ಕರ್ನಾಟಕ

karnataka

ETV Bharat / bharat

NEET-UG ಪರಿಷ್ಕೃತ ವೇಳಾಪಟ್ಟಿ ಪ್ರಕಟ: 67ರ ಬದಲು 17 ಅಭ್ಯರ್ಥಿಗಳಷ್ಟೇ ಟಾಪರ್ಸ್​​​, 2 ಅಂಕ ಕಟ್​ಆಫ್​ ಕಡಿತ - NEET revised result - NEET REVISED RESULT

ವೈದ್ಯಕೀಯ ಪ್ರವೇಶಕ್ಕಾಗಿ ನಡೆದ ನೀಟ್​ ಪರೀಕ್ಷೆಯಲ್ಲಿ ಅಕ್ರಮಗಳು ನಡೆದ ಆರೋಪ ಕೇಳಿ ಬಂದಿವೆ. ಈ ಪ್ರಕರಣದ ನಡುವೆ ಎನ್​ಟಿಎ ಪರಿಷ್ಕೃತ ಫಲಿತಾಂಶವನ್ನು ಜುಲೈ 27 ರಂದು ಪ್ರಕಟಿಸಿದೆ.

NEET-UG ಪರಿಷ್ಕೃತ ವೇಳಾಪಟ್ಟಿ ಪ್ರಕಟ
NEET-UG ಪರಿಷ್ಕೃತ ವೇಳಾಪಟ್ಟಿ ಪ್ರಕಟ (ETV Bharat)

By ETV Bharat Karnataka Team

Published : Jul 27, 2024, 5:42 PM IST

ಕೋಟಾ (ರಾಜಸ್ಥಾನ):ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ನಡುವೆ ನೀಟ್​-ಯುಜಿ ವೈದ್ಯಕೀಯ ಪ್ರವೇಶ ಪರೀಕ್ಷೆಯ ಪರಿಷ್ಕೃತ ವೇಳಾಪಟ್ಟಿಯನ್ನು ಶನಿವಾರ (ಜುಲೈ 27) ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಟಾಪರ್​ಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಕುಸಿದಿದೆ. ಈಗಿನ ಪಟ್ಟಿಯಲ್ಲಿ ಕೇವಲ 17 ಅಭ್ಯರ್ಥಿಗಳು ಮಾತ್ರ ಟಾಪರ್​ಗಳಾಗಿದ್ದಾರೆ. ಈ ಹಿಂದೆ ಪ್ರಕಟಿಸಲಾಗಿದ್ದ ಫಲಿತಾಂಶದಲ್ಲಿ 67 ಅಭ್ಯರ್ಥಿಗಳು ಟಾಪರ್ಸ್​ ಆಗಿ ಹೊರ ಹೊಮ್ಮಿದ್ದರು.

ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯು (ಎನ್​ಟಿಎ) ದೇಶದ ಅತಿದೊಡ್ಡ ವೈದ್ಯಕೀಯ ಪ್ರವೇಶ ಪರೀಕ್ಷೆಯ ಫಲಿತಾಂಶವನ್ನು ಸುಪ್ರೀಂಕೋರ್ಟ್​ ನಿರ್ದೇಶನದ ಮೇರೆಗೆ ಇಂದು ಬಿಡುಗಡೆ ಮಾಡಿದೆ. ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ ಫಲಿತಾಂಶದ ಮಾಹಿತಿಯ ಪ್ರಕಾರ, ಪರಿಷ್ಕೃತ ಫಲಿತಾಂಶಗಳಲ್ಲಿ ಸಾಮಾನ್ಯ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗಗಳ (ಇಡಬ್ಲ್ಯೂಎಸ್​) ಅರ್ಹತಾ ಕಟ್ಆಫ್‌ನಲ್ಲಿ ಇಳಿಕೆ ಕಂಡುಬಂದಿದೆ. ಈ ಹಿಂದೆ ಬಿಡುಗಡೆಯಾದ ಫಲಿತಾಂಶಗಳಿಗಿಂತ 2 ಪಾಯಿಂಟ್‌ಗಳಷ್ಟು ಇಳಿಸಲಾಗಿದೆ. ಅಂದರೆ, 164 ರಿಂದ 162 ಅಂಕಗಳಿಗೆ ಕಡಿತಗೊಳಿಸಲಾಗಿದೆ ಎಂದು ಶಿಕ್ಷಣ ತಜ್ಞ ದೇವ್ ಶರ್ಮಾ ತಿಳಿಸಿದ್ದಾರೆ.

