ಕರ್ನಾಟಕ

karnataka

ETV Bharat / bharat

ತೆಲಂಗಾಣ - ಛತ್ತೀಸಗಢ ಗಡಿಯಲ್ಲಿ ಗುಂಡಿನ ಚಕಮಕಿ, ಮತ್ತೆ ಮೂವರು ನಕ್ಸಲೀಯರ ಹತ್ಯೆ: ವಾರದಲ್ಲಿ 16ಕ್ಕೇರಿದ ಸಾವಿನ ಸಂಖ್ಯೆ - NAXAL ENCOUNTER - NAXAL ENCOUNTER

ಛತ್ತೀಸ್‌ಗಡ - ತೆಲಂಗಾಣ ಗಡಿಯಲ್ಲಿ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ನಲ್ಲಿ ಮೂವರು ನಕ್ಸಲರು ಹತರಾಗಿದ್ದಾರೆ. ದಾಂತೇವಾಡ ಸೇರಿ ವಾರದೊಳಗೆ ನಡೆದ ಮೂರನೇ ದಾಳಿ ಇದಾಗಿದ್ದು ಹತರಾದ ನಕ್ಸಲೀಯರ ಸಂಖ್ಯೆ ಇದೀಗ 16ಕ್ಕೆ ಏರಿಕೆಯಾಗಿದೆ.

ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

By ETV Bharat Karnataka Team

Published : Apr 6, 2024, 1:21 PM IST

Updated : Apr 6, 2024, 1:26 PM IST

ಬಸ್ತಾರ್:ಛತ್ತೀಸಗಢ ಮತ್ತು ತೆಲಂಗಾಣ ಗಡಿಗೆ ಹೊಂದಿಕೊಂಡಿರುವ ಅರಣ್ಯ ಪ್ರದೇಶದಲ್ಲಿ ಭದ್ರತಾ ಪಡೆಗಳು ಶನಿವಾರ ಬೆಳಗಿನ ಜಾವ ನಡೆಸಿದ ಗುಂಡಿನ ಚಕಮಕಿಯಲ್ಲಿ ಮತ್ತೆ ಮೂವರು ನಕ್ಸಲೀಯರು ಹತರಾಗಿರುವುದಾಗಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕಳೆದ ವಾರವಷ್ಟೇ ಛತ್ತೀಸಗಢದ ಬಿಜಾಪುರ ಅರಣ್ಯ ಪ್ರದೇಶದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಮಹಿಳೆ ಸೇರಿದಂತೆ 13 ನಕ್ಸಲರು ಹತ್ಯೆಗೀಡಾಗಿದ್ದರು. ದಾಂತೇವಾಡ ಸೇರಿದಂತೆ ವಾರದೊಳಗೆ ನಡೆದ ಮೂರನೇ ದಾಳಿ ಇದಾಗಿದ್ದು, ದಾಳಿ ವೇಳೆ ಮೃತಪಟ್ಟವರ ಸಂಖ್ಯೆ ಇದೀಗ 16ಕ್ಕೆ ಏರಿಕೆಯಾಗಿದೆ.

ಲೋಕಸಭಾ ಚುನಾವಣೆ ಹಿನ್ನೆಲೆ ಭದ್ರತಾ ಪಡೆಗಳು ಶನಿವಾರ ಬಂಡುಕೋರರ ವಿರುದ್ಧ ಮಹತ್ವದ ಕಾರ್ಯಾಚರಣೆ ನಡೆಸಿದ್ದವು. ಈ ವೇಳೆ, ಗುಂಡಿನ ಚಕಮಕಿ ನಡೆದಿದ್ದು, ಮೂವರು ನಕ್ಸಲೀಯರು ಹತ್ಯೆಗೀಡಾಗಿದ್ದಾರೆ. ಘಟನಾ ಸ್ಥಳದಿಂದ ನಕ್ಸಲೀಯರ ಮೃತದೇಹಗಳು ಮತ್ತು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ತೆಲಂಗಾಣ ಗ್ರೇಹೌಂಡ್ ಮತ್ತು ಛತ್ತೀಸ್‌ಗಢ ಪೊಲೀಸರು ಜಂಟಿಯಾಗಿ ನಡೆಸಿದ ನಕ್ಸಲ್ ವಿರೋಧಿ ಕಾರ್ಯಾಚರಣೆ ಇದಾಗಿದ್ದು, ಈ ಮಹತ್ವದ ಕಾರ್ಯಾಚರಣೆಯಲ್ಲಿ ಸೈನಿಕರು ಅತಿದೊಡ್ಡ ಯಶಸ್ಸನ್ನು ಸಾಧಿಸಿರುವುದಾಗಿ ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ

