ಗೋರಖ್‌ಪುರ/ ಮುಂಬೈ:ನೇಪಾಳದಲ್ಲಿ ಸಂಭವಿಸಿದ ಬಸ್ ದುರಂತದಲ್ಲಿ ಸಾವನ್ನಪ್ಪಿದವರ ಭಾರತೀಯರ ಸಂಖ್ಯೆ 27ಕ್ಕೆ ಏರಿದೆ. ಈ ಪೈಕಿ 25 ಮಂದಿ ಮಹಾರಾಷ್ಟ್ರದವರಾಗಿದ್ದರೆ, ಇಬ್ಬರು ಉತ್ತರಪ್ರದೇಶವರಾಗಿದ್ದಾರೆ. 16 ಮಂದಿ ತೀವ್ರ ಗಾಯಗೊಂಡಿದ್ದಾರೆ. ಉಳಿದವರು ನಾಪತ್ತೆಯಾಗಿದ್ದು, ಹುಡುಕಾಟ ನಡೆಸಲಾಗುತ್ತಿದೆ.
ಅಪಘಾತದ ವೇಳೆ ಬಸ್ನಲ್ಲಿ 51 ಪ್ರಯಾಣಿಕರಿದ್ದರು. ಎಲ್ಲರೂ ಮಹಾರಾಷ್ಟ್ರದವರಾಗಿದ್ದಾರೆ. ಪ್ರಯಾಣಿಕರನ್ನು ಹೊತ್ತ ಬಸ್ ನೇಪಾಳದ ಪೋಖಾರಾ ಪ್ರವಾಸಿ ರೆಸಾರ್ಟ್ನಿಂದ ರಾಜಧಾನಿ ಕಠ್ಮಂಡುವಿನ ಕಡೆ ಬರುತ್ತಿದ್ದಾಗ ತನಾಹುನ್ ಜಿಲ್ಲೆಯ ಮಾರ್ಸ್ಯಾಂಗ್ಡಿ ನದಿಗೆ ಆಯತಪ್ಪಿ ಶುಕ್ರವಾರ ಉರುಳಿ ಬಿದ್ದಿದೆ.
ನಿನ್ನೆಯೇ 14 ಭಾರತೀಯರ ಮೃತದೇಹಗಳು ಸಿಕ್ಕಿದ್ದವು. 16 ಮಂದಿ ಗಾಯಗೊಂಡಿದ್ದರು. ಉಳಿದವರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಅಪಘಾತದಲ್ಲಿ ಬಸ್ಸಿನ ಚಾಲಕ ಮತ್ತು ಸಹಾಯಕ ಕೂಡ ಮೃತಪಟ್ಟಿದ್ದಾರೆ. ಇಬ್ಬರೂ ಉತ್ತರಪ್ರದೇಶದವರಾಗಿದ್ದಾರೆ. ಚಾಲಕ ಗೋರಖ್‌ಪುರ ಜಿಲ್ಲೆಯ ಪಿಪ್ರೈಚ್ ನಿವಾಸಿಯಾಗಿದ್ದರೆ, ಸಹಾಯಕ ಕುಶಿನಗರ ಜಿಲ್ಲೆಯವರು. ಇಂದು ಚಾಲಕ ಮತ್ತು ಸಹಾಯಕ ಸೇರಿ 27 ಶವಗಳನ್ನು ಪತ್ತೆ ಮಾಡಲಾಗಿದೆ.