ಬೆಂಗಳೂರು: ಬೆಂಗಳೂರು ಅರಮನೆ ಮೈದಾನ ರಸ್ತೆ ಅಗಲೀಕರಣ ಯೋಜನೆ ಕೈಬಿಡುವ ಸಂಬಂಧ ರಾಜ್ಯ ಸರ್ಕಾರಕ್ಕೆ ಅಧಿಕಾರ ನೀಡುವ ಸುಗ್ರೀವಾಜ್ಞೆ ಹೊರಡಿಸಲು ಸಚಿವ ಸಂಪುಟ ಸಭೆ ತೀರ್ಮಾನಿಸಿದೆ.
ದೊಡ್ಡ ಪ್ರಮಾಣದ ಟಿಡಿಆರ್ ಪಾವತಿ ಕುಣಿಕೆಯಿಂದ ತಪ್ಪಿಸಲು ರಾಜ್ಯ ಸರ್ಕಾರ ಈ ತೀರ್ಮಾನಕ್ಕೆ ಬಂದಿದೆ. ರಸ್ತೆ ಅಗಲೀಕರಣದ ಬದಲಿಗೆ ರಾಜ್ಯ ಸರ್ಕಾರ ಹೊಸದೊಂದು ಟನಲ್ ಯೋಜನೆಗೆ ಮುಂದಾಗಿದೆ.
ಅರಮನೆ ಮೈದಾನ ರಸ್ತೆ ಅಗಲೀಕರಣ ಯೋಜನೆ ಬಹಳ ವರ್ಷಗಳಿಂದ ಕಾರ್ಯರೂಪಕ್ಕೆ ತರಲಾಗದೆ ನ್ಯಾಯಾಯಲದ ವ್ಯಾಜ್ಯದಲ್ಲೇ ಸಿಲುಕಿಕೊಂಡಿದೆ. ಅರಮನೆ ಮೈದಾನ ವಾರಸುದಾರರಿಗೆ ಟಿಡಿಆರ್ ಮೊತ್ತ ನೀಡುವ ಸಂಬಂಧ ಸುಪ್ರೀಂ ಕೋರ್ಟ್ನಲ್ಲಿ ಸುದೀರ್ಘ ವ್ಯಾಜ್ಯಗಳು ನಡೆಯುತ್ತಿದ್ದು, ರಸ್ತೆ ಅಗಲೀಕರಣ ಯೋಜನೆ ಮರೀಚಿಕೆಯಾಗೇ ಉಳಿದಿದೆ.
ಚಾಲುಕ್ಯ ವೃತ್ತದಿಂದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದವರೆಗೆ ರಸ್ತೆ ಅಗಲೀಕರಣ ಯೋಜನೆಗಾಗಿ ಅರಮನೆ ಮೈದಾನದ 15.36 ಎಕರೆ ಜಮೀನನ್ನು ಸ್ವಾಧೀನಪಡಿಸಲಾಗಿದೆ. ಆದರೆ ಅದಕ್ಕೆ ಅರಮನೆ ಮೈದಾನ ವಾರಸುದಾರರಿಗೆ ಟಿಡಿಆರ್ ನೀಡುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿತ್ತು.
ಅದರಂತೆ ರೂ. 2,83,500 ಪ್ರತಿ ಚದರ್ ಮೀಟರ್‌ಗೆ (ಬಳ್ಳಾರಿ ರಸ್ತೆ) ಮತ್ತು ರೂ. 2,04,000 ಪ್ರತಿ ಚದರ್ ಮೀಟರ್‌ಗೆ (ಜಯಮಹಲ್ ರಸ್ತೆ) ಮೌಲ್ಯದಂತೆ 3,011 ಕೋಟಿ ರೂ. ಟಿ.ಡಿ.ಆರ್ ನೀಡಬೇಕಾಗಿದೆ. ಇಷ್ಟು ದೊಡ್ಡ ಪ್ರಮಾಣದ ಟಿಡಿಆರ್ ನೀಡುವುದರಿಂದ ಸರ್ಕಾರದ ಮೇಲೆ ತೀವ್ರ ಆರ್ಥಿಕ ಹೊರೆ ಬೀಳಲಿದೆ. ಇದು ಕಾರ್ಯಸಾಧುವಲ್ಲದ ಕಾರಣ ರಾಜ್ಯ ಸರ್ಕಾರ ಇದೀಗ ಅರಮನೆ ಮೈದಾನ ಭೂಮಿ ಬಳಿ ರಸ್ತೆ ಅಗಲೀಕರಣವನ್ನು ಕೈ ಬಿಟ್ಟು ಪರ್ಯಾಯ ಯೋಜನೆಯ ಆಲೋಚನೆ ಮಾಡಿದೆ.
