ಲಖನೌ (ಉತ್ತರ ಪ್ರದೇಶ): ಮುಖ್ತಾರ್ ಅನ್ಸಾರಿ.. ಉತ್ತರ ಪ್ರದೇಶದ ರಾಜಕೀಯ ಹಾಗೂ ಅಪರಾಧ ಜಗತ್ತು ಎರಡರಲ್ಲೂ ಹೆಸರು ಮಾಡಿದ ವ್ಯಕ್ತಿ. ಗ್ಯಾಂಗಸ್ಟರ್ ಆಗಿದ್ದುಕೊಂಡು ನಂತರ ರಾಜಕೀಯಕ್ಕಿಳಿದ ಅನ್ಸಾರಿ ವಿರುದ್ಧ ಕೊಲೆಯಿಂದ ಹಿಡಿದು ಅಪಹರಣ ಕೃತ್ಯಗಳವರೆಗೆ 65 ವಿವಿಧ ಅಪರಾಧ ಪ್ರಕರಣಗಳು ದಾಖಲಾಗಿವೆ. ವಿವಿಧ ರಾಜಕೀಯ ಟಿಕೆಟ್ ಮೇಲೆ 5 ಬಾರಿ ಶಾಸಕರಾಗಿದ್ದರು ಈ ಅನ್ಸಾರಿ. 63 ವರ್ಷದ ಅನ್ಸಾರಿ ಗುರುವಾರ ಬಂಡಾದ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ.
1963 ರಲ್ಲಿ ಪ್ರಭಾವಿ ಕುಟುಂಬದಲ್ಲಿ ಜನಿಸಿದ ಅನ್ಸಾರಿ, ಆಗ ರಾಜ್ಯದಲ್ಲಿ ಪ್ರವರ್ಧಮಾನಕ್ಕೆ ಬರುತ್ತಿದ್ದ ಸರ್ಕಾರಿ ಗುತ್ತಿಗೆ ಮಾಫಿಯಾದಲ್ಲಿ ಗುರುತಿಸಿಕೊಳ್ಳಲು ಗ್ಯಾಂಗ್ ರಚಿಸಿ ಅಪರಾಧ ಜಗತ್ತಿಗೆ ಪ್ರವೇಶಿಸಿದರು. 1978ರಲ್ಲಿ ಕೇವಲ 15 ವರ್ಷದವನಾಗಿದ್ದಾಗ ಅನ್ಸಾರಿ ಅಪರಾಧ ಜಗತ್ತಿಗೆ ಕಾಲಿಟ್ಟಿದ್ದ. ಗಾಜಿಪುರದ ಸೈದ್ ಪುರ ಪೊಲೀಸ್ ಠಾಣೆಯಲ್ಲಿ ಮೊದಲ ಬಾರಿಗೆ ಇವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿತ್ತು.
ಸುಮಾರು ಒಂದು ದಶಕದ ನಂತರ, 1986 ರಲ್ಲಿ ಅವರು ಗುತ್ತಿಗೆ ಮಾಫಿಯಾ ವಲಯದಲ್ಲಿ ಚಿರಪರಿಚಿತ ಮುಖವಾಗುವ ಹೊತ್ತಿಗೆ, ಗಾಜಿಪುರದ ಮುಹಮ್ಮದ್ ಪೊಲೀಸ್ ಠಾಣೆಯಲ್ಲಿ ಅವರ ವಿರುದ್ಧ ಮತ್ತೊಂದು ಕೊಲೆ ಪ್ರಕರಣ ದಾಖಲಾಗಿತ್ತು. ಮುಂದಿನ ದಶಕದಲ್ಲಿ ಅನ್ಸಾರಿ ಅಪರಾಧ ಜಗತ್ತಿನ ಶಕ್ತಿಯಾಗಿ ಮಾರ್ಪಟ್ಟರು. ಅಷ್ಟೊತ್ತಿಗೆ ಅವರ ವಿರುದ್ಧ ಕನಿಷ್ಠ 14 ಗಂಭೀರ ಆರೋಪದ ಪ್ರಕರಣಗಳು ದಾಖಲಾಗಿದ್ದವು. ಆದಾಗ್ಯೂ ಅವರ ಕ್ರಿಮಿನಲ್ ಗ್ರಾಫ್ ರಾಜಕೀಯ ಪ್ರವೇಶಕ್ಕೆ ಅಡ್ಡಿಯಾಗಲಿಲ್ಲ.
ಅನ್ಸಾರಿ ಅವರು 1996 ರಲ್ಲಿ ಮೌ ಕ್ಷೇತ್ರದಿಂದ ಬಹುಜನ ಸಮಾಜ ಪಕ್ಷದ ಟಿಕೆಟ್ ನಲ್ಲಿ ಯುಪಿ ವಿಧಾನಸಭೆಗೆ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದರು. ನಂತರ 2002 ಮತ್ತು 2007 ರ ವಿಧಾನಸಭಾ ಚುನಾವಣೆಗಳಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಮತ್ತೆ ಜಯಶಾಲಿಯಾದರು. 2012 ರಲ್ಲಿ ಅವರು ತಮ್ಮ ಸ್ವಂತದ ಕ್ವಾಮಿ ಏಕ್ತಾ ದಳ (ಕ್ಯೂಇಡಿ) ಹೆಸರಿನ ಪಕ್ಷ ಕಟ್ಟಿ ಮೌ ಕ್ಷೇತ್ರದಿಂದ ಮತ್ತೆ ಗೆದ್ದರು. ಅವರು 2017 ರಲ್ಲಿ ಮತ್ತೆ ಮೌನಿಂದ ಗೆದ್ದರು. 2022 ರಲ್ಲಿ ಅವರು ಸ್ಪರ್ಧಿಸಲಿಲ್ಲ. ಆದರೆ ಸುಹೇಲ್ ದೇವ್ ಭಾರತೀಯ ಸಮಾಜ ಪಕ್ಷದ ಟಿಕೆಟ್ ಪಡೆದ ಅವರ ಪುತ್ರ ಅಬ್ಬಾಸ್ ಅನ್ಸಾರಿ 2022ರಲ್ಲಿ ಇದೇ ಕ್ಷೇತ್ರದಿಂದ ಶಾಸಕನಾಗಿ ಆಯ್ಕೆಯಾದರು.
