ಪಾಟ್ನಾ (ಬಿಹಾರ) :ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ, ಬಿಜೆಪಿ ಬೆಂಬಲದೊಂದಿಗೆ ಹೊಸ ಸರ್ಕಾರ ರಚನೆಗೆ ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ಅವರ ಬಳಿ ನಿತೀಶ್ಕುಮಾರ್ ಹಕ್ಕು ಮಂಡನೆ ಮಾಡಿದ್ದಾರೆ. ಇದಕ್ಕೆ ಸಮ್ಮತಿಸಿರುವ ರಾಜ್ಯಪಾಲರು, ಇಂದು ಸಂಜೆ 5 ಗಂಟೆಗೆ ಪ್ರಮಾಣವಚನಕ್ಕೆ ಅವಕಾಶ ನೀಡಿದ್ದಾರೆ. ಪ್ರಮಾಣವಚನ ಸಮಾರಂಭದಲ್ಲಿ ಬಿಜೆಪಿಯ ಇಬ್ಬರು ಉಪಮುಖ್ಯಮಂತ್ರಿಗಳೊಂದಿಗೆ ನಿತೀಶ್ ಒಂಬತ್ತನೇ ಬಾರಿಗೆ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ತಿಳಿದುಬಂದಿದೆ.
ರಾಜೀನಾಮೆ ಅಂಗೀಕರಿಸಿದ ಬಳಿಕ ಮುಂದಿನ ಸಿಎಂ ಆಯ್ಕೆಯವರೆಗೆ ಹಂಗಾಮಿಯಾಗಿ ಕೆಲಸ ಮಾಡಲು ರಾಜ್ಯಪಾಲರು ಸೂಚಿಸಿದರು. ಬಳಿಕ ಬಿಜೆಪಿ ಬೆಂಬಲದೊಂದಿಗೆ ನೂತನ ಸರ್ಕಾರ ರಚನೆಗೆ ಹಕ್ಕು ಮಂಡನೆ ಮಾಡಿದರು. ಇದನ್ನು ರಾಜ್ಯಪಾಲರು ಅಂಗೀಕರಿಸಿದರು.
ಬಿಜೆಪಿಗೆ 2 ಡಿಸಿಎಂ ಸ್ಥಾನ:ಸಿಎಂ ಆಗಿ ನಿತೀಶ್ಕುಮಾರ್ ಅವರು ಮುಂದುವರಿಯಲಿದ್ದರೆ, ಮೈತ್ರಿ ಪಕ್ಷ ಬಿಜೆಪಿಗೆ ಎರಡು ಡಿಸಿಎಂ ಸ್ಥಾನ ಸಿಗಲಿವೆ ಎಂದು ತಿಳಿದುಬಂದಿದೆ. ಸರ್ಕಾರ ರಚನೆ ಕಸರತ್ತು ಮುಂದುವರಿದ ಮಧ್ಯೆಯೇ ಸುಶೀಲ್ ಕುಮಾರ್ ಮೋದಿ ಮತ್ತು ರೇಣು ಕುಮಾರಿ ಅವರು ಉಪ ಮುಖ್ಯಮಂತ್ರಿ ಹುದ್ದೆಯ ಪ್ರಬಲ ಆಕಾಂಕ್ಷಿಗಳು ಎಂಬ ಮಾತುಗಳು ಕೇಳಿಬಂದವು.
ಈ ವದಂತಿಯ ಬೆನ್ನಲ್ಲೇ, ರಾಜ್ಯ ಬಿಜೆಪಿ ವಕ್ತಾರ ಸುಮಿತ್ ಶಶಾಂಕ್ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ಸಾಮ್ರಾಟ್ ಚೌಧರಿ ಮತ್ತು ವಿಜಯ್ ಸಿನ್ಹಾ ಅವರು ಉಪಮುಖ್ಯಮಂತ್ರಿಗಳಾಗಿ ಪ್ರಮಾಣ ಸ್ವೀಕರಿಸಲಿದ್ದಾರೆ. ಇಂದು ಸಂಜೆ 5 ಗಂಟೆಗೆ ಪ್ರತಿಜ್ಞಾವಿಧಿ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದ್ದಾರೆ. ಇದು ಬಿಹಾರ ರಾಜಕೀಯದಲ್ಲಿ ಮತ್ತಷ್ಟು ಕುತೂಹಲ ಮೂಡಿಸಿದೆ.