ರಸ್ತೆ ಅಗಲೀಕರಣ ಬದಲು ಸುರಂಗ ಮಾರ್ಗದ ಯೋಚನೆ : ಬೆಂಗಳೂರು ಅರಮನೆ ಮೈದಾನದ ಆಸ್ತಿಗೆ 3,011 ಕೋಟಿ ರೂ. ಟಿಡಿಆರ್ ಕೊಡುವುದರ ಬದಲು ಸುರಂಗ ರಸ್ತೆ ಯೋಜನೆಯ ಚಿಂತನೆ ನಡೆಸಿದೆ. ಈ ಸಂಬಂಧ ಕಳೆದ ವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಗಂಭೀರ ಚರ್ಚೆಯೂ ನಡೆದಿದೆ. ರಸ್ತೆ ಅಗಲೀಕರಣ ಪ್ರಸ್ತಾವನೆ ಕೈಬಿಟ್ಟು ಅರಮನೆ ಮೈದಾನದ ಪಕ್ಕದ ಜಾಗದಲ್ಲಿ ಸುರಂಗ ರಸ್ತೆ ಮಾರ್ಗ ಮಾಡಲು ಮುಂದಾಗಿದೆ. ಅರಮನೆ ರಸ್ತೆಯ ಪಕ್ಕದಲ್ಲೆ ಹಾದು ಹೋಗುವ ಈ ಪ್ರಸ್ತಾಪಿತ ಸುರಂಗ ರಸ್ತೆ ಮಾರ್ಗದ ಪಿಪಿಟಿ ಪ್ರಾತ್ಯಕ್ಷಿಯನ್ನು ಕಳೆದ ವಾರ ನಡೆದ ಸಚಿವ ಸಂಪುಟದ ಮುಂದೆ ಮಂಡನೆ ಮಾಡಲಾಗಿದೆ.
ಸಚಿವ ಸಂಪುಟ ಸಭೆಯ ಮುಂದೆ ಸರ್ಕಾರದ ಮುಖ್ಯ ವಾಸ್ತುಶಿಲ್ಪಿ ಮಂಡಿಸಿದ ಈ ಪ್ರಾತ್ಯಕ್ಷಿಕೆ ಪ್ರಕಾರ ಚಾಲುಕ್ಯ ವೃತ್ತ-ವಿಂಡ್ಸನ್ ಮ್ಯಾನರ್ ಬ್ರಿಡ್ಜ್ ನಡುವೆ ಅಂದಾಜು 900 ಮೀಟರ್ ಸುರಂಗ ಮಾರ್ಗ ಮತ್ತು ವಿಂಡ್ಸರ್ ಮ್ಯಾನರ್ ಬ್ರಿಡ್ಜ್- ಎಸ್ಟೀಮ್ ಮಾಲ್ ನಡುವೆ ಅಂದಾಜು 1,200 ಮೀಟರ್ ಸುರಂಗ ಮಾರ್ಗ ನಿರ್ಮಾಣದ ರೂಪುರೇಷೆಯನ್ನು ವಿವರಿಸಿದ್ದಾರೆ. ಸುಮಾರು 1.5 ಕಿ.ಮೀ ವರೆಗೆ ಸುರಂಗ ಮಾರ್ಗ ನಿರ್ಮಿಸುವ ಯೋಚನೆ ಮಾಡಲಾಗಿದೆ. ಈ ಪ್ರಸ್ತಾವನೆಗೆ ಬೆಂಗಳೂರಿನ ಸಚಿವರು ಸಹಮತ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಬಳ್ಳಾರಿ ರಸ್ತೆ ಕಡೆಯ ಅರಮನೆ ಮೈದಾನದ ಮುಂಭಾಗದಲ್ಲಿ ಈ ಸುರಂಗ ಮಾರ್ಗ ನಿರ್ಮಿಸಲು ಯೋಜಿಸಲಾಗಿದೆ. ಈ ಸುರಂಗ ಮಾರ್ಗ ಮಾಡಲು ಸಮಾರು ಒಂದು ವರ್ಷ ಬೇಕಾಗಲಿದೆ ಎಂದು ಹೇಳಲಾಗಿದೆ. ಈಗಾಗಲೇ ಸುರಂಗ ಮಾರ್ಗ ಹಾದು ಹೋಗುವ ಜಾಗದ ಆಸ್ತಿ ಮಾಲೀಕರ ಜೊತೆ ಹಲವು ಸುತ್ತಿನ ಸಭೆಗಳನ್ನೂ ನಡೆಸಲಾಗಿದೆ. ಅವರೂ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎನ್ನಲಾಗಿದೆ. ಆಸ್ತಿ ಮಾಲೀಕರಿಗೆ ಪರಿಹಾರವಾಗಿ 700 ಕೋಟಿ ರೂ. ವೆಚ್ಚವಾಗುವ ಅಂದಾಜು ಮಾಡಲಾಗಿದೆ. ಪರಿಹಾರ ಮೊತ್ತ ಸುರಂಗ ಮಾರ್ಗ ಸೇರಿ ಒಟ್ಟು ಯೋಜನೆಯ ವೆಚ್ಚ ಅಂದಾಜು 1,200-1,500 ಕೋಟಿ ರೂ. ಆಗಬಹುದು ಎನ್ನಲಾಗಿದೆ.
