ಹೈದರಾಬಾದ್: ವಯೋ ಸಹಜ ಆರೋಗ್ಯ ಸಮಸ್ಯೆಯಿಂದ ರಾಮೋಜಿ ರಾವ್ ಸಮೂಹ ಸಂಸ್ಥೆಯ ಅಧ್ಯಕ್ಷರಾಗಿರುವ ರಾಮೋಜಿ ರಾವ್ ಇಹಲೋಕ ತ್ಯಜಿಸಿದ್ದಾರೆ. ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.
ಭಾರತೀಯ ಮಾಧ್ಯಮದಲ್ಲಿ ಕ್ರಾಂತಿ ಮಾಡಿದ ರಾಮೋಜಿರಾವ್ ಅವರ ನಿಧನ ತೀವ್ರ ದುಃಖ ತಂದಿದೆ. ಪತ್ರಿಕೋದ್ಯಮ ಮತ್ತು ಚಿತ್ರರಂಗದಲ್ಲಿ ಅಚ್ಚಳಿಯದ ಛಾಪನ್ನು ಮೂಡಿಸಿದ್ದಾರೆ. ಅವರ ಅವಿರತ ಪ್ರಯತ್ನಗಳ ಫಲವಾಗಿ ಮಾಧ್ಯಮ ಮತ್ತು ಮನೋರಂಜನಾ ಜಗತ್ತಿನಲ್ಲಿ ಹೊಸ ನಾವೀನ್ಯತೆಯನ್ನು ಸೃಷ್ಟಿಸಿದ್ದಾರೆ ಎಂದು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಸಂತಾಪ ವ್ಯಕ್ತಪಡಿಸಿದ ಚಂದ್ರಬಾಬು ನಾಯ್ಡು: ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲು ಸಜ್ಜಾಗಿರುವ ತೆಲುಗು ದೇಶಂ ಪಕ್ಷದ ಅಧ್ಯಕ್ಷ ಎನ್ ಚಂದ್ರಬಾಬು ನಾಯ್ಡು ಕೂಡ ಅವರ ನಿಧನಕ್ಕೆ ಆಘಾತ ವ್ಯಕ್ತಪಡಿಸಿದ್ದು, ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಸಾಮಾನ್ಯ ಕುಟುಂಬದಲ್ಲಿ ಜನಿಸಿದ ಅವರು ಅದ್ಬುತ ಸಾಧನೆಗಳನ್ನು ಮಾಡಿದ್ದಾರೆ. ಎರಡು ತೆಲುಗು ರಾಜ್ಯಗಳು ಸೇರಿದಂತೆ ದೇಶಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ. ರಾಮೋಜಿ ರಾವ್ ಅವರ ಸಾವು ಕೇವಲ ತೆಲುಗು ಜನರಿಗೆ ಆದ ನಷ್ಟವಲ್ಲ, ಇಡೀ ದೇಶಕ್ಕಾದ ನಷ್ಟ. ಇದೇ ವೇಳೆ, ಅವರ ಜೊತೆಗಿನ ಒಡನಾಟವನ್ನು ಸ್ಮರಿಸಿರುವ ಅವರು, ಸತ್ಯ ಮತ್ತು ತಮ್ಮ ಮೌಲ್ಯಗಳಿಗಾಗಿ ಧೈರ್ಯದಿಂದ ಹೋರಾಡಿದ ಛಲಗಾರ ಎಂದು ಬಣ್ಣಿಸಿದ್ದಾರೆ.
ತೆಲುಗು ನಟ - ನಟಿಯರಿಂದ ಸಂತಾಪ:ಪ್ರಧಾನಿ ಹೊರತಾಗಿ ಅನೇಕ ತೆಲುಗು ಅಭಿಮಾನಿಗಳು, ಸೆಲೆಬ್ರಿಟಿಗಳು ಸಂತಾಪ ಸೂಚಿಸಿದ್ದಾರೆ. ನಟ ಚಿರಂಜೀವಿ ಕೂಡ ಅವರ ಆತ್ಮಕ್ಕೆ ಚಿರಶಾಂತಿ ಕೋರಿ ಎಕ್ಸ್ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
ರಾಮೋಜಿ ರಾವ್ ನಿರ್ಮಾಣದಲ್ಲಿ ನಿನ್ನು ಚೂಡಾಲನಿ ಚಿತ್ರದ ಮೂಲಕ ಸಿನಿ ಪಯಣ ಆರಂಭಿಸಿದ ನಟ ಜೂ ಎನ್ಟಿಆರ್ ಕೂಡ ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ. ಬಹು ಭಾಷಾ ನಟಿ ಖುಷ್ಬೂ ಕೂಡ ಸಂತಾಪ ಸೂಚಿಸಿದ್ದು, ಅವರ ಮರಣ ಶಾಕಿಂಗ್ ಸುದ್ದಿಯಾಗಿದ್ದು, ಉದ್ಯಮಕ್ಕೆ ದೊಡ್ಡ ನಷ್ಟವಾಗಿದೆ ಎಂದಿದ್ದಾರೆ.
ಇದನ್ನೂ ಓದಿ:ರಾಮೋಜಿ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ರಾಮೋಜಿ ರಾವ್ ನಿಧನ