ಎನ್‌ಕೌಂಟರ್ ನಡೆದ ಸ್ಥಳ: ಉಸೂರು ಪೊಲೀಸ್ ಠಾಣೆ ವ್ಯಾಪ್ತಿಯ ಕಂಕೇರ್‌ನ ಕರ್ರಿಗುಟಾ ಅರಣ್ಯದಲ್ಲಿ ಛತ್ತೀಸ್‌ಗಢ ಪೊಲೀಸರ ನೆರವಿನೊಂದಿಗೆ ತೆಲಂಗಾಣದ ನಕ್ಸಲ್ ವಿರೋಧಿ ಪಡೆ ಗ್ರೇಹೌಂಡ್ಸ್ ತಂಡದ ನೇತೃತ್ವದಲ್ಲಿ ಈ ನಕ್ಸಲ್ ವಿರೋಧಿ ಕಾರ್ಯಾಚರಣೆ ನಡೆಸಲಾಯಿತು. ಈ ಎನ್‌ಕೌಂಟರ್‌ನಲ್ಲಿ ಮೂವರು ನಕ್ಸಲೀಯರು ಹತರಾಗಿದ್ದಾರೆ. ಈ ವೇಳೆ, ಒಂದು ಲಘು ಮೆಷಿನ್ ಗನ್ (LMG) ಮತ್ತು ಒಂದು AK 47 ಸೇರಿದಂತೆ ಹಲವು ಶಸ್ತ್ರಾಸ್ತ್ರಗಳು ಮತ್ತು ನಕ್ಸಲೀಯರ ಮೃತದೇಹಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಶುಕ್ರವಾರ ಛತ್ತೀಸ್‌ಗಢದ ದಾಂತೇವಾಡದಲ್ಲಿ ಭದ್ರತಾ ಪಡೆಗಳ ನಡುವಿನ ಎನ್‌ಕೌಂಟರ್‌ನಲ್ಲಿ ಒಬ್ಬ ಹತನಾಗಿದ್ದ. ಜಿಲ್ಲಾ ರಿಸರ್ವ್ ಗಾರ್ಡ್ (ಡಿಆರ್‌ಜಿ), ಬಸ್ತಾರ್ ಫೈಟರ್ಸ್ ಮತ್ತು ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್ (ಸಿಆರ್‌ಪಿಎಫ್) ಸಿಬ್ಬಂದಿ ನಡೆಸಿದ ಕಾರ್ಯಾಚರಣೆಯಲ್ಲಿ ಓರ್ವ ನಕ್ಸಲ್​ ಹತನಾಗಿದ್ದ. ಕಿರಂಡುಲ್ ಪೊಲೀಸ್ ಠಾಣೆ ವ್ಯಾಪ್ತಿಯ ಅರಣ್ಯದಲ್ಲಿ ಈ ಎನ್‌ಕೌಂಟರ್ ನಡೆದಿರುವುದಾಗಿ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದರು. ಪುರಂಗೆಲ್, ಬಡೇಪಲ್ಲಿ, ದೊಡಿತುಮ್ನಾರ್ ಮತ್ತು ಗಾಂಪುರ್ ಪ್ರದೇಶಗಳಲ್ಲಿ ನಕ್ಸಲೀಯರ ಉಪಟಳ ಇರುವ ಬಗ್ಗೆ ಮಾಹಿತಿ ಬಂದಿತು. ಈ ಮಾಹಿತಿ ಆಧರಿಸಿ ನಡೆಸಿದ ಕಾರ್ಯಾಚರಣೆಯಲ್ಲಿ ಪುರುಷ ನಕ್ಸಲೀಯನ ದೇಹ ಮತ್ತು ಶಸ್ತ್ರಾಸ್ತ್ರ ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದರು.