ಕಡಿಮೆ ವೆಚ್ಚದಲ್ಲಿ ಕಾರ್ಯಸಾಧು ಸುರಂಗ ರಸ್ತೆಗೆ ಒಲವು : ಈ ಪ್ರಸ್ತಾಪಿತ ಸುರಂಗ ಮಾರ್ಗ ಯೋಜನೆಗೆ ಸಚಿವರುಗಳು ಸಹಮತ ವ್ಯಕ್ತಪಡಿಸಿದ್ದಾರೆ. ಆಸ್ತಿ ಮಾಲೀಕರ ಜೊತೆಗೂ ಹಲವು ಸಮಾಲೋಚನೆ ನಡೆಸಲಾಗಿದ್ದು, ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಸುರಂಗ ಮಾರ್ಗ ಯೋಜನೆಗೆ ಅಂದಾಜು 1,200-1,500 ಕೋಟಿ ರೂ. ವೆಚ್ಚವಾಗುವ ಸಾಧ್ಯತೆ ಇದೆ.
ಅರಮನೆ ಮೈದಾನದ ರಸ್ತೆ ಅಗಲೀಕರಣ ಯೋಜನೆಗೆ ಪರಿಹಾರಾರ್ಥ ಟಿಡಿಆರ್ಗೇ ಮೂರು ಸಾವಿರ ಕೋಟಿ ರೂ. ತಗುಲುತ್ತದೆ. ಇಷ್ಟು ದೊಡ್ಡ ಆರ್ಥಿಕ ಹೊರೆಯೊಂದಿಗೆ ರಸ್ತೆ ಅಗಲೀಕರಣ ಯೋಜನೆ ಕಾರ್ಯಸಾಧುವಲ್ಲ ಎಂಬ ಸ್ಪಷ್ಟತೆಗೆ ಸರ್ಕಾರ ಬಂದಿದೆ. ರಸ್ತೆ ಅಗಲೀಕರಣದ ಪರಿಹಾರ ಮೊತ್ತ 3,011 ಕೋಟಿ ರೂ.ನ ಅರ್ಧ ಮೊತ್ತಕ್ಕೆ ಅಂದರೆ ಅಂದಾಜು 1,500 ಕೋಟಿ ರೂ. ವೆಚ್ಚದಲ್ಲಿ ಸುರಂಗ ರಸ್ತೆ ಮಾರ್ಗ ಯೋಜನೆ ಕಾರ್ಯರೂಪಕ್ಕೆ ತರಬಹುದಾಗಿರುವುದರಿಂದ, ಈ ಪರ್ಯಾಯ ಯೋಜನೆಯತ್ತ ಸರ್ಕಾರ ಹೆಚ್ಚಿನ ಒಲವು ಹೊಂದಿದೆ.
ಇದನ್ನೂ ಓದಿ: ಅರಮನೆ ಮೈದಾನ ರಸ್ತೆ ಅಗಲೀಕರಣ ಯೋಜನೆ ಕೈಬಿಡಲು ಅಧಿಕಾರ ನೀಡುವ ಸುಗ್ರೀವಾಜ್ಞೆ ಹೊರಡಿಸಲು ಸಚಿವ ಸಂಪುಟ ತೀರ್ಮಾನ!