ಕರ್ನಾಟಕ

karnataka

ETV Bharat / bharat

ಜುಲೈ 1 ರಿಂದ ಹೊಸ ಕ್ರಿಮಿನಲ್ ಕಾನೂನು ಜಾರಿ ಖಚಿತ: ಕೇಂದ್ರ ಸಚಿವ ಮೇಘವಾಲ್ ಸ್ಪಷ್ಟನೆ - New Criminal Laws - NEW CRIMINAL LAWS

ಬರುವ ಜುಲೈ 1 ರಿಂದ ಹೊಸ ಕ್ರಿಮಿನಲ್ ಕಾನೂನುಗಳು ಜಾರಿಗೆ ಬರಲಿವೆ ಎಂದು ಕಾನೂನು ಮತ್ತು ನ್ಯಾಯ ರಾಜ್ಯ ಸಚಿವ (ಸ್ವತಂತ್ರ ಉಸ್ತುವಾರಿ) ಅರ್ಜುನ್ ರಾಮ್ ಮೇಘವಾಲ್ ಹೇಳಿದ್ದಾರೆ.

ಕಾನೂನು ಮತ್ತು ನ್ಯಾಯ ರಾಜ್ಯ ಸಚಿವ (ಸ್ವತಂತ್ರ ಉಸ್ತುವಾರಿ) ಅರ್ಜುನ್ ರಾಮ್ ಮೇಘವಾಲ್
ಕಾನೂನು ಮತ್ತು ನ್ಯಾಯ ರಾಜ್ಯ ಸಚಿವ (ಸ್ವತಂತ್ರ ಉಸ್ತುವಾರಿ) ಅರ್ಜುನ್ ರಾಮ್ ಮೇಘವಾಲ್ (IANS (ಸಂಗ್ರಹ ಚಿತ್ರ))

By ANI

Published : Jun 16, 2024, 5:54 PM IST

ನವದೆಹಲಿ : ಜುಲೈ 1, 2024 ರಿಂದ ಹೊಸ ಕ್ರಿಮಿನಲ್ ಕಾನೂನುಗಳನ್ನು ಜಾರಿಗೆ ತರುವ ನಿರ್ಧಾರವನ್ನು ಕೇಂದ್ರ ಸರ್ಕಾರ ಮರುಪರಿಶೀಲಿಸುತ್ತಿಲ್ಲ ಎಂದು ಕಾನೂನು ಮತ್ತು ನ್ಯಾಯ ರಾಜ್ಯ ಸಚಿವ (ಸ್ವತಂತ್ರ ಉಸ್ತುವಾರಿ) ಅರ್ಜುನ್ ರಾಮ್ ಮೇಘವಾಲ್ ಸ್ಪಷ್ಟಪಡಿಸಿದ್ದಾರೆ. ಭಾರತೀಯ ದಂಡ ಸಂಹಿತೆ 1860, ಭಾರತೀಯ ಸಾಕ್ಷ್ಯ ಕಾಯ್ದೆ 1872 ಮತ್ತು ಅಪರಾಧ ಪ್ರಕ್ರಿಯಾ ಸಂಹಿತೆ 1973 ಅನ್ನು ಬದಲಿಸುವ ಕಾನೂನುಗಳು ಜುಲೈ 1 ರಿಂದ ಜಾರಿಗೆ ಬರಲಿವೆ ಎಂದು ಅವರು ಪುನರುಚ್ಚರಿಸಿದರು.

ಪಿಟಿಐ ಸುದ್ದಿಸಂಸ್ಥೆಯೊಂದಿಗೆ ಭಾನುವಾರ ಮಾತನಾಡಿದ ಸಚಿವರು, ಭಾರತೀಯ ನ್ಯಾಯ್ ಸಂಹಿತಾ, ಭಾರತೀಯ ಸುರಕ್ಷಾ ಸಂಹಿತಾ ಮತ್ತು ಭಾರತೀಯ ಸಾಕ್ಷ್ಯ ಅಧಿನಿಯಮ್ ಎಂಬ ಹೊಸ ಕ್ರಿಮಿನಲ್ ಕಾನೂನುಗಳು ಜುಲೈ 1, 2024 ರಿಂದ ಜಾರಿಗೆ ಬರಲಿವೆ ಎಂದು ಹೇಳಿದರು.

"ಐಪಿಸಿ, ಸಿಆರ್​ಪಿಸಿ ಮತ್ತು ಭಾರತೀಯ ಸಾಕ್ಷ್ಯ ಕಾಯ್ದೆಗಳು ಬದಲಾಗುತ್ತಿವೆ. ಸೂಕ್ತ ಸಮಾಲೋಚನೆ ಪ್ರಕ್ರಿಯೆಯನ್ನು ಅನುಸರಿಸಿದ ನಂತರ ಮತ್ತು ಭಾರತದ ಕಾನೂನು ಆಯೋಗದ ವರದಿಗಳನ್ನು ಗಮನದಲ್ಲಿಟ್ಟುಕೊಂಡು ಈ ಮೂರು ಕಾನೂನುಗಳನ್ನು ಬದಲಾಯಿಸಲಾಗಿದೆ" ಎಂದು ಮೇಘವಾಲ್ ತಿಳಿಸಿದರು.