ನಿತೀಶ್ ಮೈತ್ರಿ ಜಂಪಿಂಗ್:ಮಾಜಿ ಸಿಎಂ ಲಾಲು ಪ್ರಸಾದ್ ಯಾದವ್ ಅವರ ಸರ್ಕಾರವನ್ನು ಜಂಗಲ್ರಾಜ್ ಎಂದು ವಿರೋಧಿಸುವ ಮೂಲಕ 2000ನೇ ಇಸ್ವಿಯಲ್ಲಿ ನಿತೀಶ್ಕುಮಾರ್ ಬಿಜೆಪಿ ಬೆಂಬಲದೊದಿಗೆ ಮೊದಲ ಬಾರಿಗೆ ಸಿಎಂ ಆಗಿದ್ದರು. 2013 ರಲ್ಲಿ ಪ್ರಧಾನಿ ಅಭ್ಯರ್ಥಿಯಾಗಿ ನರೇಂದ್ರ ಮೋದಿ ಅವರನ್ನು ಘೋಷಿಸಿದ ನಂತರ 17 ವರ್ಷಗಳ ಮೈತ್ರಿಯನ್ನು ಮುರಿದುಕೊಂಡರು. ಬಳಿಕ ಆರ್‌ಜೆಡಿ ಮತ್ತು ಕಾಂಗ್ರೆಸ್‌ನೊಂದಿಗೆ ಮಹಾಮೈತ್ರಿಯನ್ನು ರೂಪಿಸಿದರು.
2015 ರಲ್ಲಿ ಮುಖ್ಯಮಂತ್ರಿಯಾಗಿ ಮರಳಿ ಆಯ್ಕೆಯಾದರು. 2017 ರಲ್ಲಿ ಆರ್‌ಜೆಡಿಯ ಮೇಲೆ ಭ್ರಷ್ಟಾಚಾರ ಆರೋಪ ಮಾಡಿ ಮೈತ್ರಿಕೂಟದಿಂದ ಹೊರಬಂದರು. ಮತ್ತೆ ಬಿಜೆಪಿ ಜೊತೆ ಸರ್ಕಾರ ರಚಿಸಿದರು. ಇದಾದ ಬಳಿಕ 2022 ರಲ್ಲಿ ಮತ್ತೊಮ್ಮೆ ಬಿಜೆಪಿಯೊಂದಿಗೆ ಸಂಬಂಧವನ್ನು ಕಡಿದುಕೊಂಡರು. ನಂತರ ಆರ್‌ಜೆಡಿ ಮತ್ತು ಕಾಂಗ್ರೆಸ್ ಜೊತೆ ಸೇರಿ ಮತ್ತೆ ಸಿಎಂ ಆದರು. ಇದೀಗ ಅದರಿಂದಲೂ ಹೊರ ಬಂದು ಬಿಜೆಪಿ ಜೊತೆ ಕೈಜೋಡಿಸಿ 9ನೇ ಬಾರಿಗೆ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಲು ಸಜ್ಜಾಗಿದ್ದಾರೆ.
ಇದನ್ನೂ ಓದಿ:ಬಿಹಾರ ಸಿಎಂ ಸ್ಥಾನಕ್ಕೆ ನಿತೀಶ್ ಕುಮಾರ್ ರಾಜೀನಾಮೆ; ಬಿಜೆಪಿ ಜೊತೆ ಹೊಸ ಸರ್ಕಾರ, ಸಂಜೆ ಪ್ರಮಾಣ