ನವದೆಹಲಿ:ಭಾರತದ ನ್ಯಾಯಾಂಗ ವ್ಯವಸ್ಥೆಯ ವೇಗ ಕಡಿಮೆ ಎಂಬ ಅಪಸ್ವರಕ್ಕೆ ಇಂಬು ನೀಡುವಂತ ಅಚ್ಚರಿಯ ಅಂಶವೊಂದು ಹೊರಬಿದ್ದಿದೆ. ದೇಶದ ವಿವಿಧ ಹೈಕೋರ್ಟ್‌ಗಳಲ್ಲಿ 30 ವರ್ಷಕ್ಕಿಂತ ಹಳೆಯದಾದ 62 ಸಾವಿರಕ್ಕೂ ಅಧಿಕ ಕೇಸ್ಗಳು ಇನ್ನೂ ವಿಲೇವಾರಿಯಾಗಿಲ್ಲ. 1952 ರಲ್ಲಿ ದಾಖಲಾದ ಮೂರು ಪ್ರಕರಣಗಳು ಈವರೆಗೂ ಚುಕ್ತಾ ಆಗಿಲ್ಲ. ಅಂದರೆ, 72 ವರ್ಷಗಳಿಂದ ಅವು ಬಾಕಿ ಉಳಿದುಕೊಂಡಿದೆ.
ಇಂಥದ್ದೊಂದು ಅಂಶವು ರಾಷ್ಟ್ರೀಯ ನ್ಯಾಯಾಂಗ ದತ್ತಾಂಶ ಗ್ರಿಡ್ (ಎನ್ಜೆಡಿಜಿ) ವರದಿಯಲ್ಲಿದೆ. ಹೈಕೋರ್ಟ್‌ಗಳಲ್ಲಿ ಅತ್ಯಂತ ಹಳೆಯ ಪ್ರಕರಣಗಳು ಅಂತ್ಯಕಂಡಿಲ್ಲ ಎಂಬುದನ್ನು ಅದರಲ್ಲಿ ವಿವರಿಸಲಾಗಿದೆ. 1952 ರಿಂದ ಮೂರು ದಾವೆಗಳು ವಿಲೇವಾರಿಗೆ ಕಾಯುತ್ತಿವೆ. 1954 ರಿಂದ ನಾಲ್ಕು, 1955 ರಿಂದ ಒಂಬತ್ತು ಕೇಸ್ಗಳು ಹೈಕೋರ್ಟ್‌ಗಳಲ್ಲಿ ಕೊಳೆಯುತ್ತಿವೆ ಎಂದು ವರದಿ ಹೇಳಿದೆ.
1952 ರಿಂದ ಬಾಕಿ ಉಳಿದಿರುವ ಮೂರು ಪ್ರಕರಣಗಳ ಪೈಕಿ ಎರಡು ಪಶ್ಚಿಮ ಬಂಗಾಳದ ಕೋಲ್ಕತ್ತಾ ಹೈಕೋರ್ಟ್‌ನಲ್ಲಿ ಮತ್ತು ಇನ್ನೊಂದು ಮದ್ರಾಸ್ ಹೈಕೋರ್ಟ್‌ನಲ್ಲಿ ಇತ್ಯರ್ಥವಾಗದೆ ಉಳಿದಿದೆ. ಹೈಕೋರ್ಟ್‌ಗಳಲ್ಲಿ ಬಾಕಿ ಉಳಿದಿರುವ ಒಟ್ಟು 58.59 ಲಕ್ಷ ಪ್ರಕರಣಗಳ ಪೈಕಿ 42.64 ಲಕ್ಷ ಸಿವಿಲ್ ಕೇಸ್ ಆಗಿದ್ದರೆ, 15.94 ಲಕ್ಷ ಕ್ರಿಮಿನಲ್ ಪ್ರಕರಣಗಳಾಗಿವೆ. 20 ರಿಂದ 30 ವರ್ಷಗಳಷ್ಟು ಹಳೆಯದಾದ ಸುಮಾರು 2.45 ಲಕ್ಷ ಪ್ರಕರಣಗಳು ಹೈಕೋರ್ಟ್‌ಗಳಲ್ಲಿ ಬಾಕಿ ಉಳಿದಿವೆ ಎಂದು ರಾಷ್ಟ್ರೀಯ ನ್ಯಾಯಾಂಗ ದತ್ತಾಂಶ ಗ್ರಿಡ್ ತಿಳಿಸಿದೆ.