ನವದೆಹಲಿ: ಇಂದು ಬೆಳಗ್ಗೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ದಟ್ಟ ಹೊಗೆ ಆವರಿಸಿದ್ದು, ವಾಯು ಗುಣಮಟ್ಟ ಸೂಚ್ಯಂಕ (AQI) ತೀವ್ರಕ್ಕಿಂತ ತೀವ್ರ ಕಳಪೆ (AQI ಮಟ್ಟ 450ಕ್ಕೂ ಅಧಿಕ) ವರ್ಗಕ್ಕೆ ಕುಸಿದಿದೆ. ಅಧಿಕಾರಿಗಳು ಗ್ರೇಡೆಡ್ ರೆಸ್ಪಾನ್ಸ್ ಆ್ಯಕ್ಷನ್ ಪ್ಲಾನ್-4 (GRAP4) ಕ್ರಮಗಳನ್ನು ಕಾರ್ಯಗತಗೊಳಿಸಿದ್ದಾರೆ.
ಪರಿಸ್ಥಿತಿಯ ಗಂಭೀರತೆಯನ್ನು ಮನಗಂಡಿರುವ ದೆಹಲಿ ಸರ್ಕಾರ, 10 ಮತ್ತು 12ನೇ ತರಗತಿಯ ವಿದ್ಯಾರ್ಥಿಗಳನ್ನು ಹೊರತುಪಡಿಸಿ ಉಳಿದೆಲ್ಲಾ ಶಾಲೆಗಳಿಗೆ ರಜೆ ಘೋಷಿಸಿದೆ. ಇಂದಿನಿಂದ ಜಾರಿಗೆ ಬರುವ ಜಿಆರ್‌ಎಪಿಯ ಹಂತ 4ರ ಅಡಿಯಲ್ಲಿ ದೆಹಲಿ-ಎನ್‌ಸಿಆರ್‌ಗಾಗಿ ವಾಯು ಗುಣಮಟ್ಟ ನಿರ್ವಹಣಾ ಆಯೋಗ (ಸಿಎಕ್ಯೂಎಂ) ಕಠಿಣ ಮಾಲಿನ್ಯ ನಿಯಂತ್ರಣ ಕ್ರಮಗಳನ್ನು ಜಾರಿಗೊಳಿಸಿದ ಗಂಟೆಗಳ ನಂತರ ಈ ಪ್ರಕಟಣೆ ಹೊರಬಿದ್ದಿದೆ.
ಮುಂದಿನ ಆದೇಶದವರೆಗೆ 9 ಮತ್ತು 11ನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ಆಫ್‌ಲೈನ್ ತರಗತಿಗಳು ನಡೆಯದಂತೆ ನೋಡಿಕೊಳ್ಳಲು ಶಿಕ್ಷಣ ನಿರ್ದೇಶನಾಲಯ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಶಾಲೆಗಳ ಮುಖ್ಯಸ್ಥರಿಗೆ ನಿರ್ದೇಶನ ನೀಡಿದೆ.
ಈ ಕುರಿತು Xನಲ್ಲಿ ಪೋಸ್ಟ್‌ನಲ್ಲಿ ದೆಹಲಿ ಮುಖ್ಯಮಂತ್ರಿ ಆತಿಶಿ, "ಮುಂದಿನ ಆದೇಶದವರೆಗೆ ಎಲ್ಲಾ ಶಾಲೆಗಳು ಆನ್‌ಲೈನ್ ತರಗತಿಗಳನ್ನು ನಡೆಸುತ್ತವೆ" ಎಂದು ತಿಳಿಸಿದ್ದಾರೆ.
