ನಾಗ್ಪುರ:ಮಹಾರಾಷ್ಟ್ರಬಿಜೆಪಿ ಅಧ್ಯಕ್ಷ ಚಂದ್ರಶೇಖರ್ ಬವಾಂಕುಲೆ ಅವರ ಮಗನಿಗೆ ಸೇರಿದ್ದ ಐಷಾರಾಮಿ ಔಡಿ ಕಾರು ಅಪಘಾತ ಪ್ರಕರಣದಲ್ಲಿ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ. ಅಪಘಾತ ಸಂದರ್ಭದಲ್ಲಿ ಬಿಜೆಪಿ ಮುಖ್ಯಸ್ಥರ ಮಗ ಸಂಕೇತ್ ಕಾರು ಚಲಾಯಿಸುತ್ತಿರಲಿಲ್ಲ. ಚಾಲಕ ಅರ್ಜುನ್ ಹವಾರೆ ಚಾಲನೆ ಮಾಡುತ್ತಿದ್ದರು. ಈ ಹಿನ್ನೆಲೆಯಲ್ಲಿ ಆತನನ್ನು ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಸೋಮವಾರ ರಾಮದಾಸ್ಪೇಟ್ ಪ್ರದೇಶದಲ್ಲಿ ಬವಾಂಕುಲೆ ಅವರ ಪುತ್ರ ಸಂಕೇತ್ ಒಡೆತನದ ಔಡಿ ಕಾರು ಹಲವಾರು ವಾಹನಗಳಿಗೆ ಡಿಕ್ಕಿ ಹೊಡೆದಿತ್ತು. ಬಳಿಕ ಪೊಲೀಸರು ಹಾವರೆ ಮತ್ತು ರೋನಿತ್ ಚಿತ್ತಮ್ವಾರ್ ಎಂಬಿಬ್ಬರನ್ನು ಬಂಧಿಸಿದ್ದಾರೆ.
ಆರಂಭದಲ್ಲಿ ಔಡಿ ಕಾರು ದೂರುದಾರ ಜೀತೆಂದ್ರ ಸೊಂಕಬ್ಳೆ ಅವರ ಕಾರಿಗೆ ಡಿಕ್ಕಿ ಹೊಡೆದಿದೆ. ಬಳಿಕ ದ್ವಿಚಕ್ರ ವಾಹನಕ್ಕೆ ಗುದ್ದಿ, ಇಬ್ಬರು ಗಾಯಗೊಂಡಿದ್ದರು. ಇದಾದ ನಂತರ ಮಂಕಪುರ್ ಪ್ರದೇಶದಲ್ಲಿ ಮತ್ತೊಂದಿಷ್ಟು ಕಾರುಗಳಿಗೆ ಡಿಕ್ಕಿ ಹೊಡೆದಿತ್ತು. ಟೀ ಪಾಯಿಂಟ್ನಲ್ಲಿ ಪೊಲೊ ಕಾರಿಗೂ ಡಿಕ್ಕಿಯಾಗಿತ್ತು. ಮಂಕಪುರ್ ಸೇತುವೆಯ ಬಳಿ ಪೊಲೀಸರು ಕಾರು ಪತ್ತೆ ಹಚ್ಚಿದ್ದರು. ಈ ವೇಳೆ ಅರ್ಜುನ್ ಹವಾರೆ, ರೋನಿತ್ ಚಿತ್ತಮ್ವಾರ್ ಇದ್ದರು. ಇಬ್ಬರನ್ನೂ ತೆಹ್ಸಿಲ್ ಪೊಲೀಸ್ ಠಾಣೆಗೆ ಕರೆತಂದು ಸಿತಬುಲ್ದಿ ಪೊಲೀಸ್ ಠಾಣೆಗೆ ಒಪ್ಪಿಸಲಾಗಿತ್ತು.
ಔಡಿ ಕಾರಿನಲ್ಲಿದ್ದ ಇಬ್ಬರು ಘಟನೆ ನಡೆಯುವ ಮುನ್ನ ಧರಂಪೀತ್ನ ಬಾರ್ನಿಂದ ಬಂದಿದ್ದು, ಆಲ್ಕೋಹಾಲ್ ಪತ್ತೆ ಪರೀಕ್ಷೆಗಾಗಿ ಅವರ ರಕ್ತದ ಮಾದರಿಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ.