ಶ್ರೀನಗರ(ಜಮ್ಮು ಮತ್ತು ಕಾಶ್ಮೀರ):ಪಾಕಿಸ್ತಾನವು ಭಾರತದೊಂದಿಗೆ ಶಾಂತಿ ಮಾತುಕತೆ ಬಯಸುತ್ತಿದೆ. ಕಾಶ್ಮೀರದಲ್ಲಿ ನಡೆಯುತ್ತಿರುವ ವಿಧ್ವಂಸಕ ಕೃತ್ಯಗಳನ್ನು ನಿಲ್ಲಿಸಲು ಭಾರತ ಮಾತುಕತೆಗೆ ಅವಕಾಶ ನೀಡಬೇಕು ಎಂದು ಜಮ್ಮು ಮತ್ತು ಕಾಶ್ಮೀರದ ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಮುಖ್ಯಸ್ಥ, ಮಾಜಿ ಸಿಎಂ ಫಾರೂಕ್ ಅಬ್ದುಲ್ಲಾ ಹೇಳಿದ್ದಾರೆ.
ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿರುವ ಅವರು, ದೇಶದಲ್ಲಿ ಶಾಂತಿ ವಾತಾವರಣ ಕಾಪಾಡಲು ಪಾಕಿಸ್ತಾನದ ಜೊತೆಗೆ ಮಾತುಕತೆ ಆರಂಭಿಸಬೇಕು. ಆ ದೇಶಕ್ಕೆ ಅವಕಾಶ ನೀಡಬೇಕು. ಅವರು ನಮ್ಮೊಂದಿಗೆ ಶಾಂತಿ ಬಯಸುತ್ತಿದ್ದಾರೆ. ನಾವು ಅವರಿಗೆ ಬಾಗಿಲು ತೆರೆಯಬೇಕು. ಇದರ ಜೊತೆಗೆ, ದಕ್ಷಿಣ ಏಷ್ಯಾದ ಪ್ರಾದೇಶಿಕ ಸಹಕಾರ ಒಕ್ಕೂಟ(ಸಾರ್ಕ್) ಅನ್ನು ಮತ್ತೆ ಪುನಾರಂಭಿಸಬೇಕು ಎಂದು ಒತ್ತಾಯಿಸಿದರು.
ನೆರೆಹೊರೆ ರಾಷ್ಟ್ರಗಳೊಂದಿಗೆ ಸಮಸ್ಯೆಗಳು ತೀರಿಲ್ಲ. ಎಲ್ಲವನ್ನೂ ಸೇನಾ ಕಾರ್ಯಾಚರಣೆಯಿಂದ ಮಾತ್ರವೇ ಪರಿಹರಿಸಲಾಗುವುದಿಲ್ಲ. ಪಕ್ಕದ ರಾಷ್ಟ್ರಗಳ ಜೊತೆಗೆ ಮಾತುಕತೆ ನಡೆಸದ ಹೊರತು ಸಮಸ್ಯೆಗಳಿಗೆ ಪರಿಹಾರ ಸಿಗುವುದಿಲ್ಲ. ಭಯೋತ್ಪಾದಕರು ಪಾಕಿಸ್ತಾನದ ಗಡಿಯ ಮೂಲಕ ನುಸುಳುತ್ತಿದ್ದಾರೆ. ಮುಂದೆ ಅಮರನಾಥ ಯಾತ್ರೆ ಆರಂಭವಾಗಲಿದೆ. ಪವಿತ್ರ ಯಾತ್ರೆಗೆ ಉಗ್ರ ಬೆದರಿಕೆ ಇರಬಾರದು ಎಂದರೆ, ಪಾಕಿಸ್ತಾನದ ಜೊತೆಗೆ ಮಾತುಕತೆ ನಡೆಸಬೇಕು ಎಂದು ತಿಳಿಸಿದ್ದಾರೆ.
ಉಕ್ರೇನ್ ಮತ್ತು ರಷ್ಯಾ, ಹಮಾಸ್ ಮತ್ತು ಇಸ್ರೇಲ್ ನಡುವಿನ ಯುದ್ಧವನ್ನು ಉದಾಹರಣೆಯಾಗಿ ನೀಡಿದ ಫಾರೂಖ್, ನನ್ನ ಪ್ರಕಾರ ಪಾಕಿಸ್ತಾನ ನಮ್ಮೊಂದಿಗೆ ಮಾತುಕತೆ ನಡೆಸಲು ಉತ್ಸುಕವಾಗಿದೆ ಎಂದೆನಿಸುತ್ತದೆ. ಭಾರತ ಇದಕ್ಕೆ ಅವಕಾಶ ನೀಡಬೇಕು. ಭಯೋತ್ಪಾದನೆಯನ್ನು ಕಟ್ಟಿಹಾಕಲು ನೆರೆರಾಷ್ಟ್ರಗಳ ಜೊತೆಗೆ ಬಾಂಧವ್ಯ ಹೊಂದಬೇಕಿದೆ ಎಂದರು.