ್ರಷ್ಟಾಚಾರದ ಆರೋಪವಿಲ್ಲ. ಇದನ್ನು ಪ್ರತಿಪಕ್ಷಗಳೂ ಒಪ್ಪಿಕೊಂಡಿವೆ. ಎರಡು ಅವಧಿಯ ಮೋದಿ ಸರ್ಕಾರದಲ್ಲಿ ಭಯೋತ್ಪಾದನೆ, ನಕ್ಸಲ್​​ ಉಪಟಳ ಮತ್ತು ಈಶಾನ್ಯ ದಂಗೆಯನ್ನು ಭೂಮಿಯಲ್ಲಿ 200 ಅಡಿಗಳಷ್ಟು ಆಳದಲ್ಲಿ ಸಮಾಧಿ ಮಾಡಲಾಗಿದೆ ಎಂದು ಗೃಹ ಸಚಿವರು ಬಣ್ಣಿಸಿದರು.

ಪ್ರಧಾನಿ ಮೋದಿ ಅವರು ಅಧಿಕಾರ ವಹಿಸಿಕೊಂಡ ಬಳಿಕ ಆಡಳಿತ ವ್ಯವಸ್ಥೆಯಲ್ಲಿದ್ದ ನಾಯಕರ ಕೇಂದ್ರಿತ ನೀತಿಯನ್ನು, ಕಾರ್ಯ ಕೇಂದ್ರಿತ ನೀತಿಯನ್ನಾಗಿ ಬದಲಾವಣೆ ಮಾಡಿದರು. ಒಂದು ಕಾಲದಲ್ಲಿ ಭಾರತವನ್ನು 'ದುರ್ಬಲವಾದ ಐದು'(ಫ್ರಾಗೈಲ್ ಫೈವ್) ಆರ್ಥಿಕ ರಾಷ್ಟ್ರಗಳಲ್ಲಿ ಒಂದು ಎಂದು ಕೀಳಾಗಿ ಕಾಣಲಾಗುತ್ತಿತ್ತು. ಇದೀಗ, ವಿಶ್ವದಲ್ಲಿಯೇ ದೊಡ್ಡ ಆರ್ಥಿಕ ರಾಷ್ಟ್ರಗಳಲ್ಲಿ ಒಂದು ಎಂದು ವಿಶ್ವಸಂಸ್ಥೆಯ ಅಂಗಸಂಸ್ಥೆಯಾದ ಅಂತಾರಾಷ್ಟ್ರೀಯ ಹಣಕಾಸು ನಿಧಿಯೇ (IMF) ಒಪ್ಪಿಕೊಂಡಿದೆ ಎಂದರು.

ಏನಿದು ಫ್ರಾಗೈಲ್ ಫೈವ್?:ಭಾರತವನ್ನು 2013 ಕ್ಕೂ ಮೊದಲು 'ಫ್ರಾಗೈಲ್ ಫೈವ್' ಅಂದರೆ, ವಿಶ್ವದ ಐದು ದುರ್ಬಲ ರಾಷ್ಟ್ರಗಳಲ್ಲಿ ಒಂದು ಕರೆಯಲಾಗುತ್ತಿತ್ತು. ವಿಶ್ವದ ಆರ್ಥಿಕ ವಿಶ್ಲೇಷಕರ ಪ್ರಕಾರ, ವಿದೇಶಿ ಹೂಡಿಕೆಯ ಮೇಲೆ ಹೆಚ್ಚು ಅವಲಂಬಿತವಾಗಿರುವ ರಾಷ್ಟ್ರಗಳನ್ನು ಫ್ರಾಗೈಲ್ ಫೈವ್ ಎಂದು ಹೆಸರಿಸುತ್ತಿದ್ದರು. ಇಂಡೋನೇಷ್ಯಾ, ಬ್ರೆಜಿಲ್, ಟರ್ಕಿ, ಭಾರತ ಮತ್ತು ದಕ್ಷಿಣ ಆಫ್ರಿಕಾವನ್ನು ದುರ್ಬಲ ದೇಶಗಳೆಂದು ಗುರುತಿಸಿದ್ದರು.

ಇದನ್ನೂ ಓದಿ:ಎನ್​​ಸಿ ಶಾಸಕಾಂಗ ಪಕ್ಷದ ನಾಯಕರಾಗಿ ಒಮರ್​ ಅಬ್ದುಲ್ಲಾ ಆಯ್ಕೆ; ಸಿಎಂ ಆಗಿ 'ಆ ದಿನ' ಪ್ರಮಾಣ

ABOUT THE AUTHOR

...view details