ಪಾಟ್ನಾ(ಬಿಹಾರ):ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ-ಪದವಿಪೂರ್ವ (NEET-UG) ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಬಿಹಾರ ಪೊಲೀಸರು ಭರ್ಜರಿ ಬಲೆ ಬೀಸಿದ್ದಾರೆ. ಕಿಂಗ್ಪಿನ್, ಆತನ ಸಹಚರರು, ಪರೀಕ್ಷಾ ಆಕಾಂಕ್ಷಿಗಳು ಸೇರಿದಂತೆ ಹಲವರನ್ನು ಬಂಧಿಸಿದೆ. ವಿಶೇಷವೆಂದರೆ, ಪರೀಕ್ಷೆಗೂ ಮುನ್ನ ಪ್ರಶ್ನೆಪತ್ರಿಕೆ ಪಡೆಯಲು ಪ್ರತಿ ವಿದ್ಯಾರ್ಥಿಯಿಂದ 35 ಲಕ್ಷ ರೂಪಾಯಿ ವಸೂಲಿ ಮಾಡಿದ್ದರು ಎಂಬ ಸಂಗತಿ ಹೊರಬಿದ್ದಿದೆ.
ಪ್ರಶ್ನೆಪತ್ರಿಕೆ ಸೋರಿಕೆ ಹಿಂದಿನ ಮಾಸ್ಟರ್ಮೈಂಡ್ ಪರೀಕ್ಷೆಗೂ ಒಂದು ದಿನ ಮುಂಚೆ ವಿದ್ಯಾರ್ಥಿಗಳಿಗೆ ನಿಜವಾದ ಪ್ರಶ್ನೆಪತ್ರಿಕೆಯನ್ನು ಹಂಚಿ, ಅವುಗಳ ಉತ್ತರ ಪತ್ರಿಕೆಯನ್ನೂ ನೀಡಿದ್ದ. ಅದರಂತೆ ವಿದ್ಯಾರ್ಥಿಗಳು ಉತ್ತರಗಳನ್ನು ಕಂಠಪಾಠ ಮಾಡಿಕೊಂಡಿದ್ದರು ಎಂದು ಅಕ್ರಮದಲ್ಲಿ ಭಾಗಿಯಾಗಿ ಬಂಧಿತನಾಗಿರುವ ಪರೀಕ್ಷಾರ್ಥಿ ಅನುರಾಗ್ ಯಾದವ್ ಎಂಬಾತ ಪೊಲೀಸರ ಎದುರು ಬಾಯಿಬಿಟ್ಟಿದ್ದಾನೆ.
ರಾಜಸ್ಥಾನದ ಕೋಟಾದಲ್ಲಿ ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿಯೊಬ್ಬ ಬಿಹಾರದಲ್ಲಿ ಪರೀಕ್ಷೆ ಬರೆದಿದ್ದು, ಆತನ ಕುಟುಂಬದ ವ್ಯಕ್ತಿಯೊಬ್ಬರು 'ಎಲ್ಲ ವ್ಯವಸ್ಥೆ' ಮಾಡಲಾಗಿದೆ ಎಂದು ಹೇಳಿ ಕರೆಸಿಕೊಂಡಿದ್ದರು. ಪ್ರಶ್ನೆಪತ್ರಿಕೆ ಸಿಕ್ಕಬಳಿಕ ನಿತೀಶ್ ಕುಮಾರ್, ಅಮಿತ್ ಆನಂದ್, ಆಯುಷ್ ಕುಮಾರ್, ಶಿವಾನಂದ್ ಕುಮಾರ್ ಮತ್ತು ಅಭಿಷೇಕ್ ಕುಮಾರ್ ಎಂಬುವರನ್ನು ಪರಿಚಯಿಸಿದೆ. ನೀಟ್ ಪರೀಕ್ಷೆಯ ದಿನ ನಿಜವಾದ ಪತ್ರಿಕೆಯೂ ಮತ್ತು ಹಿಂದಿನ ದಿನ ನಮಗೆ ಸೋರಿಕೆ ಆಗಿದ್ದ ಪತ್ರಿಕೆಯೂ ಒಂದೇ ಆಗಿತ್ತು. ಅಕ್ರಮದಲ್ಲಿ ತಾನು ಭಾಗಿಯಾಗಿದ್ದಾಗಿ ವಿದ್ಯಾರ್ಥಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
₹32 ಲಕ್ಷಕ್ಕೆ ಮಾರಾಟ:ಪರೀಕ್ಷೆಗೂ ಮುನ್ನವೇ ಪೇಪರ್ ಲೀಕ್ ಆಗುತ್ತದೆ ಎಂದು ಕೆಲ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಾಗಿತ್ತು ಎಂದು ಆರೋಪಿ ಸಿಕಂದರ್ ಯಾದವ್ ತಪ್ಪೊಪ್ಪಿಗೆಯಲ್ಲಿ ತಿಳಿಸಿದ್ದಾನೆ. ಪ್ರಶ್ನೆಪತ್ರಿಕೆ ಪಡೆಯಲು 32 ಲಕ್ಷ ನೀಡಬೇಕಾಗುತ್ತದೆ ಎಂದು ತಿಳಿಸಿದ್ದೆ. ಅದರಂತೆ ಮೇ 4 ರಂದು ಹಲವು ವಿದ್ಯಾರ್ಥಿಗಳಿಂದ ಹಣ ಪಡೆದು ಪ್ರಶ್ನೆಪತ್ರಿಕೆ ನೀಡಲಾಗಿತ್ತು. ನಿಗದಿತ ಸ್ಥಳದಲ್ಲಿ ಈ ವ್ಯವಹಾರ ನಡೆಸಿದ್ದೆವು ಎಂದು ಆತ ಬಾಯಿಬಿಟ್ಟಿದ್ದಾನೆ.