ಒಬಿಸಿ, ಎಸ್‌ಸಿ ಮತ್ತು ಎಸ್‌ಟಿ ವರ್ಗಗಳ ಅರ್ಹತಾ ಕಟ್‌ಆಫ್ ಅನ್ನು 129 ರಿಂದ 127 ಅಂಕಗಳಿಗೆ ಇಳಿಸಲಾಗಿದೆ. ಮತ್ತೊಂದೆಡೆ, ಪರಿಷ್ಕೃತ ಫಲಿತಾಂಶದಲ್ಲಿ ಟಾಪರ್​ಗಳ ಸಂಖ್ಯೆಯೂ 17 ಕ್ಕೆ ಇಳಿದಿದ್ದು, ಇದರಲ್ಲಿ ರಾಜಸ್ಥಾನವು ಮುಂದಿದೆ. ರಾಜ್ಯದಿಂದ ಪರೀಕ್ಷೆಗೆ ಹಾಜರಾದವರ ಪೈಕಿ ನಾಲ್ವರು ಅಭ್ಯರ್ಥಿಗಳು ಪೂರ್ಣ ಅಂಕಗಳನ್ನು ಗಳಿಸಿದ್ದಾರೆ. ಮಹಾರಾಷ್ಟ್ರದ ಮೂವರು ಟಾಪ್​ ಬಂದಿದ್ದು ಎರಡನೇ ಸ್ಥಾನದಲ್ಲಿದ್ದರೆ, ದೆಹಲಿ ಮತ್ತು ಉತ್ತರಪ್ರದೇಶ ಜಂಟಿಯಾಗಿ ಇಬ್ಬರು ಟಾಪರ್‌ಗಳೊಂದಿಗೆ ಮೂರನೇ ಸ್ಥಾನದಲ್ಲಿವೆ.

ದಾಖಲೆಯ 13.15 ಲಕ್ಷ ಅಭ್ಯರ್ಥಿಗಳು ಅರ್ಹತೆ:ನೀಟ್ ಪರೀಕ್ಷೆಗೆ 24 ಲಕ್ಷದ 6 ಸಾವಿರದ 79 ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ದರು. ಈ ಪೈಕಿ 23 ಲಕ್ಷದ 33 ಸಾವಿರದ 162 ಮಂದಿ ಪರೀಕ್ಷೆ ಬರೆದಿದ್ದರು. ಇದರಲ್ಲಿ 13 ಲಕ್ಷದ 15 ಸಾವಿರದ 853 ಮಂದಿ ಅರ್ಹತೆ ಪಡೆದಿದ್ದಾರೆ. ಈ ಅಭ್ಯರ್ಥಿಗಳ ಪೈಕಿ ಒಬಿಸಿ ವರ್ಗದಿಂದ ಗರಿಷ್ಠ 6 ಲಕ್ಷ 18 ಸಾವಿರ 525, ಸಾಮಾನ್ಯ ವರ್ಗದಿಂದ 3 ಲಕ್ಷ 33 ಸಾವಿರ 929, ಇದಾದ ನಂತರ ಎಸ್‌ಸಿ ವರ್ಗದಿಂದ 1 ಲಕ್ಷ 78 ಸಾವಿರದ 741 ಅಭ್ಯರ್ಥಿಗಳು ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ.

