ಕರ್ನಾಟಕ

karnataka

ETV Bharat / bharat

ಛತ್ತೀಸ್‌ಗಢದಲ್ಲಿ ನಕ್ಸಲೀಯರಿಂದ ಬಿಜೆಪಿ ಕಾರ್ಯಕರ್ತನ ಹತ್ಯೆ: ವಾರದಲ್ಲಿ 5ನೇ ಘಟನೆ - NAXALITES

ಛತ್ತೀಸ್​ಗಢದಲ್ಲಿ ನಕ್ಸಲೀಯರ ಹಾವಳಿ ಹೆಚ್ಚಾಗುತ್ತಿದೆ. ಒಂದೇ ವಾರದಲ್ಲಿ 5 ಮಂದಿಯನ್ನು ಹತ್ಯೆ ಮಾಡಲಾಗಿದೆ. ಅದರಲ್ಲಿ ಇಬ್ಬರು ಬಿಜೆಪಿ ಕಾರ್ಯಕರ್ತರಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಛತ್ತೀಸ್‌ಗಢದಲ್ಲಿ ನಕ್ಸಲೀಯರಿಂದ ಬಿಜೆಪಿ ಕಾರ್ಯಕರ್ತನ ಹತ್ಯೆ
ಸಂಗ್ರಹ ಚಿತ್ರ (ETV Bharat)

By PTI

Published : Dec 11, 2024, 5:44 PM IST

ಬಿಜಾಪುರ(ಛತ್ತೀಸ್​ಗಢ):ಪೊಲೀಸರಿಗೆ ತಮ್ಮ ಜಾಡಿನ ಸುಳಿವು ನೀಡುತ್ತಿರುವ ಶಂಕೆಯ ಮೇಲೆ ನಕ್ಸಲೀಯರು ಬಿಜೆಪಿ ಕಾರ್ಯಕರ್ತನನ್ನು ಹತ್ಯೆಗೈದ ಘಟನೆ ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯಲ್ಲಿ ಮಂಗಳವಾರ ರಾತ್ರಿ ನಡೆದಿದೆ. ಕಳೆದ ಒಂದು ವಾರದಲ್ಲಿ ಇದು ಐದನೇ ನಾಗರಿಕ ಹತ್ಯೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೊಲೆಯಾದ ವ್ಯಕ್ತಿಯನ್ನು 35 ವರ್ಷದ ಕುಡಿಯಮ್ ಎಂದು ಗುರುತಿಸಲಾಗಿದೆ. ಫರ್ಸೆಗಢ್ ಪೊಲೀಸ್ ಠಾಣಾ ವ್ಯಾಪ್ತಿಯ ಸೋಮನ್‌ಪಲ್ಲಿ ಗ್ರಾಮದ ನಿವಾಸಿಯಾಗಿದ್ದ ಇವರು ಬಿಜೆಪಿಯ ಸಕ್ರಿಯ ಕಾರ್ಯಕರ್ತ ಹಾಗು ಪೊಲೀಸರಿಗೆ ಮಾಹಿತಿದಾರರಾಗಿದ್ದರು ಎಂದು ಸ್ಥಳೀಯರು ಹೇಳಿದ್ದಾರೆ.

ಮಂಗಳವಾರ ರಾತ್ರಿ ಕುಡಿಯಮ್ ಮನೆಯ ಮೇಲೆ ದಾಳಿ ಮಾಡಿದ ನಕ್ಸಲೀಯರು, ಆತನನ್ನು ಹೊರಗೆ ಎಳೆದುಕೊಂಡು ಬಂದು ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ. ಸ್ಥಳದಲ್ಲಿ ಸಿಕ್ಕ ಕರಪತ್ರದ ಪ್ರಕಾರ, ಮಾವೋವಾದಿಗಳ ನ್ಯಾಷನಲ್​ ಪಾರ್ಕ್​ ಏರಿಯಾ ಕಮಿಟಿ ಹತ್ಯೆ ಮಾಡಿದ್ದಾಗಿ ತಿಳಿದು ಬಂದಿದೆ. ಕುಡಿಯಮ್​ ಪೊಲೀಸ್ ಮಾಹಿತಿದಾರ ಎಂಬ ಶಂಕೆಯ ಮೇಲೆ ಹತ್ಯೆ ಮಾಡಿದ್ದಾಗಿ ಅದರಲ್ಲಿ ಉಲ್ಲೇಖಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಘಟನೆಯ ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಧಾವಿಸಿ, ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ದಾಳಿಕೋರರ ಪತ್ತೆ ಹಚ್ಚಲು ಸುತ್ತಲಿನ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ಪ್ರಾರಂಭಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

7 ದಿನದಲ್ಲಿ 5 ಕೊಲೆ:ಕಳೆದ ಏಳು ದಿನಗಳಲ್ಲಿ ಇದು ಐದನೇ ಕೊಲೆಯಾಗಿದೆ. ಅದರಲ್ಲಿ ಇಬ್ಬರು ಬಿಜೆಪಿ ಕಾರ್ಯಕರ್ತರಿದ್ದಾರೆ. ಡಿಸೆಂಬರ್ 4ರಂದು ಬಿಜಾಪುರ ಜಿಲ್ಲೆಯ ಪ್ರತ್ಯೇಕ ಸ್ಥಳಗಳಲ್ಲಿ ಇಬ್ಬರು ಮಾಜಿ ಸರಪಂಚ್‌ಗಳನ್ನು ಹತ್ಯೆ ಮಾಡಲಾಗಿತ್ತು. ಅದರಲ್ಲಿ ಒಬ್ಬರು ಬಿಜೆಪಿ ಕಾರ್ಯಕರ್ತ ಎಂದು ಅಧಿಕಾರಿಗಳು ಹೇಳಿದ್ದಾರೆ.

ಡಿಸೆಂಬರ್ 6ರಂದು ಮಹಿಳಾ ಅಂಗನವಾಡಿ ಸಹಾಯಕಿ, ಡಿಸೆಂಬರ್ 7ರಂದು ಮತ್ತೊಬ್ಬ ಮಹಿಳೆಯನ್ನು ಕತ್ತು ಹಿಸುಕಿ ಸಾಯಿಸಲಾಗಿದೆ. ಇಂದಿನ ಘಟನೆ ಸೇರಿದಂತೆ ಬಸ್ತಾರ್ ವಿಭಾಗದಲ್ಲಿ ಈ ವರ್ಷ ನಕ್ಸಲ್ ಹಿಂಸಾಚಾರದಲ್ಲಿ 60ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ವಿಶೇಷವಾಗಿ ಇದರಲ್ಲಿ 9 ಮಂದಿ ಬಿಜೆಪಿಗರು ಇದ್ದಾರೆ ಎಂದು ಪೊಲೀಸರು ಮಾಹಿತಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ:ಛತ್ತೀಸ್​ಗಢ: ಓರ್ವ ನಕ್ಸಲ್​ ಹತ್ಯೆ; ಐಇಡಿ ಸ್ಪೋಟದಿಂದ ಇಬ್ಬರು ಯೋಧರಿಗೆ ಗಾಯ

ABOUT THE AUTHOR

...view details