"ಈ ಮೂರು ಕಾನೂನುಗಳನ್ನು ಜುಲೈ 1 ರಿಂದ ಭಾರತೀಯ ನ್ಯಾಯ್ ಸಂಹಿತಾ, ಭಾರತೀಯ ಸುರಕ್ಷಾ ಸಂಹಿತಾ ಮತ್ತು ಭಾರತೀಯ ಸಾಕ್ಷ್ಯ ಅಧಿನಿಯಮ್ ಎಂಬ ಹೆಸರಿನಲ್ಲಿ ಜಾರಿಗೆ ತರಲಾಗುವುದು. ಮೂರು ಹೊಸ ಕಾನೂನುಗಳ ತರಬೇತಿ ಸೌಲಭ್ಯಗಳನ್ನು ಎಲ್ಲಾ ರಾಜ್ಯಗಳಿಗೂ ಒದಗಿಸಲಾಗುತ್ತಿದೆ" ಎಂದು ಮೇಘವಾಲ್ ಹೇಳಿದರು.

ಹೊಸ ಕಾನೂನುಗಳ ಬಗ್ಗೆ ಬ್ಯೂರೋ ಆಫ್ ಪೊಲೀಸ್ ರಿಸರ್ಚ್ ಅಂಡ್ ಡೆವಲಪ್​​ಮೆಂಟ್ (ಬಿಪಿಆರ್ ಡಿ) ತರಬೇತಿ ನೀಡಲಿದೆ ಎಂದು ಅವರು ಹೇಳಿದರು.

"ನಮ್ಮ ನ್ಯಾಯಾಂಗ ಅಕಾಡೆಮಿಗಳು, ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳು ಸಹ ಈ ಬಗ್ಗೆ ತರಬೇತಿ ನೀಡುತ್ತಿವೆ. ಎಲ್ಲವೂ ಜೊತೆಜೊತೆಯಾಗಿ ಸಾಗುತ್ತಿದೆ ಮತ್ತು ಜುಲೈ 1 ರಿಂದ, ಕ್ರಿಮಿನಲ್ ನ್ಯಾಯ ವ್ಯವಸ್ಥೆಗೆ ನಿರ್ಣಾಯಕವಾದ ಈ ಎಲ್ಲಾ ಮೂರು ಕಾನೂನುಗಳನ್ನು ದೇಶದಲ್ಲಿ ಜಾರಿಗೆ ತರಲಾಗುವುದು" ಎಂದು ಅವರು ಸ್ಪಷ್ಟಪಡಿಸಿದರು.

ವಿಶೇಷವೆಂದರೆ, ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ ಅಡಿಯಲ್ಲಿ, ಅಪರಾಧದ ಸ್ವರೂಪವನ್ನು ಅವಲಂಬಿಸಿ ಸಾಮಾನ್ಯ ಕ್ರಿಮಿನಲ್ ಕಾನೂನುಗಳ ಅಡಿಯಲ್ಲಿ ಪೊಲೀಸ್ ಕಸ್ಟಡಿಯನ್ನು 15 ದಿನಗಳಿಂದ 90 ದಿನಗಳಿಗೆ ಹೆಚ್ಚಿಸಲಾಗಿದೆ.

ಭಾರತೀಯ ನ್ಯಾಯ ಸಂಹಿತಾದಲ್ಲಿ 358 ಸೆಕ್ಷನ್​ಗಳು (ಐಪಿಸಿಯ 511 ಸೆಕ್ಷನ್​ಗಳ ಬದಲು) ಇರಲಿವೆ. ಮಸೂದೆಗೆ ಒಟ್ಟು 20 ಹೊಸ ಅಪರಾಧಗಳನ್ನು ಸೇರಿಸಲಾಗಿದೆ ಮತ್ತು ಅವುಗಳಲ್ಲಿ 33 ಅಪರಾಧಗಳಿಗೆ ಜೈಲು ಶಿಕ್ಷೆಯನ್ನು ಹೆಚ್ಚಿಸಲಾಗಿದೆ. ದಂಡದ ಮೊತ್ತವನ್ನು 83 ಅಪರಾಧಗಳಲ್ಲಿ ಹೆಚ್ಚಿಸಲಾಗಿದೆ ಮತ್ತು 23 ಅಪರಾಧಗಳಲ್ಲಿ ಕಡ್ಡಾಯ ಕನಿಷ್ಠ ಶಿಕ್ಷೆಯನ್ನು ಪರಿಚಯಿಸಲಾಗಿದೆ. ಆರು ಅಪರಾಧಗಳಿಗೆ ಸಮುದಾಯ ಸೇವೆಯ ದಂಡವನ್ನು ಪರಿಚಯಿಸಲಾಗಿದೆ ಮತ್ತು 19 ವಿಭಾಗಗಳನ್ನು ರದ್ದುಪಡಿಸಲಾಗಿದೆ ಅಥವಾ ಮಸೂದೆಯಿಂದ ತೆಗೆದುಹಾಕಲಾಗಿದೆ.

ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ 531 ವಿಭಾಗಗಳನ್ನು ಹೊಂದಿರುತ್ತದೆ (ಸಿಆರ್​ಪಿಸಿಯ 484 ವಿಭಾಗಗಳ ಬದಲಿಗೆ). ಮಸೂದೆಯಲ್ಲಿ ಒಟ್ಟು 177 ನಿಬಂಧನೆಗಳನ್ನು ಬದಲಾಯಿಸಲಾಗಿದೆ ಮತ್ತು ಒಂಬತ್ತು ಹೊಸ ವಿಭಾಗಗಳು ಮತ್ತು 39 ಹೊಸ ಉಪ ವಿಭಾಗಗಳನ್ನು ಸೇರಿಸಲಾಗಿದೆ. ಕರಡು ಕಾಯ್ದೆಯು 44 ಹೊಸ ನಿಬಂಧನೆಗಳು ಮತ್ತು ಸ್ಪಷ್ಟೀಕರಣಗಳನ್ನು ಸೇರಿಸಿದೆ. 35 ವಿಭಾಗಗಳಿಗೆ ಟೈಮ್ ಲೈನ್​​ಗಳನ್ನು ಸೇರಿಸಲಾಗಿದೆ ಮತ್ತು 35 ವಿಭಾಗಗಳಲ್ಲಿ ಆಡಿಯೋ-ವಿಡಿಯೋ ನಿಬಂಧನೆಯನ್ನು ಸೇರಿಸಲಾಗಿದೆ.

ಭಾರತೀಯ ಸಾಕ್ಷಯ ಅಧಿನಿಯಮ್​ಮಲ್ಲಿ ಒಟ್ಟು 14 ವಿಭಾಗಗಳನ್ನು ರದ್ದುಪಡಿಸಲಾಗಿದೆ ಮತ್ತು ಮಸೂದೆಯಿಂದ ತೆಗೆದುಹಾಕಲಾಗಿದೆ. ಇದು 170 ನಿಬಂಧನೆಗಳನ್ನು ಹೊಂದಿರುತ್ತದೆ (ಮೂಲ 167 ನಿಬಂಧನೆಗಳ ಬದಲು) ಮತ್ತು ಒಟ್ಟು 24 ನಿಬಂಧನೆಗಳನ್ನು ಬದಲಾಯಿಸಲಾಗಿದೆ. ಎರಡು ಹೊಸ ನಿಬಂಧನೆಗಳು ಮತ್ತು ಆರು ಉಪ ನಿಬಂಧನೆಗಳನ್ನು ಸೇರಿಸಲಾಗಿದೆ ಮತ್ತು ಆರು ನಿಬಂಧನೆಗಳನ್ನು ರದ್ದುಪಡಿಸಲಾಗಿದೆ ಅಥವಾ ಮಸೂದೆಯಿಂದ ತೆಗೆದುಹಾಕಲಾಗಿದೆ.

ಭಾರತದಲ್ಲಿ ಇತ್ತೀಚಿನ ಅಪರಾಧ ನ್ಯಾಯ ಸುಧಾರಣೆಯು ದೇಶದ ನ್ಯಾಯದಾನ ಪ್ರಕ್ರಿಯೆಯಲ್ಲಿ ಗಮನಾರ್ಹ ಬದಲಾವಣೆಯಾಗುತ್ತಿರುವುದನ್ನು ಇದು ಸೂಚಿಸುತ್ತದೆ. ಮಹಿಳೆಯರು, ಮಕ್ಕಳು ಮತ್ತು ರಾಷ್ಟ್ರದ ವಿರುದ್ಧದ ಅಪರಾಧಗಳನ್ನು ಇದು ಮುಂಚೂಣಿಯಲ್ಲಿರಿಸುತ್ತದೆ. ಅಲ್ಲದೆ ಇದು ವಸಾಹತುಶಾಹಿ ಯುಗದ ಕಾನೂನುಗಳಿಗೆ ಸಂಪೂರ್ಣವಾಗಿ ವಿರುದ್ಧವಾಗಿದೆ.

ಇದನ್ನೂ ಓದಿ : 'ಅವು ಯಾರೂ ಪರಿಶೀಲಿಸಲಾಗದ ಕಪ್ಪು ಪೆಟ್ಟಿಗೆಗಳು': ಇವಿಎಂ ವಿರುದ್ಧ ರಾಹುಲ್ ಗಾಂಧಿ ಕಿಡಿ - Rahul Gandhi Criticize EVM

ABOUT THE AUTHOR

...view details