ಇಡಬ್ಲ್ಯೂಎಸ್​ ವರ್ಗದಿಂದ 1 ಲಕ್ಷದ 16 ಸಾವಿರದ 157 ಅಭ್ಯರ್ಥಿಗಳು, ಎಸ್​​ಟಿ ವರ್ಗದಲ್ಲಿ 68 ಸಾವಿರದ 501 ಅಭ್ಯರ್ಥಿಗಳು ಪಾಸ್​ ಆಗಿದ್ದಾರೆ. ಲಿಂಗ ಆಧಾರದ ಪ್ರಕಾರ ಅರ್ಹ ಅಭ್ಯರ್ಥಿಗಳಲ್ಲಿ ಮಹಿಳಾ ಅಭ್ಯರ್ಥಿಗಳು 7 ಲಕ್ಷ 69 ಸಾವಿರದ 277 ಮತ್ತು ಪುರುಷ ಅಭ್ಯರ್ಥಿಗಳು 5 ಲಕ್ಷ 46 ಸಾವಿರದ 566 ಅರ್ಹರಾಗಿದ್ದರೆ, 10 ಮಂದಿ ತೃತೀಯಲಿಂಗಿ ವರ್ಗದ ಅಭ್ಯರ್ಥಿಗಳು ಪಾಸ್​ ಆಗಿದ್ದಾರೆ.

ನೀಟ್ ವಿವಾದ:ಈ ಹಿಂದೆ ಜೂನ್​ 4 ರಂದು ನೀಟ್​ ಪರೀಕ್ಷೆ ಫಲಿತಾಂಶ ಪ್ರಕಟಿಸಲಾಗಿತ್ತು. ಆದರೆ, ಮೌಲ್ಯಮಾಪಕರ ತಪ್ಪು, ಪ್ರಶ್ನೆಪತ್ರಿಕೆ ಸೋರಿಕೆ, ಪರೀಕ್ಷೆ ವೇಳೆ ಸಮಯ ನಷ್ಟ ಸೇರಿದಂತೆ ವಿವಿಧ ಕಾರಣಗಳಿಗಾಗಿ ಫಲಿತಾಂಶ ಭಾರೀ ವಿವಾದಕ್ಕೆ ಕಾರಣವಾಗಿದೆ. ಫಲಿತಾಂಶ ಪಟ್ಟಿಯಲ್ಲಿ 67 ಅಭ್ಯರ್ಥಿಗಳು ಪೂರ್ಣಾಂಕ ಗಳಿಸಿ ಟಾಪರ್​ ಆಗಿದ್ದರು. ಇದರ ವಿರುದ್ಧ ಸುಪ್ರೀಂಕೋರ್ಟ್​ ಮೆಟ್ಟಿಲೇರಲಾಗಿತ್ತು. ವಿಚಾರಣೆಯ ಬಳಿಕ ಎನ್​ಟಿಎ ತನ್ನೆಲ್ಲಾ ತಪ್ಪುಗಳನ್ನು ತಿದ್ದುಕೊಂಡು ಇದೀಗ ಪರಿಷ್ಕೃತ ವೇಳಾಪಟ್ಟಿ ಬಿಡುಗಡೆ ಮಾಡಿದೆ.

ಇದನ್ನೂ ಓದಿ;ನೀಟ್​ ಪ್ರಶ್ನೆಪತ್ರಿಕೆ ಅಕ್ರಮ ವ್ಯವಸ್ಥಿತ ಪಿತೂರಿಯಲ್ಲ, ಪರೀಕ್ಷೆ ರದ್ದು ಪಡಿಸಲು ಸಾಧ್ಯವಿಲ್ಲ: ಸುಪ್ರೀಂಕೋರ್ಟ್​ - Supreme Court on NEET exam

ABOUT THE AUTHOR

...view details