ನವದೆಹಲಿ:ಪೌರತ್ವ ತಿದ್ದುಪಡಿ ಕಾಯ್ದೆಯಿಂದ ಮುಸ್ಲಿಮರಿಗೆ ಯಾವುದೇ ಸಮಸ್ಯೆ ಇಲ್ಲ ಎಂದು ಕೆಲ ಇಸ್ಲಾಮಿಕ್ ಸಂಘಟನೆಗಳ ಸ್ಪಷ್ಟನೆಯ ಹೊರತಾಗಿಯೂ ಅಖಲಿ ಭಾರತ ಮುಸ್ಲಿಂ ಲೀಗ್ (ಐಯುಎಂಎಲ್) ಸಿಎಎ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ.
ಕೇಂದ್ರ ಸರ್ಕಾರ ಪೌರತ್ವ ನಿಯಮಗಳನ್ನು ಜಾರಿ ಮಾಡಿದ ಮರುದಿನವಾದ ಮಂಗಳವಾರ ದೇಶದಲ್ಲಿ ಸಿಎಎ ಅನುಷ್ಠಾನವನ್ನು ತಡೆಯಬೇಕು ಎಂದು ಕೋರಿ ಉನ್ನತ ನ್ಯಾಯಾಲಯಕ್ಕೆ ತುರ್ತು ಅರ್ಜಿ ಸಲ್ಲಿಸಿದೆ. ತಿದ್ದುಪಡಿ ಕಾನೂನಿನಲ್ಲಿ ಮುಸ್ಲಿಮರ ವಿರುದ್ಧವಾದ ಅಂಶಗಳಿವೆ. ಇದು ಅಸಂವಿಧಾನಿಕ ಮತ್ತು ತಾರತಮ್ಯ ಧೋರಣೆ ಹೊಂದಿದೆ ಎಂದು ಆರೋಪಿಸಿದೆ.
ಹಿಂದಿನ ಪ್ರತಿಭಟನೆಗಳು:2019ರ ಡಿಸೆಂಬರ್ 11 ರಂದು ಸಂಸತ್ತಿನಲ್ಲಿ ಅಂಗೀಕರಿಸಲ್ಪಟ್ಟ ಸಿಎಎ ವಿರುದ್ಧ ಭಾರತದಾದ್ಯಂತ ವ್ಯಾಪಕ ಪ್ರತಿಭಟನೆಗಳು ನಡೆದವು. ದೆಹಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾ ಮತ್ತು ಶಾಹೀನ್ ಬಾಗ್‌ನಲ್ಲಿ ಇದರ ತೀವ್ರತೆ ಹೆಚ್ಚಾಗಿತ್ತು. ಪ್ರತಿಭಟನೆಗಳ ಜೊತೆಗೆ ಕೋಮು ಉದ್ವಿಗ್ನತೆಗೆ ಹೋರಾಟ ಕಾರಣವಾಯಿತು. 2020 ರ ಆರಂಭದಲ್ಲಿ ಈಶಾನ್ಯ ದೆಹಲಿಯಲ್ಲಿ ಹಿಂಸಾತ್ಮಕ ಗಲಭೆಗಳು ಸಂಭವಿಸಿದವು. ಗಲಭೆಯಲ್ಲಿ ಹಲವರು ಪ್ರಾಣ ಕಳೆದುಕೊಂಡರೆ, ನೂರಾರು ಮಂದಿ ಗಾಯಗೊಂಡರು. ಇದರಿಂದ ಕೇಂದ್ರ ಸರ್ಕಾರ ತಾತ್ಕಾಲಿಕವಾಗಿ ಕಾನೂನನ್ನು ಹಿಂತೆಗೆದುಕೊಂಡು ನಿಯಮಾವಳಿಗಳನ್ನು ತಿದ್ದುಪಡಿ ಮಾಡಲು ಒಪ್ಪಿಕೊಂಡಿತ್ತು.
ಇದೀಗ, ವಿರೋಧ ಮತ್ತು ಪ್ರತಿಭಟನೆಗಳ ನಡುವೆಯೂ ಕೇಂದ್ರ ಸರ್ಕಾರ ಸೋಮವಾರ ಸಿಎಎ ಕಾನೂನನ್ನು ಅನುಷ್ಠಾನಕ್ಕೆ ತಂದಿದೆ. ಗೆಜೆಟ್ ಅಧಿಸೂಚನೆಯ ಹೊರಡಿಸಿದ್ದು, ನಿಯಮಗಳು ತಕ್ಷಣದಿಂದಲೇ ಜಾರಿಗೆ ಬರುತ್ತವೆ ಎಂದು ಸೂಚಿಸಿದೆ.