ನವದೆಹಲಿ:ರಾಜ್ಯಸಭೆಯಲ್ಲಿ ಗೃಹ ಸಚಿವ ಅಮಿತ್ ಶಾ ಅವರು ಅಂಬೇಡ್ಕರ್ ಅವರ ಬಗ್ಗೆ ನೀಡಿದ ಹೇಳಿಕೆಯು ಇಂದು ಸಂಸತ್ ಭವನದ ಮುಂದೆ ರಣಾಂಗಣ ಸೃಷ್ಟಿಸಿದೆ. ಕಾಂಗ್ರೆಸ್ ಮತ್ತು ಬಿಜೆಪಿ ಸಂಸದರ ಪ್ರತಿಭಟನೆಯಲ್ಲಿ ತಮ್ಮ ಜೊತೆ ಅನುಚಿತವಾಗಿ ವರ್ತಿಸಿ, ಹಲ್ಲೆ ನಡೆಸಲಾಗಿದೆ ಎಂದು ಮಹಿಳಾ ಸಂಸದೆಯರು ಆರೋಪಿಸಿದ್ದಾರೆ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ನಾಗಾಲ್ಯಾಂಡ್ನ ಬಿಜೆಪಿ ಸಂಸದೆ ಫಾಂಗ್ನಾನ್ ಕೊನ್ಯಾಕ್ ಅವರು ವಿಪಕ್ಷ ನಾಯಕ ರಾಹುಲ್ ಗಾಂಧಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. "ಕಾಂಗ್ರೆಸ್ ನಾಯಕ ನನ್ನೊಂದಿಗೆ ಅನುಚಿತವಾಗಿ ವರ್ತಿಸಿ ತಳ್ಳಿದರು. ಇದು ನನಗೆ ಮುಜುಗರ ತರಿಸಿತು" ಎಂದು ದೂರಿದ್ದಾರೆ.
"ಸಂಸತ್ ಭವನದ ಮಕರ ದ್ವಾರದ ಬಳಿ ನಿಂತಿದ್ದಾಗ ರಾಹುಲ್ ಗಾಂಧಿ ನನ್ನ ಹತ್ತಿರಕ್ಕೆ ಬಂದರು. ಏರುಧ್ವನಿಯಲ್ಲಿ ಕೂಗಾಡಿದರು. ದೈಹಿಕವಾಗಿ ತೀರಾ ಸಮೀಪಕ್ಕೆ ಬಂದರು. ಒಬ್ಬ ಮಹಿಳೆಯಾಗಿ ನಾನು ತೀವ್ರ ಮುಜುಗರ ಅನುಭವಿಸಿದೆ" ಎಂದು ಆರೋಪಿಸಿದ್ದಾರೆ.
"ದ್ವಾರದ ಬಳಿಯಿಂದ ನನ್ನನ್ನು ಬಲವಂತವಾಗಿ ತಳ್ಳಲಾಯಿತು. ಇದರಿಂದ ತೀವ್ರ ವ್ಯಥೆಯಿಂದ ನಾನು ಅಲ್ಲಿಂದ ಹೊರನಡೆದೆ. ಮಹಿಳಾ ಸಂಸದರ ಜೊತೆ ಯಾರೂ ಹೀಗೆ ನಡೆದುಕೊಳ್ಳಬಾರದು. ಇದು ಪ್ರಜಾಪ್ರಭುತ್ವದ ಅಣಕ" ಎಂದು ರಾಜ್ಯಸಭಾ ಸಭಾಧ್ಯಕ್ಷ ಜಗದೀಪ್ ಧನಕರ್ ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ಇದರ ವಿರುದ್ಧ ಪ್ರತಿಭಟನೆ ನಡೆಸಿದ ಬಿಜೆಪಿ, ತಮ್ಮ ಸಂಸದರ ಮೇಲೆ ವಿಪಕ್ಷಗಳ ಸಂಸದರು ಹಲ್ಲೆ ಮಾಡಿದ್ದಾರೆ. ಮಹಿಳಾ ಸಂಸದೆಯರ ಜೊತೆ ಅನುಚಿತವಾಗಿ ನಡೆದುಕೊಂಡಿದ್ದಾರೆ ಎಂದು ಆರೋಪಿಸಿ, ಅನುರಾಗ್ ಠಾಕೂರ್ ಮತ್ತು ಬಾನ್ಸುರಿ ಸ್ವರಾಜ್ ಅವರು ರಾಹುಲ್ ಗಾಂಧಿ ಸಂಸತ್ ಭವನ ರಸ್ತೆಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.