2005 ರಿಂದೀಚೆಗೆ 28 ಕ್ರಿಮಿನಲ್ ಪ್ರಕರಣ:2005ರಿಂದ ಸಾಯುವವರೆಗೂ ಅನ್ಸಾರಿಯನ್ನು ಉತ್ತರ ಪ್ರದೇಶ ಮತ್ತು ಪಂಜಾಬ್ ನ ವಿವಿಧ ಜೈಲುಗಳಲ್ಲಿ ಇರಿಸಲಾಗಿತ್ತು. 2005 ರಿಂದೀಚೆಗೆ ಅವರ ವಿರುದ್ಧ ಕೊಲೆ ಸೇರಿದಂತೆ 28 ಕ್ರಿಮಿನಲ್ ಪ್ರಕರಣಗಳು ಹಾಗೂ ಉತ್ತರಪ್ರದೇಶದ ಗ್ಯಾಂಗ್ ಸ್ಟರ್ ಕಾಯ್ದೆಯಡಿ ಏಳು ಪ್ರಕರಣಗಳು ದಾಖಲಾಗಿವೆ.
37 ವರ್ಷಗಳ ಹಿಂದಿನ ಪ್ರಕರಣದಲ್ಲಿ ಇತ್ತೀಚೆಗಷ್ಟೇ ಶಿಕ್ಷೆ:ಸೆಪ್ಟೆಂಬರ್ 2022 ರಿಂದ ಎಂಟು ಕ್ರಿಮಿನಲ್ ಪ್ರಕರಣಗಳಲ್ಲಿ ಶಿಕ್ಷೆಗೊಳಗಾದ ಅವರು ವಿವಿಧ ನ್ಯಾಯಾಲಯಗಳಲ್ಲಿ 21 ಪ್ರಕರಣಗಳಲ್ಲಿ ವಿಚಾರಣೆ ಎದುರಿಸುತ್ತಿದ್ದರು. ಸುಮಾರು 37 ವರ್ಷಗಳ ಹಿಂದೆ ಮೋಸದಿಂದ ಶಸ್ತ್ರಾಸ್ತ್ರ ಪರವಾನಗಿ ಪಡೆದ ಪ್ರಕರಣದಲ್ಲಿ ಅನ್ಸಾರಿ ಅವರಿಗೆ ವಾರಾಣಸಿ ಜನಪ್ರತಿನಿಧಿಗಳ ನ್ಯಾಯಾಲಯವು ಈ ತಿಂಗಳ ಆರಂಭದಲ್ಲಿ ಜೀವಾವಧಿ ಶಿಕ್ಷೆ ಮತ್ತು 2.02 ಲಕ್ಷ ರೂ. ದಂಡ ವಿಧಿಸಿತ್ತು. ಕಳೆದ 18 ತಿಂಗಳಲ್ಲಿ ಯುಪಿಯ ವಿವಿಧ ನ್ಯಾಯಾಲಯಗಳು ಅವರಿಗೆ ಶಿಕ್ಷೆ ವಿಧಿಸಿದ ಎಂಟನೇ ಪ್ರಕರಣ ಇದಾಗಿದೆ ಮತ್ತು ಎರಡನೇ ಪ್ರಕರಣದಲ್ಲಿ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.
ಜನವರಿ 22, 1997 ರಂದು ಬಿಜೆಪಿ ಮುಖಂಡ ಮತ್ತು ಕಲ್ಲಿದ್ದಲು ವ್ಯಾಪಾರಿ ನಂದ ಕಿಶೋರ್ ರುಂಗ್ಟಾ ಅವರ ಅಪಹರಣ ಮತ್ತು ಕೊಲೆಗೆ ಸಂಬಂಧಿಸಿದ ಪ್ರಕರಣದಲ್ಲಿ ಸಾಕ್ಷಿ ನುಡಿಯದಂತೆ ಮಹಾವೀರ್ ಪ್ರಸಾದ್ ರುಂಗ್ಟಾ ಅವರಿಗೆ ಕೊಲೆ ಬೆದರಿಕೆ ಹಾಕಿದ್ದಕ್ಕಾಗಿ ವಾರಣಾಸಿಯ ಜನಪ್ರತಿನಿಧಿಗಳ ನ್ಯಾಯಾಲಯವು ಅನ್ಸಾರಿಗೆ ಅವರಿಗೆ ಐದು ವರ್ಷ ಆರು ತಿಂಗಳು ಅವಧಿಯ ಜೈಲು ಶಿಕ್ಷೆ ವಿಧಿಸಿತ್ತು.