ಸರ್ಕಾರದ ಆದೇಶದ ಪ್ರಕಾರ, ಅಗತ್ಯ ವಸ್ತುಗಳನ್ನು ಸಾಗಿಸುವ ಅಥವಾ ಶುದ್ಧ ಇಂಧನ (LNG/CNG/BS-VI ಡೀಸೆಲ್/ಎಲೆಕ್ಟ್ರಿಕ್) ಬಳಸುವುದನ್ನು ಹೊರತುಪಡಿಸಿ ಯಾವುದೇ ಟ್ರಕ್‌ಗಳನ್ನು ದೆಹಲಿ ನಗರದೊಳಗೆ ಅನುಮತಿಸಲಾಗುವುದಿಲ್ಲ. ಎಲೆಕ್ಟ್ರಿಕ್ ವಾಹನಗಳು ಮತ್ತು CNG ಮತ್ತು BS-VI ಡೀಸೆಲ್ ವಾಹನಗಳನ್ನು ಹೊರತುಪಡಿಸಿ ದೆಹಲಿಯ ಹೊರಗೆ ನೋಂದಾಯಿಸಲಾದ ಅನಿವಾರ್ಯವಲ್ಲದ ಲಘು ವಾಣಿಜ್ಯ ವಾಹನಗಳನ್ನೂ ಸಹ ನಿಷೇಧಿಸಲಾಗಿದೆ. ಅಗತ್ಯ ಸೇವೆಗಳನ್ನು ಹೊರತುಪಡಿಸಿ ದೆಹಲಿ-ನೋಂದಾಯಿತ BS-IV ಅಥವಾ ಹಳೆಯ ಡೀಸೆಲ್ ಮಧ್ಯಮ ಮತ್ತು ಭಾರೀ ಸರಕುಗಳ ವಾಹನಗಳನ್ನು ನಿಷೇಧಿಸಲಾಗಿದೆ.
ದೆಹಲಿ ಪರಿಸರ ಖಾತೆ ಸಚಿವ ಗೋಪಾಲ್ ರೈ ಅವರು ಸೋಮವಾರ GRAP-4ರ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಎಲ್ಲಾ ಇಲಾಖೆಗಳ ಮುಖ್ಯಸ್ಥರೊಂದಿಗೆ ಸಭೆ ನಡೆಸಲಿದ್ದಾರೆ ಎಂದು ಅವರ ಕಚೇರಿ ತಿಳಿಸಿತ್ತು. ಏತನ್ಮಧ್ಯೆ, ದೆಹಲಿ-ಎನ್‌ಸಿಆರ್‌ನಲ್ಲಿ ಹದಗೆಡುತ್ತಿರುವ ಗಾಳಿಯ ಗುಣಮಟ್ಟಕ್ಕೆ ಪ್ರತಿಕ್ರಿಯೆಯಾಗಿ, ಸೋಮವಾರದಿಂದ GRAP ಹಂತ 4 ಅನ್ನು ಸಕ್ರಿಯಗೊಳಿಸಲು ಏರ್ ಕ್ವಾಲಿಟಿ ಮ್ಯಾನೇಜ್‌ಮೆಂಟ್ ಆಯೋಗ (CAQM) ನಿರ್ಧರಿಸಿದೆ.
ದೆಹಲಿಯ ದೈನಂದಿನ ಸರಾಸರಿ ವಾಯು ಗುಣಮಟ್ಟ ಸೂಚ್ಯಂಕ (AQI) ಭಾನುವಾರ ಸಂಜೆ 4 ಗಂಟೆಗೆ 441ಕ್ಕೆ ತೀವ್ರವಾಗಿ ಏರಿಕೆಯಾಗಿತ್ತು. ಮತ್ತು ಸಂಜೆ 7ರ ಹೊತ್ತಿಗೆ 457 ತಲುಪಿತ್ತು ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ತಿಳಿಸಿದೆ.
ಇದನ್ನೂ ಓದಿ:'ರಾಷ್ಟ್ರ ರಾಜಧಾನಿಯನ್ನು ದೆಹಲಿಯಿಂದ ಬೇರೆಡೆ ಸ್ಥಳಾಂತರಿಸಿ' ಫಾರೂಕ್ ಅಬ್ದುಲ್ಲಾ ಹೀಗೆ ಹೇಳಿದ್ದು ಏಕೆ?