ಬಿಜಾಪುರದಲ್ಲಿ 13 ನಕ್ಸಲೀಯರು ಹತ್ಯೆ: ಏಪ್ರಿಲ್ 2 ರಂದು ಛತ್ತೀಸ್‌ಗಢದ ಬಿಜಾಪುರದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಒಟ್ಟು 13 ನಕ್ಸಲೀಯರು ಹತ್ಯೆಗೀಡಾಗಿದ್ದರು. ದಟ್ಟ ಅರಣ್ಯದಲ್ಲಿ ಹಾರ್ಡ್‌ಕೋರ್ ನಕ್ಸಲೀಯರು ಅಡಗಿಕೊಂಡಿದ್ದಾರೆ ಎಂಬ ಮಾಹಿತಿ ಪಡೆದ ಭದ್ರತಾ ಪಡೆಗಳು, ಮುತ್ತಿಗೆ ಹಾಕಿ 13 ನಕ್ಸಲೀಯರನ್ನು ಹತ್ಯೆ ಮಾಡಿದ್ದವು. ಎನ್‌ಕೌಂಟರ್‌ ನಡೆದ ಸ್ಥಳದಲ್ಲಿ ನಕ್ಸಲರ ಮೃತದೇಹಗಳು ಪತ್ತೆಯಾಗಿದ್ದವು. ಈ ವೇಳೆ ಲಘು ಮಷಿನ್‌ ಗನ್‌, ಗ್ರೆನೇಡ್‌ ಲಾಂಚರ್‌ಗಳು ಹಾಗೂ ಇತರ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಜಿಲ್ಲಾ ರಿಸರ್ವ್ ಗಾರ್ಡ್ (ಡಿಆರ್‌ಜಿ) ಮತ್ತು ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಜಂಟಿಯಾಗಿ ಈ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು. ಭದ್ರತಾ ಸಿಬ್ಬಂದಿ ಮೇಲೆ ನಕ್ಸಲರು ಗುಂಡಿನ ದಾಳಿ ನಡೆಸಿದ್ದು, ಪೊಲೀಸರು ನಡೆಸಿದ ಪ್ರತೀಕಾರದ ಗುಂಡಿನ ದಾಳಿಯಲ್ಲಿ 13 ನಕ್ಸಲೀಯರು ಹತ್ಯೆಗೀಡಾಗಿರುವುದಾಗಿ ಬಸ್ತಾರ್ ರೇಂಜ್ ಐಜಿ ಸುಂದರರಾಜ್ ಮಾಹಿತಿ ನೀಡಿದ್ದರು. ಇತ್ತೀಚೆಗಿನ ವರ್ಷಗಳಲ್ಲಿ ನಡೆದ ಅತಿದೊಡ್ಡ ನಕ್ಸಲ್‌ ನಿಗ್ರಹ ಕಾರ್ಯಾಚರಣೆ ಇದಾಗಿದೆ ಎಂದು ಸಹ ಅವರು ತಿಳಿಸಿದ್ದರು. ಬಸ್ತಾರ್ ವಿಭಾಗದ ವಿವಿಧ ನಕ್ಸಲ್ ಪೀಡಿತ ಜಿಲ್ಲೆಗಳಲ್ಲಿ ಇದುವರೆಗೆ ನಡೆದ ಎನ್‌ಕೌಂಟರ್‌ಗಳಲ್ಲಿ ಹತರಾದ ನಕ್ಸಲೀಯರ ಸಂಖ್ಯೆ 47ಕ್ಕೆ ತಲುಪಿರುವುದಾಗಿ ಇದೇ ವೇಳೆ ಮಾಹಿತಿ ಒದಗಿಸಿದ್ದರು. ಏಕಕಾಲದಲ್ಲಿ ನಕ್ಸಲರ ಹತ್ಯೆಯು ಇತ್ತೀಚಿನ ಕಾರ್ಯಾಚರಣೆಯಲ್ಲಿ ಪ್ರಮುಖ ಬೆಳವಣಿಗೆ ಎನಿಸಿದೆ.

ಶರಣಾದ ನಕ್ಸಲೀಯರು: ಛತ್ತೀಸ್‌ಗಢದಲ್ಲಿ ನಕ್ಸಲ್ ಮುಂಚೂಣಿಯಲ್ಲಿ ಭದ್ರತಾ ಪಡೆಗಳು ನಿರಂತರ ಯಶಸ್ಸು ಸಾಧಿಸುತ್ತಿವೆ. ಒಂದೆಡೆ ಎನ್‌ಕೌಂಟರ್‌ಗಳಲ್ಲಿ ನಕ್ಸಲೀಯರು ನಾಶವಾಗುತ್ತಿದ್ದರೆ, ಇನ್ನೊಂದೆಡೆ ಸರ್ಕಾರದ ನಕ್ಸಲ್ ನಿರ್ಮೂಲನಾ ಅಭಿಯಾನವಾದ ಪುಣೆ ನಾರ್ಕಾಮ್‌ನಿಂದ ಪ್ರಭಾವಿತರಾಗಿ ಹೆಚ್ಚಿನ ಬಹುಮಾನ ಹೊಂದಿರುವ ನಕ್ಸಲೀಯರು ತಾವೇ ಶರಣಾಗುತ್ತಿದ್ದಾರೆ. ಶುಕ್ರವಾರ, ಬಿಜಾಪುರದಲ್ಲಿ 16 ಲಕ್ಷ ರೂಪಾಯಿ ಬಹುಮಾನವನ್ನು ಹೊತ್ತ ಇಬ್ಬರು ನಕ್ಸಲೀಯರು ಪೊಲೀಸರ ಮುಂದೆ ಶರಣಾಗಿದ್ದಾರೆ. ಶರಣಾದ ನಕ್ಸಲೀಯರಲ್ಲಿ ಪುರುಷ ಕಲ್ಮು ಪ್ರಕಾಶ್ ಅಲಿಯಾಸ್ ಸನ್ನು ಮತ್ತು ಮಹಿಳಾ ನಕ್ಸಲೈಟ್ ಪೆಡ್ಕಮ್ ರೀಟಾ ಎಂದು ಗುರಿತಿಸಲಾಗಿದೆ. ಇಬ್ಬರೂ 2007 ರಿಂದ ನಕ್ಸಲೀಯ ಸಂಘಟನೆಗಳಿಗಾಗಿ ಕೆಲಸ ಮಾಡುತ್ತಿದ್ದರು.

ಇದನ್ನೂ ಓದಿ:ಛತ್ತೀಸ್​ಗಢ: ಮೂರು ದಿನದ ಕಾರ್ಯಾಚರಣೆಯಲ್ಲಿ 13 ಮಂದಿ ನಕ್ಸಲರು ಹತ - NAXAL ENCOUNTER

Last Updated : Apr 6, 2024, 1:26 PM IST

ABOUT THE AUTHOR

...view details